ಹೊಸಪೇಟೆ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬೀಳುತ್ತಿದ್ದ ಗದಗ ಮೂಲದ ಯುವಕನನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿ

|

Updated on: Mar 26, 2023 | 2:49 PM

ಚಲಿಸುತ್ತಿದ್ದ ವಾಹನದಿಂದ ಇಳಿಯಬೇಡಿ ಮತ್ತು ಹತ್ತಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಕ್ಯಾರೇ ಎನ್ನದ ಜನ ಆ ರೀತಿ ಮಾಡಲು ಹೋಗಿ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬೀಳುತ್ತಿದ್ದ ಯುವಕನ್ನು ರಕ್ಷಿಸಿದ ಘಟನೆ ಹೊಸಪೇಟೆ ನಿಲ್ದಾಣದಲ್ಲಿ ನಡೆದಿದೆ.

ಹೊಸಪೇಟೆ: ಚಲಿಸುತ್ತಿದ್ದ ವಾಹನದಿಂದ ಇಳಿಯಬೇಡಿ ಮತ್ತು ಹತ್ತಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಕ್ಯಾರೇ ಎನ್ನದ ಜನ ಆ ರೀತಿಯ ದುಸ್ಸಾಹಸ ಮಾಡಲು ಹೋಗಿ ತಮ್ಮ ಜೀವಕ್ಕೆ ತಾವೇ ಕುತ್ತು ತರುತ್ತಿದ್ದಾರೆ. ಇಂತಹ ಘಟನೆಗಳು ರೈಲು ನಿಲ್ದಾಣದಲ್ಲಿ ಸಾಕಷ್ಟು ಆಗಿವೆ. ಇದೀಗ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲೂ (Hosapete Railway Station) ಇಂತಹ ಘಟನೆ ನಡೆದಿದ್ದು, ರೈಲ್ವೆ ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಗದಗ (Gadag) ಮೂಲದ ಯುವಕನ ಜೀವ ಉಳಿದಿದೆ. ಆಯತಪ್ಪಿ ಯುವಕ ಇನ್ನೇನು ರೈಲಿನಡಿ ಬೀಳುತ್ತಾನೆ ಎನ್ನುವಷ್ಟರಲ್ಲಿ ದೇವರ ರೂಪದಲ್ಲಿ ಬಂದ ಪೊಲೀಸ್ ಸಿಬ್ಬಂದಿ ಯುವಕನನ್ನು ಕೈಯಿಂದ ಪ್ಲಾಟ್​ಫಾರ್ಮ್​ಗೆ ಎಳೆದು ರಕ್ಷಿಸಿದ್ದಾರೆ. ಇದರ ವಿಡಿಯೋವನ್ನು ರೈಲ್ವೆ ಇಲಾಖೆ ತನ್ನ ವೆಬ್ ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ವಿಡಿಯೋದಲ್ಲಿ ಇರುವಂತೆ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ರೈಲ್ವೇ ನಿಲ್ದಾಣಕ್ಕೆ ರೈಲೊಂದು ಬಂದು ಹೋಗುತ್ತಿರುವುದನ್ನು ಕಾಣಬಹುದು. ಈ ರೈಲು ವೇಗ ಪಡೆಯುತ್ತಿದ್ದಂತೆ ಅದರೊಳಗಿನಿಂದ ಯುವಕನೋರ್ವ ಕೆಳಗಿಳಿಯಲು ಮುಂದಾಗಿದ್ದಾನೆ. ಪರಿಣಾಮ ಆಯತಪ್ಪಿ ಯುವಕ ಇನ್ನೇನು ರೈಲಿನಡಿ ಬೀಳುತ್ತಾನೆ ಎನ್ನುವಷ್ಟರಲ್ಲಿ ನೋಡಿದ ರೈಲ್ವೇ ಪೊಲೀಸ್ ಸಿಬ್ಬಂದಿ ಸಂತೋಷ್ ರಾಠೋಡ್ ಯುವಕನನ್ನು ಕೈಯಿಂದ ಪ್ಲಾಟ್​ಫಾರ್ಮ್ ಕಡೆ ಎಳೆದಿದ್ದಾರೆ. ಇದರಿಂದಾಗಿ ಯುವಕನ ಜೀವ ಬಚಾವ್ ಆಗಿದೆ. ಘಟನೆ ದೃಶ್ಯಾವಳಿಗಳು ರೈಲ್ವೇ ನಿಲ್ದಾಣದಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Viral Video: ಬೆಂಗಳೂರಿನಲ್ಲಿ ಹಿಂಬದಿಯಿಂದ ಬಂದು ಪಾದಚಾರಿಗಳನ್ನು ಭಯಗೊಳಿಸುವ ಬೈಕ್ ಸವಾರರು! ಇಬ್ಬರು ಅರೆಸ್ಟ್

ಇತ್ತೀಚೆಗೆ ಇಂತಹದ್ದೇ ಒಂದು ಘಟನೆ ಕಲಬುರಗಿಯಲ್ಲಿ ನಡೆದಿದತ್ತು. ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಹಿಳೆಯೊಬ್ಬರು ಕಾಲು ಜಾರಿ ಕೆಳಗೆ ಬಿದ್ದಿದ್ದು, ಹಳಿಗೆ ಬೀಳುವುದರಲ್ಲಿ ಕೂದಲೆಳೆಯಲ್ಲಿ ಬಚಾವ್ ಆಗಿದ್ದರು. ಯುವತಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸುತ್ತಿದ್ದಳು. ಈ ವೇಳೆ ಸಾಧ್ಯವಾಗದಿದ್ದಾಗ ಭದ್ರತಾ ಸಿಬ್ಬಂದಿ ಆಕೆಯನ್ನು ರೈಲಿಗೆ ಹತ್ತುವುದನ್ನು ತಡೆದು ಪಕ್ಕಕ್ಕೆ ಕೊಂಡೊಯ್ದರು. ಇದೇ ಹೊತ್ತಿಗೆ ಹಿಂಬದಿಯಲ್ಲಿ ಸುಮಾರು 50 ವರ್ಷದ ಮಹಿಳೆಯೊಬ್ಬರು ಅದೇ ರೈಲಿಗೆ ಹತ್ತಲು ಮುಂದಾಗಿ ಕಾಲು ಜಾರಿ ಬಿದ್ದಿದ್ದರು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮತ್ತು ಕಾರ್ಮಿಕರೊಬ್ಬರು ಮಹಿಳೆ ಹಳಿಗೆ ಬೀಳದಂತೆ ಎಳೆದು ರಕ್ಷಣೆ ಮಾಡಿದ್ದರು. ಸಿನಿಮೀಯ ಶೈಲಿಯಲ್ಲಿ ಆರ್‌ಪಿಎಫ್ ಸಿಬ್ಬಂದಿ ಮತ್ತು ಕಾರ್ಮಿಕರೊಬ್ಬರು ಮಹಿಳೆಯನ್ನು ರಕ್ಷಣೆ ಮಾಡುವ ಸಾಹಸದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ