ಕರಾವಳಿ ಭಾಗದಲ್ಲಿ ಉಂಟಾದ ಮರಳಿನ ಅಭಾವ: ಸದ್ದಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಸಾಗಾಟ ದಂಧೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 27, 2023 | 9:41 PM

ಉತ್ತರಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಆಗಿದ್ದು ಜಿಲ್ಲೆಯಲ್ಲಿ ಮರಳಿನ ಅಭಾವ ಸಹ ಎದುರಾಗಿದೆ. ಇದರ ನಡುವೆ ಸದ್ದಿಲ್ಲದೇ ಅಕ್ರಮವಾಗಿ ಮರಳನ್ನ ಸಾಗಾಟ ಮಾಡುವ ದಂಧೆ ಸಹ ಜೋರಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಕರಾವಳಿ ಭಾಗದಲ್ಲಿ ಉಂಟಾದ ಮರಳಿನ ಅಭಾವ: ಸದ್ದಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಸಾಗಾಟ ದಂಧೆ
ಅಕ್ರಮ ಮರಳು ದಂಧೆ
Follow us on

ಉತ್ತರ ಕನ್ನಡ, ಆಗಸ್ಟ್​ 27: ಕರಾವಳಿ ಭಾಗದಲ್ಲಿ ಸಿ.ಆರ್.ಜೆಡ್ ವಲಯದಲ್ಲಿ ಮರಳನ್ನ (Sand) ತೆಗೆದು ಮಾರಾಟ ಮಾಡುವಂತಿಲ್ಲ ಎನ್ನುವ ಆದೇಶವನ್ನ ರಾಷ್ಟ್ರೀಯ ಹಸಿರು ಪೀಠ ಮಾಡಿತ್ತು. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಆಗಿದೆ. ಆದರೆ ಅನಧಿಕೃತವಾಗಿ ಮರಳನ್ನ ತೆಗೆದು ಕಾಳಸಂತೆಯಲ್ಲಿ ಮಾರಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜೊತೆಗೆ ಸಾಮಾನ್ಯ ಜನರಿಗೆ ಮನೆ ಕಟ್ಟಿಕೊಳ್ಳಲು ಮರಳಿನ ಅಭಾವ ಉಂಟಾಗಿದೆ. ಹೀಗಾಗಿ ಜಿಲ್ಲಾಡಳಿತ ಮರಳಿನ ಕೊರತೆ ನಿಗಿಸುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎನ್ನುವುದು ಜನರ ಒತ್ತಾಸೆ ಆಗಿದೆ.

ಸಿಆರ್‌ಜೆಡ್ ವಲಯದಲ್ಲಿ ಮರಳುಗಾರಿಕೆ ಮಾಡುವುದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ ಒಂದು ವರ್ಷದಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಆಗಿದ್ದು ಜಿಲ್ಲೆಯಲ್ಲಿ ಮರಳಿನ ಅಭಾವ ಸಹ ಎದುರಾಗಿದೆ. ಇದರ ನಡುವೆ ಸದ್ದಿಲ್ಲದೇ ಅಕ್ರಮವಾಗಿ ಮರಳನ್ನ ಸಾಗಾಟ ಮಾಡುವ ದಂಧೆ ಸಹ ಜೋರಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅದರಲ್ಲೂ ಕಾಳಿ ನದಿಯಲ್ಲಿ ಈ ಹಿಂದೆ ಮರಳನ್ನ ತೆಗೆಯಲು ಅವಕಾಶ ನೀಡಿದಾಗ ಹೆಚ್ಚಿನ ಪ್ರಮಾಣದಲ್ಲಿ ಮರಳನ್ನ ಶೇಖರಣೆ ಮಾಡಿ, ಈಗ ರಾತ್ರೋರಾತ್ರಿ ಕದ್ದು ಬೇರೆ ಬೇರೆ ಕಡೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಉತ್ತರ ಕನ್ನಡ: ಮನೆ ಮುಂದೆ ನಿಲ್ಲಿಸಿದ್ದ ಬೈಕ್​ನಲ್ಲಿ ಕಾಳಿಂಗ ಸರ್ಪ; ಇಲ್ಲಿದೆ ರಕ್ಷಣೆಯ ವಿಡಿಯೋ

ಇತ್ತೀಚೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನ ಸಹ ಕಾರವಾರ ಉಪವಿಭಾಗಾಧಿಕಾರಿ ಹಿಡಿದು ಪ್ರಕರಣ ದಾಖಲಿಸಿದ್ದರು. ಈ ಬೆಳವಣಿಗೆಗಳನ್ನ ಗಮನಿಸಿದಲ್ಲಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಪರವಾನಗಿ ಇಲ್ಲದಿರುವುದರಿಂದಲೇ ಅಕ್ರಮವಾಗಿ ಮರಳು ವಹಿವಾಟು ನಡೆಸಲು ಅವಕಾಶವಾದಂತಾಗಿದ್ದು ಅಕ್ರಮಕ್ಕೆ ಕಡಿವಾಣ ಹಾಕುವಂತೆ ಜನ ಒತ್ತಾಯ ಮಾಡುತ್ತಿದ್ದಾರೆ.

ಜಿಲ್ಲೆಯ ಕಾರವಾರ ತಾಲೂಕಿನ ಕಾಳಿ, ಅಂಕೋಲಾ ತಾಲೂಕಿನ ಗಂಗಾವಳಿ, ಕುಮಟಾ ತಾಲೂಕಿನ ಅಘನಾಶಿನಿ ಹಾಗೂ ಹೊನ್ನಾವರ ತಾಲೂಕಿನ ಶರಾವತಿ ನದಿಯಲ್ಲಿ ಮರಳನ್ನು ತೆಗೆಯಲು ಅವಕಾಶ ನೀಡಲಾಗಿತ್ತು. ಸುಮಾರು 100ಕ್ಕೂ ಅಧಿಕ ಮಂದಿ ಲೀಸ್ ಪಡೆದವರು ಮರಳು ತೆಗೆಯುತ್ತಿದ್ದು ಸದ್ಯ ಮರಳುಗಾರಿಕೆ ಬಂದ್ ಆದ ಹಿನ್ನಲೆಯಲ್ಲಿ ಜನರಿಗೆ ಮರಳು ಅವಶ್ಯಕತೆ ಹೆಚ್ಚಾಗಿದೆ. ಈ ಹಿನ್ನಲೆ ಅನಧಿಕೃತವಾಗಿ ಮರಳನ್ನ ತೆಗೆದು ಸಾಗಾಟ ಮಾಡುವ ಕೃತ್ಯಕ್ಕೆ ಇಳಿದಿದ್ದಾರೆ ಎನ್ನುವ ಆರೋಪ ಸಾರ್ವಜನಿಕರದ್ದು.

ಇದನ್ನೂ ಓದಿ: ಶಿರಸಿಯಲ್ಲಿ ಉದ್ಯಮಿ ಮನೆಗೆ ನುಗ್ಗಿ 5 ಲಕ್ಕಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

ಜೊತೆಗೆ ಸಾಮಾನ್ಯ ಜನ ಮನೆ ಕಟ್ಟಿಕೊಳ್ಳಲು ಇತರೆ ಕಾಮಗಾರಿಗಳಿಗೆ ಮರಳಿನ ಅವಶ್ಯಕತೆ ಇದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ತೆಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಮರಳಿನ ಅಭಾವ ಉಂಟಾಗಿದೆ ಇದಕ್ಕೆ ಶೀಘ್ರದಲ್ಲಿ ಪರಿಹಾರ ನೀಡಿ ಎನ್ನುವುದು ಜನರ ಒತ್ತಾಸೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನ ಕೇಳಿದ್ರೆ ಸಿಆರ್‌ಜೆಡ್ ವಲಯದಲ್ಲಿ ಮರಳನ್ನು ತೆಗೆಯಲಿಕ್ಕೆ ಅನುಮತಿ ಇಲ್ಲ. ಜಿಲ್ಲೆಯಲ್ಲಿ ಮರಳಿನ ಅಭಾವ ಇದೆ ಎಂಬುದು ನನ್ನ ಗಮನಕ್ಕೆ ಬಂದಿದೆ ಶೀಘ್ರದಲ್ಲಿ ಅಧಿಕಾರಿಗಳ ಸಭೆ ಕರೆದು ಮರಳು ತೆಗೆಯಲು ಅವಕಾಶ ಇದಿಯಾ ಹಾಗೂ ಮರಳನ್ನು ಹೇಗೆ ತರಿಸುವುದು ಎನ್ನುವುದರ ಬಗ್ಗೆ ಸಭೆ ಮಾಡುತ್ತೆನೆ ಎನ್ನುತ್ತಾರೆ.

ಜನರು ಅಭಿವೃದ್ಧಿ ಕಾರ್ಯಗಳಿಗೆ ಮರಳು ಸಿಗದೇ ಪರದಾಡುತ್ತಿರುವ ಸಂದರ್ಭದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರೋದು ಜೊತೆಗೆ ಕಾಳು ಸಂತೆಯಲ್ಲಿ ಅತೀ ಹೆಚ್ಚಿನ ದರದಲ್ಲಿ ಮರಳು ಮಾರಾಟವಾಗುತ್ತಿದ್ದು ಇದು ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಆದಷ್ಟು ಬೇಗ ಜಿಲ್ಲಾಡಳಿತ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಜನ್ರಿಗೆ ಅನುಕೂಲವಾಗುವಂತೆ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:41 pm, Sun, 27 August 23