ಸ್ವತಃ ಕೆಸರು ಗದ್ದೆಗಿಳಿದು ಭತ್ತ ನಾಟಿ ಮಾಡಿದ ಉತ್ತರಕನ್ನಡ ಜಿಲ್ಲಾಧಿಕಾರಿ
ನಾಟಿ ಕಾರ್ಯಕ್ಕೆ ಪಂಚೆ- ಶಲ್ಯದೊಂದಿಗೆ ಆಗಮಿಸಿದ ಜಿಲ್ಲಾಧಿಕಾರಿ, ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನ ಕೈಗೊಂಡರು. ನಂತರ ಕೆಸರಿನ ಗದ್ದೆಗಿಳಿದು, ಸಸಿ ಮಡಿಗಳನ್ನು ಹಿಡಿದು ನಾಟಿ ಕಾರ್ಯ ಮಾಡಿದರು.
ಕಾರವಾರ: ಪ್ರವಾಹ, ಭೂಕುಸಿತಗಳ ನಡುವೆ ಸದ್ಯ ಕಂಗಾಲಾಗಿರುವ ಉತ್ತರ ಕನ್ನಡದ (Uttara Kannada) ಕೃಷಿಕ ಸಮುದಾಯದ ನಡುವೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗದ್ದೆಗಿಳಿದು ನಾಟಿ ಮಾಡಿದ್ದಾರೆ. ಈಮೂಲಕ ಕೃಷಿಕರ ಕಷ್ಟ ಸುಖಗಳನ್ನು ಅರಿಯುವ ಯತ್ನ ನಡೆಸಿದ್ದಾರೆ. ಜತೆಗೆ ಕೃಷಿಯೆಡೆಗೆ ಹೆಚ್ಚಿನ ಜನರು ಆಕರ್ಷಿತರಾಗುವಂತೆ ಪ್ರೇರೇಪಿಸುವ ಪ್ರಯತ್ನ ಮಾಡಿದ್ದಾರೆ. ಬಿಳಿ ಲುಂಗಿ, ಕೇಸರಿ ಅಂಗಿ, ಶಲ್ಯ ಧರಿಸಿ ಪಕ್ಕಾ ಗ್ರಾಮೀಣ ಶೈಲಿಯಲ್ಲಿ ಕೆಸರು ಗದ್ದೆಗಿಳಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಇತರ ಅಧಿಕಾರಿಗಳು ಭಾನುವಾರ ಭತ್ತದ ಸಸಿಗಳನ್ನು ನಾಟಿ ಮಾಡಿದರು. ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಿದ್ದರದಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆ.ಡಿ.ಪೆಡ್ನೇಕರ್ ಅವರ ಜಮೀನಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಡಿಸಿ ಮುಲ್ಲೈ ಮುಗಿಲನ್, ಎಡಿಸಿ ಕೃಷ್ಣಮೂರ್ತಿ ಎಚ್.ಕೆ., ಎಸಿ ವಿದ್ಯಾಶ್ರೀ ಚಂದರಗಿ, ತಹಸೀಲ್ದಾರ್ ನಿಶ್ಚಲ ನರೋನಾ ಭಾಗವಹಿಸಿ, ಕೃಷಿ ಕಾರ್ಯದ ಅನುಭವ ಪಡೆದರು. ಸಸಿಮಡಿಗೆ ಪೂಜೆ ಮಾಡಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸಸಿ ನಾಟಿ ಮಾಡಿದರು.
ಜಿಲ್ಲಾ ಕೇಂದ್ರದ ಪತ್ರಕರ್ತರು ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಾಟಿ ಕಾರ್ಯಕ್ಕೆ ಪಂಚೆ- ಶಲ್ಯದೊಂದಿಗೆ ಆಗಮಿಸಿದ ಜಿಲ್ಲಾಧಿಕಾರಿ, ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನ ಕೈಗೊಂಡರು. ನಂತರ ಕೆಸರಿನ ಗದ್ದೆಗಿಳಿದು, ಸಸಿ ಮಡಿಗಳನ್ನು ಹಿಡಿದು ನಾಟಿ ಕಾರ್ಯ ಮಾಡಿದರು. ಕೃಷಿ, ಗದ್ದೆ ಕೆಲಸಗಳಿಗೆ ಹಿಂದೇಟು ಹಾಕುವ ಅಧಿಕಾರಿಗಳ ವರ್ಗದ ಸ್ಥಾಪಿನ ಮನಸ್ಥಿತಿಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಗದ್ದೆಗಿಳಿದು ನಾಟಿ ಕಾರ್ಯ ಮಾಡುವ ಮೂಲಕ ಮಾದರಿಯಾದರು. ಪತ್ರಿಕಾ ದಿನಾಚರಣೆಯನ್ನೂ ಈ ರೀತಿ ಆಯೋಜಿಸಿ ಜಿಲ್ಲಾ ಕೇಂದ್ರದ ಪತ್ರಕರ್ತರು ಆದರ್ಶವೆನಿಸಿಕೊಂಡರು.
ಹಲವು ಸವಾಲುಗಳ ನಡುವೆ 50 ಎಕರೆ ಭತ್ತದ ಕೃಷಿ ಮಾಡಿ ಸಾಧನೆ ಮಾಡಿದ ಹಳಗಾದ ಧೋಲ ಗ್ರಾಮದ ಪ್ರಗತಿಪರ ರೈತ ಯಶವಂತ ಉಂಡೇಕರ್ ಹಾಗೂ ಸಿದ್ದರ ಗ್ರಾಮದ ಹಿರಿಯ ಕೃಷಿಕ, ನಿವೃತ್ತ ಶಿಕ್ಷಕ ಅನಂತ ಶಾಬು ನಾಯ್ಕ ದಂಪತಿಯನ್ನು ಸಂಘದಿಂದ ಸನ್ಮಾನಿಸಲಾಯಿತು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪತ್ರಕರ್ತರು ಸಮಾಜಕ್ಕೆ ಅಂಟಿದ ರೋಗಗಳಿಗೆ ಚಿಕಿತ್ಸೆ ಕೊಡುವ ವೈದ್ಯರಿದ್ದಂತೆ. ಸಮಾಜದ ಕೆಲ ಕೆಡುಕುಗಳ ಮೂಲ ಅರಿತು ಜನರಿಗೆ ನೋವೂ ಆಗದಂತೆ, ಕಾಯಿಲೆಯೂ ಗುಣವಾಗುವಂತೆ ಚುಚ್ಚುಮದ್ದು ನೀಡುವ ಸವಾಲಿನ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಗಳು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಿವೆ ಎಂದರು. ಇದೇ ವೇಳೆ ಸಾಧನೆಗೈದ ಪತ್ರಕರ್ತರಿಗೆ ಟ್ಯಾಗೋರ್ ಪ್ರಶಸ್ತಿಯನ್ನು ವಿತರಿಸಲಾಯಿತು.
ಇದನ್ನೂ ಓದಿ:
Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?
Uttara Kannada Flood: ಕಳಚೆಯ ಕೂಸುಗಳ ಪುನರ್ವಸತಿ: ಆಡಳಿತದ ಮುಂದಿದೆ ಕಳಚೆ ಕಲ್ಲಿನಷ್ಟೇ ಬೃಹತ್ ಸವಾಲು
(Uttara Kannada DC himself planted paddy in the mud)
Published On - 11:35 pm, Sun, 1 August 21