ಕೇಂದ್ರ ಸರ್ಕಾರ ಇಡಿಯನ್ನು ದುರುಪಯೋಗ ಪಡೆಸಿಕೊಳ್ಳತ್ತಿದೆ: ಸಚಿವರ ಆರೋಪ

|

Updated on: Jul 18, 2024 | 1:21 PM

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹಕೋಟಿ ಹಗರಣವನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದ್ದು, ಮಾಜಿ ಸಚಿವರನ್ನು ಬಂಧಿಸಿದೆ. ಈ ವಿಚಾರವಾಗಿ ಸರ್ಕಾರ ಐವರು ಸಚಿವರು ಸುದ್ದಿಗೋಷ್ಠಿ ನಡೆಸಿ, ಇಡಿ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಇಡಿಯನ್ನು ದುರುಪಯೋಗ ಪಡೆಸಿಕೊಳ್ಳತ್ತಿದೆ: ಸಚಿವರ ಆರೋಪ
ಸಚಿವರ ಆರೋಪ
Follow us on

ಬೆಂಗಳೂರು, ಜುಲೈ 18: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Valmiki Scheduled Tribes Development Corporation) ಬಹಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಾಜಿ ಸಚಿವ, ಕಾಂಗ್ರೆಸ್​ ಶಾಸಕ ನಾಗೇಂದ್ರ (Nagendra) ಅವರನ್ನು ಬಂಧಿಸಿದ್ದಾರೆ. ಒಟ್ಟು 89.62 ಕೋಟಿ ಅವ್ಯವಹಾರ ನಡೆದಿದೆ ಎಂದು ಇಡಿ ಮಾಹಿತಿ ನೀಡಿದೆ. ಇದರಿಂದ ಸರ್ಕಾರಕ್ಕೆ ಮುಜುಗುರಕ್ಕೆ ಒಳಗಾಗಿದ್ದು, ಸರ್ಕಾರದ ಐವರು ಸಚಿವರು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಇಡಿಯನ್ನು ದುರುಪಯೋಗ ಪಡೆಸಿಕೊಳ್ಳತ್ತಿದೆ ಎಂದು ಆರೋಪ ಮಾಡಿದರು.

ವಿಧಾನಸೌಧದಲ್ಲಿ ಸಚಿವರಾದ ಕೃಷ್ಣಭೈರೇಗೌಡ, ದಿನೇಶ್​ ಗುಂಡೂರಾವ್​​, ಕೆಜೆ ಜಾರ್ಜ್, ಪ್ರಿಯಾಂಕ್​ ಖರ್ಗೆ, ಸಂತೋಷ ಲಾಡ್​​ ಸುದ್ದಿಗೋಷ್ಠಿ ನಡೆಸಿದರು. ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿಪಕ್ಷಗಳ ಸರ್ಕಾರಗಳು ಇರುವ ರಾಜ್ಯಗಳ ಮೇಲೆ ಇಡಿ, ಐಟಿ ದಾಳಿ ಮಾಡಿಸುತ್ತಿದೆ. ಕರ್ನಾಟಕ ಸರ್ಕಾರವನ್ನು ಬುಡಮೇಲು ಮಾಡುವ ಯತ್ನ ನಡೆದಿದೆ. ವಾಲ್ಮೀಕಿ ಹಗರಣದಲ್ಲಿ ವಿಚಾರಣೆ ವೇಳೆ ಬಲವಂತದ ಹೇಳಿಕೆ ಕೊಡಿಸಲಾಗಿದೆ. ಸರ್ಕಾರದ ಪ್ರಮುಖರ ಹೆಸರನ್ನು ಹೇಳುವಂತೆ ಬಲವಂತ ಮಾಡಲಾಗಿದೆ. ಇಲ್ಲದಿದ್ದರೆ ಇಡಿ ಪವರ್ ಏನು ಅಂತ ತೋರಿಸುವಂತೆ ಬೆದರಿಕೆ ಒಡ್ಡಲಾಗಿದೆ. ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದಕ್ಕೆ ವಿಪಕ್ಷಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆರೋಪ ಮಾಡಿದರು.

ಈಗ ವಿಪಕ್ಷಗಳ ನಾಯಕರ ಮೇಲೆ ಮೇಲೆ ಶೇ.95ರಷ್ಟು ಕೇಸ್​​ ದಾಖಲಾಗಿವೆ. ಆಡಳಿತ ಪಕ್ಷದ ನಾಯಕರ ಮೇಲೆ ಕೇವಲ ಶೇ.5ರಷ್ಟು ಕೇಸ್ ದಾಖಲಾಗಿವೆ. ಕೇಂದ್ರ ಸರ್ಕಾರದ ಅಧಿಕಾರ ದುರ್ಬಳಕೆ ಸ್ಪಷ್ಟವಾಗುತ್ತಿದೆ. ಸುಪ್ರೀಂಕೋರ್ಟ್​ ಕೂಡ ಅಧಿಕಾರ ದುರ್ಬಳಕೆ ಬಗ್ಗೆ ಪ್ರಸ್ತಾಪ ಮಾಡಿದೆ. ಜಾರ್ಖಂಡ್​ ಸೇರಿ ಹಲವೆಡೆ ವಿಪಕ್ಷಗಳಿರುವ ಸರ್ಕಾರಗಳ ಮೇಲೆ ದಾಳಿ ನಡೆದಿದೆ. ಅದೇ ರೀತಿ ಕರ್ನಾಟಕದ ಮೇಲೆ ಇಡಿ ದಾಳಿ ನಡೆಸಿ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.

ಸಾಕ್ಷಿಗಳನ್ನು ಹೆದರಿಸುವ ಮೂಲಕ ಸುಳ್ಳು ಹೇಳಿಕೆ ಕೊಡಿಸುತ್ತಿದ್ದಾರೆ. ಇಡಿ, ಐಟಿ, ಸಿಬಿಐ ದಾಳಿಗಳಿಗೆ ಕರ್ನಾಟಕ ಸರ್ಕಾರ ಹೆದರುವುದಿಲ್ಲ. ಕೇಂದ್ರ ಸರ್ಕಾರದ ನಡೆ ಖಂಡಿಸಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಪತ್ನಿ ಮಂಜುಳಾ ಇಡಿ ವಶಕ್ಕೆ

ಇಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು ನಡೆದಿದೆ: ಖರ್ಗೆ

ಭೋವಿ ನಿಗಮದಲ್ಲಿ 120 ಕೋಟಿ ರೂ. ಹಗರಣ ಆಗಿದೆ. ಅದರ ಬಗ್ಗೆ ಜಾರಿ ನಿರ್ದೇಶನಾಲಯ ಯಾಕೆ ಕಾಳಜಿ ವಹಿಸಿಲ್ಲ? ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣದಲ್ಲಿ ಇಡಿ ಯಾಕೆ ಗಮನ‌ ಹರಿಸಿಲ್ಲ. ಕೆಐಎಡಿಬಿ ದುಡ್ಡು ಸೇಲಂಗೆ ಹೋಗಿದೆ ಇದರ ಬಗ್ಗೆ ಯಾಕೆ ಇಡಿ ಆಸಕ್ತಿ ವಹಿಸಿಲ್ಲ. ವಾಲ್ಮೀಕಿ ಪ್ರಕರಣದ ಇಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು ನಡೆದಿದೆ. ಮುಖ್ಯಮಂತ್ರಿಗಳ ಹೆಸರು ಹೇಳಿ ಉಪಮುಖ್ಯಮಂತ್ರಿಗಳ ಹೆಸರು ಹೇಳಿ ಅಂತ ಆರೋಪಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಹಣ ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಅಂತ ಹೇಳಲು ಒತ್ತಡ ಹಾಕಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಆರೋಪ ಮಾಡಿದರು.

ಕಳೆದ 10 ವರ್ಷಗಳಲ್ಲಿ ಎಷ್ಟು ಸರ್ಕಾರಗಳನ್ನು ಬಿಜೆಪಿಯವರು ಬೀಳಿಸಿದ್ದಾರೆ ನೋಡಿ, 2016ರಲ್ಲಿ ಉತ್ತರಾಖಾಂಡ, 2019ರಲ್ಲಿ ಕರ್ನಾಟಕದಲ್ಲಿ ಅಂದಿನ ಸರ್ಕಾರಗಳನ್ನು ಬಿಜೆಪಿಯವರು ಬೀಳಿಸಿದ್ದಾರೆ. ಗುಜರಾತ್​ನಲ್ಲಿ ನಮ್ಮ ಶಾಸಕರನ್ನು ಖರೀದಿ ಮಾಡಿದರು. ಸಿಕ್ಕಿಂನಲ್ಲಿ ಶಾಸಕರನ್ನು ಖರೀದಿ ಮಾಡಿದರು. 2014 ರಿಂದ 440 ಶಾಸಕರನ್ನು ಖರೀದಿ ಮಾಡಲಾಗಿದೆ. ಬಹುಮತ ಇದ್ದರೂ ಕೂಡ ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಂಡು ಸರ್ಕಾರಗಳನ್ನು ಬೀಳಿಸಲಾಗುತ್ತಿದೆ. ಮಣಿಪುರ, ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಹೀಗೆ 60 ಬಾರಿ ಶಾಸಕರ ಖರೀದಿ ನಡೆದಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಮೇಲೆ ಐಟಿ, ಇಡಿ ಕೇಸ್ ಇದೆ. 2019 ರಿಂದ ಇದುವರೆಗೆ ಯಡಿಯೂರಪ್ಪ ಅವರ ಮೇಲೆ ಯಾವುದೇ ವಿಚಾರಣೆ ಯಾಕೆ ನಡೆಯುತ್ತಿಲ್ಲ. ರೆಡ್ಡಿ ಸಹೋದರರ ಮೇಲೆ ಐಟಿ ಕೇಸ್ ಇತ್ತು. ಆದರೆ ಈಗ ಅವರು ಪಕ್ಷ ಸೇರಿದ ಮೇಲೆ ಯಾವುದೂ ಇಲ್ಲ ಎಂದರು.

ಆರೋಪ ಬಂದ ತಕ್ಷಣ ಬಿ.ನಾಗೇಂದ್ರ ರಾಜೀನಾಮೆ ಪಡೆಯಲಾಗಿದೆ. ತನಿಖೆ ನಡೆಯುತ್ತಿದೆ, ಯಾರು ತಪ್ಪಿತಸ್ಥರನ್ನು ಬಂಧಿಸಲಾಗುತ್ತೆ. ರಾಜಕೀಯ ದುರುದ್ದೇಶದಿಂದ, ಸಿಬಿಐ, ಇಡಿ ದುರ್ಬಳಕೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ನಮ್ಮ ಸರ್ಕಾರದ ಕಾರ್ಯಕ್ರಮಗಳು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಕೇಂದ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಬೇರೆ ಪಕ್ಷಗಳ ಬೆಂಬಲ ಬೇಕಾಯಿತು. ರಾಷ್ಟ್ರದ ಜನರ ಒಳಿತಿಗೆ ಹೋರಾಟ ಮಾಡಿದರೆ ಒಳ್ಳೆಯದು ಅಂತ ಹೇಳುತ್ತೇವೆ. ನಾವು ಬ್ರಿಟಿಷರ ಗುಂಡಿಗೆ ಹೆದರಲಿಲ್ಲ, ಬಿಜೆಪಿಯವರ ಕುತಂತ್ರಕ್ಕೆ ಹೆದರುತ್ತೇವಾ? ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್​ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ