ಮುಡಾ, ವಾಲ್ಮೀಕಿ ನಿಗಮ ಹಗರಣಗಳ ದಾಖಲೆ ನಮಗೆ ಕೊಟ್ಟಿದ್ದೇ ಕಾಂಗ್ರೆಸ್ ನಾಯಕರು: ಜೋಶಿ
ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ವಾಗ್ದಾಳಿ ಮಾಡುತ್ತಿವೆ. ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಹಗರಣಗಳ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿ, ಆಗಸ್ಟ್ 26: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ದಾಖಲೆಗಳನ್ನು ನಮಗೆ ನೀಡಿದ್ದು ಕಾಂಗ್ರೆಸ್ (Congress) ನಾಯಕರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೊಸ ಬಾಂಬ್ ಸಿಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಏನೂ ಇರಲಿಲ್ಲ, ಕಾಂಗ್ರೆಸ್ನವರೇ ನಮಗೆ ದಾಖಲೆ ಕೊಟ್ಟಿದ್ದಾರೆ ಎಂದು ಹೇಳಿದರು.
ದಾಖಲೆ ನಮಗೆ ಯಾರು ಕೊಟ್ಟಿದ್ದಾರೆ ಎಂಬುವುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ಮನೆಗೆ ಹೋಗುತ್ತಾರೆ, ಕಾಂಗ್ರೆಸ್ನಲ್ಲಿ ಹೊಸ ಸಿಎಂ ಬರುತ್ತಾರೆ. ಹೀಗಾಗಿ ಬಿಜೆಪಿ ನಾಯಕರು ಸಿಎಂ ಬದಲಾವಣೆ ಬಗ್ಗೆ ಹೇಳುತ್ತಿದ್ದಾರೆ. ದೆಹಲಿಗೆ ಹೋಗಿ ಒಮ್ಮೆ ರಾಹುಲ್ ಗಾಂಧಿ ಬಳಿ, ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ವಿವರಣೆ ಕೊಡುತ್ತಾರೆ ಎಂದು ತಿಳಸಿದರು.
ತಮಗೆ ಏನೇನು ಬೇಕು ಅದನ್ನು ಕಾಂಗ್ರೆಸ್ ಉಸ್ತುವಾರಿಗಳು ಮಾಡುತ್ತಿದ್ದಾರೆ. ಹೈಕಮಾಂಡ್ ಸಿಎಂ ಅವರ ಪರವಾಗಿದ್ದರೆ ಸಿದ್ದರಾಮಯ್ಯ ಅವರು ಯಾಕೆ ಪದೇ ಪದೇ ದೆಹಲಿಗೆ ಹೋಗುತ್ತಾರೆ. ಕೇವಲ ಮುಡಾ ಅಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವೂ ಇದೆ. ಸಿದ್ದರಾಮಯ್ಯ ಅವರು ಕೇವಲ 79 ಕೋಟಿ ಹಗರಣ ಆಗಿದೆ ಅಂತಾರೆ. ಎಷ್ಟು ತಿಂದರೂ ಅದು ತಿಂದ ಹಾಗೆ ಎಂದು ವಾಗ್ದಾಳಿ ಮಾಡಿದರು.
ಜಿಂದಾಲ್ಗೆ ಸರ್ಕಾರ ಭೂಮಿ ನಿಡುವ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಬೆಂಬಲದಿಂದ ಹೆಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಭೂಮಿ ನೀಡಲು ಮುಂದಾಗಿದ್ದರು. ನಂತರ ಬಿಜೆಪಿ ಸರ್ಕಾರದಲ್ಲೂ ಭೂಮಿ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಆಗ, ಹೆಚ್ಕೆ ಪಾಟೀಲ್ ಅವರು ವಿರೋಧ ವ್ಯಕ್ತಪಡಿಸಿದರು. ಇವತ್ತು ಅದೇ ಹೆಚ್ಕೆ ಪಾಟೀಲ್ ಭೂಮಿ ಕೊಡುವುದರ ಬಗ್ಗೆ ಮಾತನಾಡುತ್ತಾರೆ. ಅವತ್ತು ಏನಾಯಿತು, ಇವತ್ತು ಏನಾಗುತ್ತಿದೆ, ಸ್ವಲ್ಪ ತಿಳಿಸಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.
ಇದನ್ನೂ ಓದಿ: ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿಬಂತು ಮತ್ತೊಂದು ಗಂಭೀರ ಆರೋಪ
ಶಾಸಕರ ಖರೀದಿಗೆ ಬಿಜೆಪಿಯಿಂದ 100 ಕೋಟಿ ಆಫರ್ ಎಂಬ ಕಾಂಗ್ರೆಸ್ ಶಾಸಕ ಗಣಿಗ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಗಣಿಗ ರವಿ ಮತ್ತೊಮ್ಮೆ ಹೀಗೆ ಮಾತನಾಡಿದರೆ ಮಾನಹಾನಿ ಕೇಸ್ ಹಾಕುತ್ತೇನೆ. ಹಗರಣಗಳ ವಿಚಾರವನ್ನು ಡೈವರ್ಟ್ ಮಾಡುಲು ಈ ರೀತಿ ಮಾತನಾಡುತ್ತಿದ್ದಾರೆ. ಒಳಜಗಳದಿಂದ ಕಾಂಗ್ರೆಸ್ನವರು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದ ವತಿಯಿಂದ ಶಾಸಕ ರವಿ ಗಣಿಗ ವಿರುದ್ಧ ದೂರು ಕೊಟ್ಟಿದ್ದೇವೆ. ಪೊಲೀಸರು ಸರಿಯಾದ ತನಿಖೆ ಮಾಡಬೇಕು. ಅಕಸ್ಮಾತ್ ಯಾರಾದರೂ ಕರೆ ಮಾಡಿದ್ದರೇ ರೆಕಾರ್ಡ್ ಕೊಡಬೇಕು. ಹಿಟ್ & ರನ್ ರೀತಿ ಮಾತಾಡಬಾರದು. ಕಾಂಗ್ರೆಸ್ನವರು ಅಸಹಾಯಕ ಸ್ಥಿತಿಯಲ್ಲಿ ಏನೇನೋ ಮಾತಾಡುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರವ ವಿಚಾರವಾಗಿ ಮಾತನಾಡಿದ ಅವರು, ಸಾಕ್ಷಿ ನಾಶ ಮಾಡುವುದಕ್ಕೆ ಇದೊಂದು ಪ್ಲ್ಯಾನ್. ನಟ ದರ್ಶನ್ ವಿಚಾರದಲ್ಲಿ ಸರ್ಕಾರದ ಫೇಲ್ಯೂರ್ ಆಗಿದೆ. ರೌಡಿಶೀಟರ್ ಜತೆ ಕುಳಿತಿರೋದು ಸಾಕ್ಷಿ ನಾಶ ಮಾಡುವ ತಂತ್ರ ಇದು. ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರ ರಕ್ಷಣೆ ಮಾಡುತ್ತಿದೆ ಅನಿಸುತ್ತದೆ. ಸರ್ಕಾರ ಏನೋ ಸಂಚು ಮಾಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ದರ್ಶನ್ ವಿಚಾರವಾಗಿ ಸಿಎಂ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಈಗ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದೀರಿ. ಇಷ್ಟು ದಿನ ಕತ್ತೆ ಕಾಯುತ್ತಿದ್ದರಾ? ಈ ಕೇಸ್ನಲ್ಲಿ ಕೆಲವು ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ