ಶಿರಸಿ ಮಾರಿಕಾಂಬಾ ದೇವಿ ಅದ್ದೂರಿ ಜಾತ್ರೆಗೆ ಸಿದ್ಧತೆ ಶುರು; ಮಾ.15 ರಿಂದ 23 ರ ವರೆಗೆ ನಡೆಯಲಿದೆ ಉತ್ಸವ

| Updated By: preethi shettigar

Updated on: Mar 14, 2022 | 2:46 PM

Sirsi Marikamba Devi jatre: ಮಾರ್ಚ್ 15ರ ಮಧ್ಯಾಹ್ನ 12.21 ರಿಂದ 12.33ರ ಒಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.18 ರಿಂದ 11.27ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 16 ರಂದು ಬೆಳಿಗ್ಗೆ 7.04 ಗಂಟೆಯಿಂದ ದೇವಿಯ ರಥಾರೋಹಣ ನಡೆಯಲಿದ್ದು, 8.36ರ ಹೊತ್ತಿಗೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಜರುಗುವುದು.

ಶಿರಸಿ ಮಾರಿಕಾಂಬಾ ದೇವಿ ಅದ್ದೂರಿ ಜಾತ್ರೆಗೆ ಸಿದ್ಧತೆ ಶುರು; ಮಾ.15 ರಿಂದ 23 ರ ವರೆಗೆ ನಡೆಯಲಿದೆ ಉತ್ಸವ
ಶಿರಸಿ ಮಾರಿಕಾಂಬಾ ದೇವಿ
Follow us on

ಉತ್ತರ ಕನ್ನಡ: ದಕ್ಷಿಣ ಭಾರತದಲ್ಲಿ ಜಾಗೃತಿ ಪೀಠದಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದ್ದು, ರಾಜ್ಯದಲ್ಲೇ ಅತೀ ದೊಡ್ಡ ಜಾತ್ರೆ(Fair) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಜಾತ್ರೆಯ ಧಾರ್ಮಿಕ ವಿಧಾನಗಳು ಪ್ರಾರಂಭವಾಗಿದೆ. ಕೊರೊನಾ (Corona) ನಿಯಮಗಳ ಸಡಿಲಿಕೆ ನಂತರ ರಾಜ್ಯದಲ್ಲೇ ಅತೀ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಡೆದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಜಾತ್ರೆಯು ಇದೆ ಮಾ.15 ರಿಂದ 23 ರ ವರೆಗೆ ನಡೆಯಲಿದೆ. ಈ ಬಾರಿ ಜಾತ್ರೆಗೆ ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಲಕ್ಷಾಂತರ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಮಾರಿಕಾಂಬಾ ದೇವರ(Marikamba Devi) ಜಾತ್ರೆಯ ಅಂಕೆಹಾಕುವ ಶಾಸ್ತ್ರ, ಮರಕಡಿಯುವ ಶಾಸ್ತ್ರಗಳು ಪೂರ್ಣಗೊಂಡಿದ್ದು, ಬಲಿ ಕೋಣದ ಮೆರವಣಿಗೆ ನೆಡೆದಿದೆ. ದೇವಿಯು ಗದ್ದುಗೆಗೆ ಕೂರಿಸಲು ಸಿದ್ಧತೆಯಾಗಿದೆ.

ಮಾರ್ಚ್ 15ರ ಮಧ್ಯಾಹ್ನ 12.21 ರಿಂದ 12.33ರ ಒಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.18 ರಿಂದ 11.27ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 16 ರಂದು ಬೆಳಿಗ್ಗೆ 7.04 ಗಂಟೆಯಿಂದ ದೇವಿಯ ರಥಾರೋಹಣ ನಡೆಯಲಿದ್ದು, 8.36ರ ಹೊತ್ತಿಗೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಜರುಗುವುದು. ಮಾ.17 ರಿಂದ ಭಕ್ತಾದಿಗಳ ಸೇವೆಗೆ ಅವಕಾಶ ಮಾಡಿಕೊಡಲಾಗಿದ್ದು, ಮಾರ್ಚ್ 23 ರಂದು ಬೆಳಿಗ್ಗೆ 9.33 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಯುಗಾದಿಯಂದು ದೇವಿಯ ಪುನರ್‌ ಪ್ರತಿಷ್ಠೆ ನಡೆಯಲಿದೆ. ಹೀಗಾಗಿ ಜಿಲ್ಲಾಡಳಿತ ಕೂಡ ಬರುವ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದ್ದಾರೆ.

ಇನ್ನು ರಾಜ್ಯದ ಮೂಲೆ ಮೂಲೆಯಿಂದ ಬರುವ ಲಕ್ಷಾಂತರ ಭಕ್ತರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ 700 ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದು, ಎರಡು ಕೆ.ಎಸ್.ಆರ್.ಪಿ ತುಕಡಿ, ನಾಲ್ಕು ಡಿ.ಆರ್ ತುಕಡಿಯನ್ನು ನಿಯೋಜನೆ ಮಾಡಿದೆ. ನಗರದಾಧ್ಯಂತ 100 ಸಿಸಿ ಕ್ಯಾಮರಗಳನ್ನು ಅಲವಡಿಸಿದ್ದು. ಹೆಲ್ಪ್ ಲೈನ್ ಸಹ ತೆರೆಯಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ ಎಂದು ಉತ್ತರಕನ್ನಡ ಡಿಎಸ್​ಪಿ ಸುಮನ್ ತಿಳಿಸಿದ್ದಾರೆ.

ಕಳೆದ ವರ್ಷ ಜಾತ್ರೆ ಮಹೊತ್ಸವವು ಕೊರೊನಾದಿಂದಾಗಿ ಕಳೆಗುಂದಿತ್ತು. ಆದರೆ ಈ ಬಾರಿ ಕೊರೊನಾ ಕಡಿಮೆಯಾಗಿದ್ದು, ನಿಯಮಗಳನ್ನು ಸಹ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಈ ಬಾರಿ ಶಿರಸಿ ಮಾರಿಕಾಂಬಾ ಜಾತ್ರೆಯು ಕಳೆಕಟ್ಟಿದ್ದು, ದೇವಿ ಮೆರವಣಿಗೆ ಹಾಗೂ ರಥೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಧಾರ್ಮಿಕ ವಿಧಿಗಳು ಸಾಂಗವಾಗಿ ನೆರವೇರುತ್ತಿದೆ.

ವರದಿ: ವಿನಾಯಕ ಬಡಿಗೇರ

ಇದನ್ನೂ ಓದಿ:

ದಾವಣಗೆರೆ: ದುರ್ಗಾಂಬಿಕಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ

ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢರ ಜಾತ್ರೆ ಸಂಭ್ರಮ; 16 ಲೀಟರ್ ಹಾಲು ಕರೆದು ಬಹುಮಾನ ಗೆದ್ದ ರೈತ