ವಾಲ್ಮಿಕಿ ನಿಗಮದ ಹಗರಣ: ನಾಗೇಂದ್ರ ಅಣತಿಯಂತೆ ಹಣದ ವಹಿವಾಟು; ಇಡಿ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ನಿಗಮದಲ್ಲಿ ನಡೆದ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಹಲವು ವಿಚಾರ ಬಹಿರಂಗಗೊಂಡಿವೆ.
ಬೆಂಗಳೂರು, ಸೆಪ್ಟೆಂಬರ್ 10: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ (Valmiki Scheduled Tribes Development Corporation)ದ ಬಹುಕೋಟಿ ಹಗರಣದ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ED) 82ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರು ಭಾಗಿಯಾಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಹಗರಣ ಹೇಗೆ ನಡೆಯಿತೆಂದು ಎಳೆಎಳೆಯಾಗಿ ಬರೆದಿದ್ದಾರೆ. ಹಗರಣದ ಮಾಸ್ಟರ್ ಮೈಂಡ್ ಬಿ. ನಾಗೇಂದ್ರ ಎಂದು ಉಲ್ಲೇಖಿಸಲಾಗಿದೆ. ಬಿ. ನಾಗೇಂದ್ರ ಅವರು ಹಗರಣದ ಆರೋಪಿ, ಹೈದರಾಬಾದ್ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ನ ಎಂಡಿ ಸತ್ಯನಾರಾಯಣವರ್ಮಾ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಹಣದ ಬಳಕೆಯ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಬರೆದಿದ್ದಾರೆ.
ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಣತಿಯಂತೆ ಸಂಪೂರ್ಣ ಹಣದ ವಹಿವಾಟು ನಡೆದಿದೆ. 21 ಕೋಟಿ ರೂ. ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಮನಿಟ್ರಯಲ್ ನಡೆದಿದೆ ಎಂದು ತನಿಖೆ ವೇಳೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಿ. ನಾಗೇಂದ್ರ ಸೇರಿದಂತೆ ಐವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮುಡಾ, ವಾಲ್ಮೀಕಿ ನಿಗಮ ಹಗರಣಗಳ ದಾಖಲೆ ನಮಗೆ ಕೊಟ್ಟಿದ್ದೇ ಕಾಂಗ್ರೆಸ್ ನಾಯಕರು: ಜೋಶಿ
ಸಿಎಂ ಭೇಟಿಯಾದ ದದ್ದಲ್
ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಂತೆ, ಇತ್ತ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಶಾಸಕ ಬಸನಗೌಡ ದದ್ದಲ್ ವಾಲ್ಮೀಕಿ ನಿಗಮದ ಹಗರಣದಲ್ಲಿ ವಿಚಾರಣೆ ಎದುರಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Tue, 10 September 24