ಬೆಂಗಳೂರು, ಅಕ್ಟೋಬರ್ 14: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಬಿ.ನಾಗೇಂದ್ರಗೆ (B Nagendra) ಷರತ್ತುಬದ್ಧ ಜಾಮೀನು ಮಂಜೂರು ಮಾಡಿ, ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. 2 ಲಕ್ಷದ ಬಾಂಡ್, ಇಬ್ಬರ ಶ್ಯೂರಿಟಿ ನೀಡಲು ಸೂಚನೆ ನೀಡಲಾಗಿದೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ತಲೆದಂಡವಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ಇತ್ತೀಚೆಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. 187 ಕೋಟಿ ರೂಪಾಯಿ ಹಗರಣ ಸಂಬಂಧ 4ಸಾವಿರದ 970 ಪುಟಗಳ ಚಾರ್ಜ್‌ಶೀಟ್ ಜೊತೆಗೆ 144 ಪುಟಗಳ ದೂರು ಸಲ್ಲಿಸಿದ್ದರು. ಇಡಿ ಚಾರ್ಜ್‌ಶೀಟ್‌ನಲ್ಲಿ ಮಾಜಿ ಸಚಿವ ನಾಗೇಂದ್ರ A1 ಆಗಿದ್ದರು.
ಇದನ್ನೂ ಓದಿ: ಮುಡಾ, ವಾಲ್ಮೀಕಿ ನಿಗಮ ಹಗರಣಗಳ ದಾಖಲೆ ನಮಗೆ ಕೊಟ್ಟಿದ್ದೇ ಕಾಂಗ್ರೆಸ್ ನಾಯಕರು: ಜೋಶಿ
ನಾಗೇಂದ್ರ ಮತ್ತು ಆತನ ಗ್ಯಾಂಗ್ ಅಕ್ರಮ ನಡೆಸಿರುವುದು ಇಡಿ ತನಿಖೆಯಲ್ಲಿ ದೃಢವಾಗಿತ್ತು. 187 ಕೋಟಿಯಲ್ಲಿ ರೂ. ಒಟ್ಟು 84 ಕೋಟಿ ರೂಪಾಯಿ ಅಕ್ರಮ ವಹಿವಾಟು ನಡೆಸಿರುವ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಅಕ್ರಮವಾಗಿ ಹಣ ಬಳಸಲು ನಾಗೇಂದ್ರ ಒಳಸಂಚು ಮಾಡಿದ್ದಾರೆ. ಜೊತೆಗೆ ಸಾಕ್ಷಿ ನಾಶ ಮಾಡಲು ಸಂಚು ರೂಪಿಸಿದ್ದಾರೆ ಅಂತಾ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿತ್ತು.
ಇನ್ನೂ ಬಳ್ಳಾರಿ ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ ಮಾಡಿರುವುದು ತನಿಖೆಯಿಂದ ಗೊತ್ತಾಗಿತ್ತು. ಪ್ರಕರಣದ ಎಂಟನೇ ಆರೋಪಿ ನಾಗೇಂದ್ರ ಪಿಎಂ ವಿಜಯ್ ಕುಮಾರ್ ಮೊಬೈಲ್‌ನಲ್ಲಿ ಚುನಾವಣೆಗೆ ಹಣ ಬಳಕೆ ಮಾಡಿದ ಸಂಬಂಧ ದಾಖಲೆ ಸಿಕ್ಕಿತ್ತು. 20 ಕೋಟಿ 19 ಲಕ್ಷ ರೂಪಾಯಿಯ ಹಣದ ಬಂಡಲ್ ಇರುವ ಫೋಟೋಗಳು ಮತ್ತು ಪ್ರತಿ ಬೂತ್‌ಗೂ ಹಣ ಹಂಚಿರುವ ಬಗ್ಗೆ ದಾಖಲೆ ಲಭ್ಯವಾಗಿದ್ದವು.
ಇನ್ನು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಲೋಹಿತ್, ಕಿರಣ್, ಮಂಜುನಾಥ್ಗೆ ನಿರೀಕ್ಷಣಾ ಜಾಮೀನು ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾ.ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:22 pm, Mon, 14 October 24