ಉತ್ತರ ಕನ್ನಡ: ಕೈ ಕೊಟ್ಟ ಮುಂಗಾರು ಪೂರ್ವ ಮಳೆ; ಬತ್ತಿದ ಕಾಳಿ ನದಿ ಹಿನ್ನೀರು
ರಾಜ್ಯದ ವಿವಿಧೆಡೆ ಮುಂಗಾರು ಪೂರ್ವದ ಮಳೆ ಉತ್ತಮವಾಗಿ ಸುರಿಯುತ್ತಿದೆ. ಆದ್ರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಈವರೆಗೂ ನಿರೀಕ್ಷಿತವಾಗಿ ಮಳೆ ಬಿದ್ದಿಲ್ಲ. ಹೀಗಾಗಿ ಇಲ್ಲಿನ ನದಿಗಳಲ್ಲಿ ಜಲಮೂಲ ಕಾಣಿಸುತ್ತಿಲ್ಲ. ಅದರಲ್ಲೂ ಜಲವಿದ್ಯುತ್ ಯೋಜನೆಗೆ ಪೂರಕವಾಗಿರುವ ಕಾಳಿ ನದಿಯಲ್ಲಿ ನೀರಿಲ್ಲದೇ ಸಂಪೂರ್ಣ ಬತ್ತಿಹೋಗಿದೆ. ಇದು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.
ಉತ್ತರ ಕನ್ನಡ, ಜೂ.05: ಜಿಲ್ಲೆಯ ಕಾಳಿ ನದಿ(Kali River), ವಿದ್ಯುತ್ ಉತ್ಪಾದನೆಗೆ ಹೆಸರಾದ ನದಿಯಾಗಿದೆ. ಕಾಳಿ ಹಿನ್ನೀರು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾದರೆ ಮಾತ್ರ ಸುತ್ತಮುತ್ತಲ ಪ್ರದೇಶದ ಊರುಗಳಿಗೆ ಅನುಕೂಲವಾಗಲಿದೆ. ಆದ್ರೆ, ಈ ಬಾರೀ ಅಧಿಕ ತಾಪಮಾನದಿಂದಾಗಿ ನದಿಯಲ್ಲಿನ ನೀರು ಬತ್ತಿ ಹೋಗಿವೆ. ಅಲ್ಲದೇ ಕಳೆದ ವರ್ಷ ಸಹ ಈ ಭಾಗದಲ್ಲಿ ಮಳೆ ಕಡಿಮೆಯಾಗಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ನದಿಯಲ್ಲಿ ನೀರು ಸಂಗ್ರಹವಾಗಿಲ್ಲ. ಈ ಬಾರಿಯೂ ಮುಂಗಾರು ಪೂರ್ವದ ಮಳೆ(Pre monsoon rain) ಆಗದೇ ಇರುವುದರಿಂದ ನದಿಯಲ್ಲಿ ನೀರು ಕಾಣಿಸುತ್ತಿಲ್ಲ. ಹೀಗಾಗಿ ಕಾಳಿ ನದಿಯ ಹಿನ್ನೀರು ಪ್ರದೇಶ ಖಾಲಿ ಖಾಲಿ ಕಾಣಿಸುತ್ತಿವೆ. ಇಲ್ಲಿ ಮಳೆ ಅಧಿಕವಾದಲ್ಲಿ ಮಾತ್ರ ಜನ-ಜಾನುವಾರು ಹಾಗೂ ಸುತ್ತಮುತ್ತಲ ಭಾಗದ ನಾಗರಿಕರಿಗೆ ಜಲಮೂಲ ಸಿಗಲಿದೆ.
ಕಾಳಿ ನದಿಗೆ 1980ರ ದಶಕದಲ್ಲಿ ಸೂಪಾ ಎಂಬ ಗ್ರಾಮದ ಬಳಿ ಎರಡು ಗುಡ್ಡಗಳ ನಡುವೆ ನದಿ ಹರಿಯುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲಾಗಿತ್ತು. 1987ರಲ್ಲಿ ಸುರಿದ ಭಾರೀ ಮಳೆಗೆ ಅಣೆಕಟ್ಟು ಭರ್ತಿಯಾಗಿತ್ತು. ಸೂಪಾ ಜಲಾಶಯದಲ್ಲಿ ಸುಮಾರು 170 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ವಿದ್ಯುತ್ ಉತ್ಪಾದಿಸಿದ ಬಳಿಕ ನೀರನ್ನು ಹೊರಬಿಡಲಾಗುತ್ತದೆ. ಅಣೆಕಟ್ಟಿನ ಎತ್ತರ 564.09 ಮೀಟರ್ ಆಗಿದ್ದು, 561.40 ಮೀಟರ್ ನೀರು ತುಂಬಿದ್ರೆ ಹೊರಬಿಡಲಾಗುತ್ತೆ. 2019ರಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದರಿಂದ 15 ದಿನಗಳ ಕಾಲ ನಿರಂತರವಾಗಿ ನೀರು ಹೊರಬಿಡಲಾಗಿತ್ತು.
ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ
ಆದರೀಗ ಜಲಾಶಯದಲ್ಲಿ ನೀರಿಲ್ಲ. ಹೀಗಾಗಿ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿವೆ. ಸಾಮಾನ್ಯವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ, ಉತ್ತರಕನ್ನಡ ಜಿಲ್ಲೆಯ ಜೋಯಿಡಾ, ದಾಂಡೇಲಿ ತಾಲೂಕಿನಲ್ಲಿ ಮಳೆ ಸುರಿದರೆ ಕಾಳಿ ನದಿಯಲ್ಲಿ ನೀರು ಸಂಗ್ರಹವಾಗುತ್ತದೆ. ಕಳೆದ ಬಾರಿಯೂ ಮಳೆಯ ಕೊರತೆಯಾಗಿತ್ತು. ಮುಂಗಾರು ಪೂರ್ವದ ಮಳೆಯೂ ಸುರಿದಿಲ್ಲ. ಹೀಗಾಗಿ ಅಣೆಕಟ್ಟು ಖಾಲಿಖಾಲಿಯಾಗಿವೆ. ಒಟ್ಟಿನಲ್ಲಿ ಕಾಳಿ ನದಿಯಲ್ಲಿರುವ ಐದು ಅಣೆಕಟ್ಟುಗಳಿಂದ ಒಟ್ಟು 1270 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅಣೆಕಟ್ಟು ಸಂಪೂರ್ಣ ಭರ್ತಿಯಾದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತೆ. ಇಲ್ಲದಿದ್ದಲ್ಲಿ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವುದರ ಜೊತೆಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:01 pm, Wed, 5 June 24