ಶಿರಸಿ: ಹೆಸರಿಗೆ ಇದು ಸ್ಪೀಕರ್ ಕ್ಷೇತ್ರ. ಆದರೆ, ಸೇತುವೆ ಇಲ್ಲದ ಇಲ್ಲಿನ ಜನರ ಬದುಕು ಅತಂತ್ರ! ಮಳೆಗಾಲ ಬಂದಾಗ ಇಲ್ಲಿನ ಜನರು ಗೋಳಿಟ್ಟರೂ ಕೇಳೋರಿಲ್ಲ! ಈ ಕ್ಷೇತ್ರದ ಜನರ ಅರಣ್ಯರೋಧನೆ ಸರ್ಕಾರಕ್ಕೆ ಕೇಳೋದು ಯಾವಾಗ? ಕನಿಷ್ಠ ಮೂಲಭೂತ ಸೌಲಭ್ಯವೂ ಇಲ್ಲದ ಈ ಗ್ರಾಮ ಬೇರೆ ಯಾವುದೂ ಅಲ್ಲ; ಹಗರುಮನೆ ಮತ್ತು ಮೇಲ್ಗದ್ದೆ ಗ್ರಾಮ. ಈ ಗ್ರಾಮದಲ್ಲಿ ಮಳೆಗಾಲದಲ್ಲಿ ಹೊಳೆ ದಾಟಲು ಸೇತುವೆ ಇಲ್ಲದೆ ಪ್ರತಿವರ್ಷವೂ ಜನರು ಪರದಾಡುತ್ತಾರೆ.
ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದ ಹಗರುಮನೆ ಮತ್ತು ಮೇಲ್ಗದ್ದೆ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದ ಗ್ರಾಮವಾಗಿದೆ. ವಿಧಾನಸಭೆಯಲ್ಲಿ ಕುಳಿತುಕೊಂಡು ಅಭಿವೃದ್ಧಿಯ ಬಗ್ಗೆ ಪ್ರಶ್ನಿಸುವ, ಚರ್ಚಿಸುವ ಸಭಾಪತಿಯವರ ಸ್ವಕ್ಷೇತ್ರದ ಗ್ರಾಮದಲ್ಲೇ ಅಭಿವೃದ್ಧಿ ಮರೀಚಿಕೆಯಾಗಿರುವುದು ಹಾಸ್ಯಾಸ್ಪದವೇ ಸರಿ.
ಈ ಗ್ರಾಮಕ್ಕೆ ಹೊಂದಿಕೊಂಡಿರುವ ಬಿಳಿ ಹೊಳೆ ದಾಟಲು ಇಲ್ಲಿನ ಜನರು, ವಿದ್ಯಾರ್ಥಿಗಳು ಪರದಾಡಬೇಕು. ಈ ಗ್ರಾಮದಲ್ಲಿ ರಸ್ತೆಯೂ ಸರಿಯಾಗಿಲ್ಲ. ನೂರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದ ಜನರು ಹೊಳೆ ದಾಟಲು ಅಡಿಕೆ ಮರಗಳನ್ನು ಕಡಿದು ಸಂಕ ನಿರ್ಮಾಣ ಮಾಡಿದ್ದಾರೆ. ಮಳೆಗಾಲ ಬಂತೆಂದರೆ ಸಾಕು ಜೀವಭಯದಲ್ಲಿ ಸಂಕ ದಾಟಬೇಕು. ಹೊಳೆಯಲ್ಲಿ ಅತೀ ನೀರು ಬಂದಾಗ ಕಂಬಳಿ ಕಟ್ಟಿಕೊಂಡು ಸಂಕ ದಾಟುವ ಪರಿಸ್ಥಿತಿ ಇಲ್ಲಿನ ಜನರದ್ದು.
ಕಡಿಮೆ ಜನಸಂಖ್ಯೆಯೇ ಕಾರಣ?:
ಹಗರುಮನೆ ಮತ್ತು ಮೇಲ್ಗದ್ದೆ ಗ್ರಾಮದಲ್ಲಿ ಇಂಥ ಮೂಲಭೂತ ಸೌಕರ್ಯ ಕಾಣದೇ ಇರಲು ಗ್ರಾಮದ ಕಡಿಮೆ ಜನಸಂಖ್ಯೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಸುಮಾರು 150ಕ್ಕೂ ಹೆಚ್ಚು ಜನರು ಇರುವ ಈ ಗ್ರಾಮದಲ್ಲಿ ಮತ(ಓಟು)ಗಳ ಸಂಖ್ಯೆ ಕಡಿಮೆ ಇದೆ ಎಂದು ಜನಪ್ರತಿನಿಧಿಗಳು ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗುತ್ತಿದ್ದು, ಇಂಥ ನಿರ್ಲಕ್ಷ್ಯತನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಕೊಳವೆ ಬಾವಿ ತೋಡಿಸಿಕೊಡಿ ಇಲ್ಲ ನನಗೆ ಸರ್ಕಾರಿ ನೌಕರಿ ಕೊಡಿ; ಮತ ಪೆಟ್ಟಿಗೆಯಲ್ಲಿ ಸಿಕ್ತು ವಿಶೇಷ ಪತ್ರ
ಇತ್ತಿಂದ ಅತ್ತ, ಅತ್ತಿಂದ ಇತ್ತ ಸಾಗಲು ಪರದಾಡುವ ಈ ಗ್ರಾಮದ ಜನರು, ಮಳೆಗಾಲದಲ್ಲಿ ಜೀವನ ಸಾಗಿಸುವುದಾದರೂ ಹೇಗೆ? ಜನಪ್ರತಿನಿಧಿಗಳಿಗಾದರೆ ಓಡಾಡಲು ಕಾರು, ಹಾಯಾಗಿರಲು ಬೆಂಗಳೂರಿನಲ್ಲಿ ನಿವಾಸ ಇದೆ. ಆದರೆ ಈ ಗ್ರಾಮದ ಜನರ ಪಾಡೇನು? ಇನ್ನಾದರೂ ಜನಪ್ರತಿನಿಧಿಗಳು ಈ ಗ್ರಾಮದ ಜನರು ಸುಗಮವಾಗಿ ಓಡಾಡಲು ಕನಿಷ್ಠ ಸೇತುವೆ ನಿರ್ಮಾಣ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜನರು ಮನವಿ ಮಾಡುತ್ತಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ