ಮಾರ್ಚ್ 27ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ

ಮಹದಾಯಿ, ಮೇಕೆದಾಟು ಯೋಜನೆಗೋಸ್ಕರ ಬಂದ್​ಗೆ ಕರೆ ನೀಡಿದ್ದು, ಇದರ ಜೊತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್​ ದರ ಹೆಚ್ಚಳ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾನೈಟ್​ ಲೂಟಿ ವಿರುದ್ಧ ಧರಣಿ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಮಾರ್ಚ್ 27ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ
ಕನ್ನಡ ಪರ ಹಿರಿಯ ಹೋರಾಟಗಾರ ವಾಟಾಳ್​ ನಾಗರಾಜ್ ​
Follow us
preethi shettigar
|

Updated on:Feb 27, 2021 | 2:20 PM

ಬೆಂಗಳೂರು: ತಮಿಳುನಾಡು ಸರ್ಕಾರ ನದಿ ತಿರುವು ಯೋಜನೆ ಕೈಬಿಡಬೇಕು. ಇಲ್ಲದಿದ್ದರೆ ಮಾರ್ಚ್ 27ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್​ ಎಚ್ಚರಿಕೆ ನೀಡಿದ್ದಾರೆ.

ಮಾರ್ಚ್ 5ರೊಳಗೆ ಕಾವೇರಿ ಯೋಜನೆ ಕೈಬಿಡಲು ಗಡುವು ಇದ್ದು, ಈ ಯೋಜನೆ ಬಗ್ಗೆ ಚಕಾರವೆತ್ತದ ರಾಜ್ಯದ ಸಂಸದರನ್ನು ಮಾರ್ಚ್ 6ರಂದು ಹರಾಜು ಹಾಕುತ್ತೇವೆ. ಮಾರ್ಚ್ 13ರಂದು ಕನ್ನಂಬಾಡಿ ಚಲೋ ನಡೆಸುತ್ತೇವೆ,ಮಾರ್ಚ್ 20ರಂದು ಬೆಂಗಳೂರು ನಗರದಾದ್ಯಂತ ಹೋರಾಟ ನಡೆಸುತ್ತೇವೆ ಎಂದು ವಾಟಾಳ್ ನಾಗರಾಜ್​ ತಿಳಿಸಿದ್ದಾರೆ.

ಒಟ್ಟಾರೆ ತಮಿಳುನಾಡು ಸರ್ಕಾರ ಜಗ್ಗದಿದ್ದರೆ ಕರ್ನಾಟಕ ಬಂದ್​ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಮಾರ್ಚ್ 13ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಸದ್ಯ ಮಹದಾಯಿ, ಮೇಕೆದಾಟು ಯೋಜನೆಗೋಸ್ಕರ ಬಂದ್​ಗೆ ಕರೆ ನೀಡಿದ್ದು, ಇದರ ಜೊತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್​ ದರ ಹೆಚ್ಚಳ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾನೈಟ್​ ಲೂಟಿ ವಿರುದ್ಧ ಧರಣಿ ನಡೆಸಲಾಗುವುದು. ನಮ್ಮ ಹೋರಾಟಕ್ಕೆ ಹೋಟೆಲ್ ಸೇರಿದಂತೆ ಯಾರೂ ನೈತಿಕ ಬೆಂಬಲ ಕೊಡಬೇಡಿ ಎಂದ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್​ ಹೇಳಿಕೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಕಾಮಗಾರಿ ಸದ್ದಿಲ್ಲದೆ ನಡೆಯುತ್ತಿದ್ದು, ನಿನ್ನೆ ತಮಿಳುನಾಡು ಸಿಎಂ ಪಳಿನಿಸ್ವಾಮಿ ಕಾವೇರಿ ನದಿ ಕಾಮಗಾರಿಗೆ ಚಾಲನೆ ಕೊಟ್ಟಿದ್ದಾರೆ. ಕಾಲುವೆ ಕಾಮಗಾರಿಗೆ 118 ಕಿ.ಮೀ ಜಾಗ ಬಳಸಲಾಗಿದೆ. ಈ ಜಾಗ ಕೇಸ್‌ನಲ್ಲಿದೆ ಆದರೂ ಕಾಮಗಾರಿ ಆರಂಭಿಸಿದೆ ಎಂದು ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ಯಾರ ಏಜೆಂಟ್ ಆಗಿದೆ. ಗೋವಾದ ಏಜೆಂಟಾ ಇಲ್ಲಾ ಮಹಾರಾಷ್ಟ್ರದ ಏಜೆಂಟಾ? ಎಂದು ವಾಟಾಳ್ ನಾಗರಾಜ್ ಪ್ರಶ್ನೆ ಕೇಳಿದ್ದು, ರಾಜ್ಯ ಸರ್ಕಾರ ಪರಿಣಾಕಾರಿಯಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯದ ಗಡಿಗಳಲ್ಲಿ ದಬ್ಬಾಳಿಕೆ ಹೆಚ್ಚಾಗಿದೆ. ಬಿಎಸ್‌ವೈಗೆ ವಯಸ್ಸಾಗುತ್ತಿದೆ ಬಿಟ್ಟರೆ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಇವತ್ತು ನಮಗೆ ಇಲ್ಲಿ ಬೆಂಕಿ ಬಿದ್ದಿದೆ. ಆದರೆ ಕಾಂಗ್ರೆಸ್, ಜೆಡಿಎಸ್​ ಅದ್ಯಾವಾಗ ರಾಜಿಯಾಗುತ್ತವೋ ಗೊತ್ತಿಲ್ಲ. ಸರ್ಕಾರದ ವಿರುದ್ಧ ಯಾವ ಪಕ್ಷವೂ ಧ್ವನಿ ಎತ್ತುತ್ತಿಲ್ಲ. ಕೇವಲ ಕನ್ನಡಪರ ಸಂಘಟನೆಗಳು ಮಾತ್ರ ಧ್ವನಿ ಎತ್ತುತ್ತಿವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಬಿಎಸ್​ವೈ ಈ ಸಂಬಂಧ ಈಗಾಗಲೇ ಸಂಸದರ ಸಭೆ ಕರಿಯಬೇಕಿತ್ತು. ಯಾವುದೇ ಕಾರಣಕ್ಕೂ ಕಾಲುವೆ ಕಾಮಗಾರಿ ಆಗಬಾರದು. ಬಿಜೆಪಿ ವೋಟ್ ಗೊಸ್ಕರ ಚಕಾರ ಎತ್ತುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕಾಮಗಾರಿ ನಡೆಯುತ್ತಿರುವ ಬಗ್ಗೆ ನಮ್ಮ ನೀರಾವರಿ ಸಚಿವರು ಮಾತನಾಡಬೇಕು ಆದರೆ ಅವರಿಗೆ ಮಾಹಿತಿ ಇಲ್ಲ ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಜಾತಿ ಮೀಸಲಾತಿ ಎಂದು ಹೋರಾಟ ಆಗುತ್ತಿದೆ. ಕನ್ನಡಕ್ಕಾಗಿ ಹೋರಾಟ ಆಗುತ್ತಿಲ್ಲ. ಮಾರ್ಚ್ 6 ರ ಒಳಗೆ ‌ ಕೇಂದ್ರಕ್ಕೆ ಹೋಗಿ ಈ ಕಾಮಗಾರಿ ತಡೆ ಹಿಡಿಯಬೇಕು. ಇಲ್ಲವಾದರೆ ಪಾರ್ಲಿಮೆಂಟ್ ಸದಸ್ಯರನ್ನೆಲ್ಲಾ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಹರಾಜು‌ ಹಾಕುತ್ತೇನೆ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಏರ್​ಶೋನಲ್ಲಿ ಕಣ್ಮರೆಯಾದ ಕನ್ನಡ.. ನಿಮಗೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದ ವಾಟಾಳ್

Published On - 1:56 pm, Sat, 27 February 21