ಬೆಂಗಳೂರು, ಜುಲೈ 13: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಶುಕ್ರವಾರ ವಿಚಾರಣೆ ಸಂಬಂಧ ಎಸ್ಐಟಿ ಮುಂದೆ ಹಾಜರಾಗಿದ್ದ ದದ್ದಲ್ ನಂತರ ಬೆಂಗಳೂರಿನ ನಿವಾಸಕ್ಕೆ ಬಂದೇ ಇಲ್ಲ. ಕುಟುಂಬಸ್ಥರ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಯಲಹಂಕದ ಕೋಗಿಲು ಬಳಿ ಇರುವ ಬಸನಗೌಡ ದದ್ದಲ್ ವಿಲ್ಲಾದಲ್ಲಿ ಸದ್ಯ ಇಬ್ಬರು ಮನೆ ಕೆಲಸದವರು ಮಾತ್ರ ಇದ್ದಾರೆ.
ದದ್ದಲ್ ಕುಟುಂಬ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮನೆ ಕೆಲಸದವರು ಮಾಹಿತಿ ನೀಡಿದ್ದಾರೆ. ಯಾವಾಗ ವಾಪಸ್ ಬರುತ್ತಾರೆ ಎಂದು ತಿಳಿಸಿಲ್ಲ ಎಂದು ಅವರು ಹೇಳಿದ್ದಾರೆ.
ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗುವ ಭೀತಿ ಎದುರಿಸುತ್ತಿರುವ ದದ್ದಲ್, ತಮ್ಮನ್ನು ಬಂಧಿಸುವಂತೆ ವಿಶೇಷ ತನಿಖಾ ತಂಡದ ಬಳಿ ಶುಕ್ರವಾರ ಮನವಿ ಮಾಡಿದ್ದರು. ಈ ಮೂಲಕ ಇಡಿ ಬಂಧನದಿಂದ ತಪ್ಪಿಸಿಕೊಳ್ಳಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಎಸ್ಐಟಿ ಅವರನ್ನು ಬಂಧಿಸಿಲ್ಲ. ಇದಾದ ನಂತರ ಅವರು ಅಜ್ಞಾತ ತಳಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ವಿರುದ್ಧ ಸಿಕ್ಕಿದೆ ಅನೇಕ ಸಾಕ್ಷ್ಯ, ಶಾಮೀಲಾಗಿದ್ದನ್ನು ಪುಷ್ಟೀಕರಿಸುವ ಅಂಶಗಳು ಇಲ್ಲಿವೆ
ಪ್ರಕರಣ ಸಂಬಂಧ ಶುಕ್ರವಾರ ಬೆಳಗ್ಗೆಯಿಂದಲೂ ಇಡಿ ಅಧಿಕಾರಿಗಳು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ನಾಗೇಂದ್ರರನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು. ಆದರೆ ರಾತ್ರಿ ವೇಳೆಗೆ ಒಂದು ಹಂತದ ವಿಚಾರಣೆ ಪೂರ್ಣಗೊಳಿಸಿದ್ದ ಇಡಿ ಅಧಿಕಾರಿಗಳು, ರಾತ್ರಿ ನಾಗೇಂದ್ರರನ್ನು ಬಂಧಿಸಿದ್ದಾರೆ. ರಾತ್ರಿಯೇ ಶಿವಾಜಿನಗರ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ದದ್ದಲ್ಗೆ ಇಡಿ ಬಂಧನ ಭೀತಿ ಹೆಚ್ಚಾಗಿದೆ.
ವಾಲ್ಮೀಕಿ ನಿಗಮದ ಹಗರಣದ ಮಧ್ಯೆಯೇ ಶಾಸಕ ಬಸನಗೌಡ ದದ್ದಲ್ 4 ಎಕರೆ 31 ಗುಂಟೆ ಜಮೀನು ಖರೀದಿಸಿದ್ದಾರೆಂಬ ಆರೋಪವಿದೆ. ಇಡಿ ದಾಳಿ ಬಳಿಕ ಭೂಮಿ ಖರೀದಿ ವಿಚಾರ ಬಯಲಾಗಿದ್ದು, ಪುತ್ರ ತ್ರಿಶೂಲ್ ಕುಮಾರ್ ನಾಯಕ್ ಹೆಸರಿನಲ್ಲಿ ರಾಯಚೂರು ಜಿಲ್ಲೆಯ ಗುಣದಿನ್ನಿ ಗ್ರಾಮದಲ್ಲಿ ದದ್ದಲ್ ತಂದೆ ಸಿದ್ದನಗೌಡರಿಂದ ಭೂಮಿ ಖರೀದಿಸಲಾಗಿದೆಯಂತೆ. ಇದೇ ಭೂಮಿಯನ್ನ ಜೂನ್27ರಂದು ಮ್ಯೂಟೇಶನ್ ಮಾಡಿಸಿಕೊಳ್ಳಲಾಗಿದೆ. ದದ್ದಲ್ ಭೂಮಿ ಖರೀದಿ ಕುರಿತ ಪ್ರತಿ ಟಿವಿ9ಗೆ ಲಭ್ಯವಾಗಿದ್ದು, ಈ ಪ್ರತಿಯಲ್ಲಿ 23ಲಕ್ಷದ 88 ಲಕ್ಷ ರೂಪಾಯಿ ನೀಡಿ ಭೂಮಿ ಖರೀದಿಸಿರೋದು ಉಲ್ಲೇಖವಾಗಿದೆ. ಗಣದಿನ್ನಿ ಗ್ರಾಮದ ಸರ್ವೆ ನಂಬರ್ 33/1ರಲ್ಲಾದ ಭೂಮಿ ಖರೀದಿಗೆ, ರಾಯಚೂರಿನ ಖಾಸಗಿ ಬ್ಯಾಂಕ್ನ ಚೆಕ್ ಮೂಲಕ ಹಣ ಸಂದಾಯವಾಗಿದೆ. ಖಾಸಗಿ ಅಡಚಣೆ ಹಾಗೂ ಮನೆ ಖರ್ಚಿಗಾಗಿ ಹಣದ ಅಗತ್ಯ ಹಿನ್ನೆಲೆ ಜಮೀನು ಮಾರಾಟ ಮಾಡಿದ್ದಾಗಿ ಖರೀದಿ ಪತ್ರದಲ್ಲಿ ಮಾಲೀಕ ಉಲ್ಲೇಖಿಸಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Sat, 13 July 24