ದೆಹಲಿ: ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಲಸಿಕೆ ಹಂಚಿಕೆ ವಿಚಾರವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಸದ್ಯ ರಾಜ್ಯಗಳಲ್ಲಿ 1.60 ಕೋಟಿ ಡೋಸ್ ಲಸಿಕೆ ಲಭ್ಯವಿದೆ. ಮುಂದಿನ 3 ದಿನಗಳಲ್ಲಿ 2.67 ಲಕ್ಷ ಡೋಸ್ ರವಾನಿಸುತ್ತೇವೆ. ರಾಜ್ಯಗಳು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬಹುದು. ಲಸಿಕೆ ಕೊರತೆ ಸೃಷ್ಟಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಅಕ್ಟೋಬರ್ ವೇಳೆಗೆ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಲಭ್ಯ
ಭಾರತದ ನೆರವಿಗೆ ಹಳೆಯ ಮಿತ್ರ ರಾಷ್ಟ್ರ ರಷ್ಯಾ ಧಾವಿಸಿದೆ. ಭಾರತದಲ್ಲೇ ಆಗಸ್ಟ್ ತಿಂಗಳಿನಿಂದ ರಷ್ಯಾದ ಸ್ಪುಟ್ನಿಕ್-v ಲಸಿಕೆ ಉತ್ಪಾದನೆ ಆರಂಭವಾಗಲಿದೆ. ಅಕ್ಟೋಬರ್ ವೇಳೆಗೆ ಭಾರತದಲ್ಲಿ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಲಭ್ಯವಾಗಲಿದೆ. ಆ ಮೂಲಕ ಕೇಂದ್ರ ಸರ್ಕಾರವು ನಿರೀಕ್ಷಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ.
ಭಾರತದ ಕೊರೊನಾ ಸೋಂಕಿನ ವಿರುದ್ಧದ ಲಸಿಕಾ ಅಭಿಯಾನಕ್ಕೆ ದೊಡ್ಡ ಶಕ್ತಿ ನೀಡಲು ಈಗ ಭಾರತದ ಮಿತ್ರ ರಾಷ್ಟ್ರ ರಷ್ಯಾ ಮುಂದಾಗಿದೆ. ಪ್ರಮುಖ ಲಸಿಕಾ ಕಂಪನಿಗಳ ಲಸಿಕೆಯನ್ನು ತಮ್ಮ ಅಗತ್ಯಕ್ಕಿಂತ ಹೆಚ್ಚಾಗಿ ಆಮೆರಿಕಾ, ಇಂಗ್ಲೆಂಡ್, ಯೂರೋಪಿಯನ್ ರಾಷ್ಟ್ರಗಳು ಖರೀದಿಸಿವೆ. ಭಾರತವು ಎರಡೇ ಕಂಪನಿಗಳ ಮೇಲೆ ಅವಲಂಬಿತವಾಗಿದ್ದು, ಸಂಕಷ್ಟಕ್ಕೆ ಸಿಲುಕಿದೆ. ಆದರೆ ಶತ್ರು ದೇಶಗಳ ಜೊತೆಗೆ ಯುದ್ಧ ಸೇರಿದಂತೆ ಸವಾಲಿನ ಪರಿಸ್ಥಿತಿಯಲ್ಲಿದ್ದಾಗ ನೆರವಿಗೆ ಧಾವಿಸುವ ಮಿತ್ರ ರಾಷ್ಟ್ರ ರಷ್ಯಾ ಈಗಲೂ ಭಾರತದ ನೆರವಿಗೆ ಧಾವಿಸಿದೆ . ಭಾರತಕ್ಕೆ ಹೆಚ್ಚಿನ ಪ್ರಮಾಣದ ಕೊರೊನಾ ವಿರುದ್ಧದ ಲಸಿಕೆಯನ್ನು ಉತ್ಪಾದಿಸಿ ನೀಡಲು ರಷ್ಯಾ ಮುಂದಾಗಿದೆ.
ಕೊವ್ಯಾಕ್ಸಿನ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇಕಡಾ 78 ರಷ್ಟು ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ಹೇಳಿದೆ. ಇನ್ನೂ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಸೋಂಕಿನ ವಿರುದ್ಧ ಶೇಕಡಾ 70 ರಷ್ಟು ಪರಿಣಾಮಕಾರಿ ಎಂದು ಹೇಳಿದೆ. ಇವೆರಡಕ್ಕೆ ಹೋಲಿಸಿದರೆ, ರಷ್ಯಾದ ಸ್ಪುಟ್ನಿಕ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇಕಡಾ 91.6ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ರಷ್ಯಾದ ಸ್ಪುಟ್ನಿಕ್ ಲಸಿಕೆಗೆ ಭಾರತದಲ್ಲಿ ಬಾರಿ ಬೇಡಿಕೆ ಇದೆ.
ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ನೀಡುವ ಸ್ಟಿರಾಯ್ಡ್ನಿಂದ ಸಕ್ಕರೆ ಖಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಇಲ್ಲಿದೆ ವಿವರ
Published On - 3:36 pm, Sat, 22 May 21