ಉತ್ತರ ಕನ್ನಡ: ಸಮುದ್ರದಲ್ಲಿ ಮುಳಗ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನ ರಕ್ಷಣೆ
ಈಜು ಬಾರದೆ ಸಮುದ್ರದಲ್ಲಿ ಮುಳುಗುತ್ತಿದ್ದ ಕಾರ್ಮಿಕನನ್ನು ಲೈಫ್‌ಗಾರ್ಡ್ ಹಾಗೂ ವಾಟರ್‌ಸ್ಪೋರ್ಟ್ಸ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆದಿದೆ. ಇಂದು ಭಾನುವಾರ ರಜೆ ಹಿನ್ನೆಲೆ ಈಜಲು ಕಡಲತೀರಕ್ಕೆ ಬಂದಿದ್ದ. ಈ ವೇಳೆ ದುರ್ಘಟನೆ ನಡೆದಿದ್ದು, ಕೂಡಲೇ ಜೆಟ್‌ಸ್ಕೀ ಮೂಲಕ ತೆರಳಿ ಕಾರ್ಮಿಕನನ್ನು ರಕ್ಷಿಸಿದ್ದಾರೆ.
ಉತ್ತರ ಕನ್ನಡ, ಮೇ.12: ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ(Rabindranath Tagore Beach) ಈಜು ಬಾರದೆ ಸಮುದ್ರದಲ್ಲಿ ಮುಳುಗುತ್ತಿದ್ದ ಕಾರ್ಮಿಕನನ್ನು ಲೈಫ್‌ಗಾರ್ಡ್ ಹಾಗೂ ವಾಟರ್‌ಸ್ಪೋರ್ಟ್ಸ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದವನಾದ ಕಾರ್ಮಿಕ ಬಬ್ಲು ಶೇನ್, ಕಾರವಾರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಇಂದು ಭಾನುವಾರ ರಜೆ ಹಿನ್ನೆಲೆ ಈಜಲು ಕಡಲತೀರಕ್ಕೆ ಬಂದಿದ್ದ. ಈ ವೇಳೆ ದುರ್ಘಟನೆ ನಡೆದಿದ್ದು, ಕೂಡಲೇ ಜೆಟ್‌ಸ್ಕೀ ಮೂಲಕ ತೆರಳಿ ಕಾರ್ಮಿಕನನ್ನು ರಕ್ಷಿಸಿದ್ದಾರೆ.
ಸ್ನೇಹಿತರು ಹಾಕಿದ ಸವಾಲಿಗೆ ಜೋಶ್‌ನಲ್ಲಿ ಕೆರೆಗೆ ಹಾರಿದ ಟೆಕ್ಕಿ ನೀರುಪಾಲು
ಚಿಕ್ಕಬಳ್ಳಾಪುರ: ನಿನ್ನೆ(ಮೇ.11) ಮಧ್ಯಾಹ್ನ ನಗರದ ವಾಟದಹೊಸಳ್ಳಿ ಕೆರೆಯಲ್ಲಿ ಈಜಲು ಹೋದ ಟೆಕ್ಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿನಯ್ ರಮೇಶ್ (42) ಮೃತ ರ್ದುದೈವಿ. ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಇಂದು(ಮೇ.12) ಟೆಕ್ಕಿಯ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಮೃತ ವಿನಯ್ ರಮೇಶ್, ವಿಮಾನದಲ್ಲಿ ಚೆನ್ನೈ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ನೇರವಾಗಿ ಸ್ನೇಹಿತರೊಟ್ಟಿಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಪ್ರಯಾಣದಿಂದ ಬಳಲಿದ್ದ ವಿನಯ್ ಈಜಲು ಕೆರೆಗೆ ಇಳಿದಾಗ, ಈಜುವ ಚಾಲೆಂಜ್ ಕಟ್ಟಿದ್ದರು. ಈ ವೇಳೆ ಈಜುವಾಗ ಸುಸ್ತಾಗಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜತೆಗೆ ಇದ್ದ ಸ್ನೇಹಿತರು ಗಾಬರಿಯಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ 24 ಗಂಟೆ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ನಿಯಂತ್ರಣ ತಪ್ಪಿ ಕಾರು ಪಲ್ಟಿ, ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವು
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಕಣಿವೇನಹಳ್ಳಿ ಗೇಟ್ ಬಳಿ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿದ್ದು, ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಶಿಕ್ಷಕರ ಸ್ಥಿತಿ ಗಂಭೀರವಾಗಿದೆ. ಪಾವಗಡ ಸರ್ಕಾರಿ ಪ್ರೌಢಶಾಲೆ ಪ್ರಾಂಶುಪಾಲ ಧನಂಜಯ(58) ಹಾಗೂ ಗೌಡೇಟಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣ(49) ಮೃತರು. ಇನ್ನುಳಿದ ಶಿಕ್ಷಕರಾದ ನರಸಿಂಹ, ವೆಂಕಟಾಚಲಪತಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇವರು ತುಮಕೂರಿನಲ್ಲಿ ಮದುವೆ ಮುಗಿಸಿ ವಾಪಸಾಗುವಾಗ ಅಪಘಾತ ಸಂಭವಿಸಿದ್ದು, ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ; ವಾಟರ್ ಸ್ಪ್ರೇ ಮಾಡುವ ಮೂಲಕ ರಕ್ಷಣೆಗೆ ಮುಂದಾದ ರೈತ
ವಿದ್ಯುತ್ ತಂತಿ ತಗುಲಿ 70ಸಾವಿರ ಬೆಲೆಬಾಳುವ ಹಸು ಸಾವು
ಬೆಂಗಳೂರು: ಮಲ್ಲಸಂದ್ರದಲ್ಲಿ ವಿದ್ಯುತ್ ತಂತಿ ತಗುಲಿ 70ಸಾವಿರ ಬೆಲೆಬಾಳುವ ಹಸುವೊಂದು ಸಾವನ್ನಪ್ಪಿದೆ. ಇದಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹೇಶ್ ಎಂಬುವವರಿಗೆ ಸೇರಿದ ಹಸು ಆಗಿದ್ದು, ಮೇಯಿಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಇನ್ನು ಈ ವಿದ್ಯುತ್ನ್ನು ಜಿಯೋ ಕಂಪನಿಯ ಮೊಬೈಲ್ ಟವರ್ಗೆ ಸಂಪರ್ಕ ಪಡೆಯಲಾಗಿತ್ತು. ಆದರೆ ತಡೆಗೋಡೆ ನಿರ್ಮಿಸಿದೆ, ಬೇಕಾಬಿಟ್ಟಿ ವಿದ್ಯುತ್ ಕನೆಕ್ಷನ್ನಿಂದ ಈ ಅವಘಡ ಸಂಭವಿಸಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Sun, 12 May 24