ಸೌಲಭ್ಯಗಳಿಂದ ವಂಚಿತವಾಗಿರುವ ಹರನಾಳ ಗ್ರಾಮದ ಮಕ್ಕಳ ಭವಿಷ್ಯ ಚಿಂತಿಸುವವರ್ಯಾರು?
ಬಿಸಿಲು ಮಳೆ ಚಳಿ ನಡುವೆ ಇವರೆಲ್ಲಾ ಅಕ್ಷರ ಕಲಿಯಲು ಪಡಬಾರದ ಪಾಡು ಪಡುತ್ತಿದ್ದಾರೆ. ಜನ ಪ್ರತಿನಿಧಿಗಳು, ಶಿಕ್ಷಣ ಸಚಿವರು ಹಾಗೂ ಸರ್ಕಾರ ಇವರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇದು ಹರನಾಳ ಗ್ರಾಮದ ಶಾಲಾ ಮಕ್ಕಳ ಗೋಳಿನ ಕಥೆ.
ವಿಜಯಪುರ: ಶಿಕ್ಷಣ ಎಲ್ಲರ ಹಕ್ಕು, ಎಲ್ಲಾ ಮಕ್ಕಳು ಶಿಕ್ಷಣ ಹಕ್ಕಿನಿಂದ ವಂಚಿತರಾಗಬಾರದೆಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತದೆ. ಅದಕ್ಕಾಗಿ ಅಪಾರ ಪ್ರಮಾಣದ ಹಣವನ್ನೂ ಖರ್ಚು ಮಾಡುತ್ತದೆ. ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಶಿಕ್ಷಣ ಉತ್ತಮ ಸಮಾಜ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದೇ ಶಿಕ್ಷಣ ಪಡೆಯಲು ಹರನಾಳ ಗ್ರಾಮದ ಶಾಲಾ ಮಕ್ಕಳು ನಿತ್ಯ ಶಿಕ್ಷೆ ಅನುಭವಿಸುತ್ತಾರೆ. ಬಿಸಿಲು ಮಳೆ ಚಳಿ ನಡುವೆ ಇವರೆಲ್ಲಾ ಅಕ್ಷರ ಕಲಿಯಲು ಪಡಬಾರದ ಪಾಡು ಪಡುತ್ತಿದ್ದಾರೆ. ಜನ ಪ್ರತಿನಿಧಿಗಳು, ಶಿಕ್ಷಣ ಸಚಿವರು ಹಾಗೂ ಸರ್ಕಾರ ಇವರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಶಾಲಾ ಮಕ್ಕಳ ಗೋಳಿನ ಕಥೆ ಇಲ್ಲಿದೆ ನೋಡಿ.
ಹರನಾಳ ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಶಾಲೆಗೆ ಹಾಜರಾಗಬೇಕೆಂದರೆ ನಡೆದುಕೊಂಡೇ ಹೋಗಬೇಕು. ನಿತ್ಯ ಹದಿನೈದು ಕಿ.ಮೀ. ನಡೆದು ಹೋಗಿಬರುವುದು ಸಾಮಾನ್ಯವಾಗಿದೆ. ಗ್ರಾಮದಲ್ಲಿ 60 ಕ್ಕೂ ಹೆಚ್ಚು ಮಕ್ಕಳು ಶಾಲಾಗೆ ಹೋಗುತ್ತಾರೆ. ಪುಟ್ಟ ಗ್ರಾಮದಲ್ಲಿ ಅಂಗನವಾಡಿ ಬಿಟ್ಟರೆ ಸರ್ಕಾರಿ ಶಾಲೆ ಇಲ್ಲ. ಒಂದನೇ ತರಗತಿಗೆ ಹೋಗಬೇಕೆಂದರೆ ತಿಕೋಟಾಕ್ಕೆ ಹೋಗಬೇಕಾದ ಅನಿವಾರ್ಯತೆ ಇಲ್ಲಿದೆ. ಗ್ರಾಮದ ಎಲ್ಲಾ ಮಕ್ಕಳು ತಿಕೋಟಾ ಪಟ್ಟಣದ ವಿವಿಧ ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಹರನಾಳ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯವಿಲ್ಲಾ. ಸರ್ಕಾರಿ ಬಸ್ ಇಲ್ಲದ ಕಾರಣ ಗ್ರಾಮದ ಮಕ್ಕಳೆಲ್ಲಾ ನಿತ್ಯ ಶಾಲೆಗೆ ನಡೆದುಕೊಂಡು ಹೋಗಿ ಬರುವುದನ್ನು ಮಾಡುತ್ತಾರೆ. ಬಿಸಿಲು ಮಳೆ ಚಳಿ ಏನೇ ಇರಲಿ ಹರನಾಳ ಗ್ರಾಮದ ಶಾಲಾ ಮಕ್ಕಳು ಬೆಳಿಗ್ಗೆ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಶಾಲೆ ಬಿಟ್ಟ ಬಳಿಕ ವಾಪಸ್ ನಡೆದುಕೊಂಡು ಮನೆ ಸೇರಬೇಕಿದೆ.
ಈ ಸಮಸ್ಯೆಯಿಂದಾಗಿ ಮಕ್ಕಳಿಗೆ ಸರಿಯಾಗಿ ಓದಲು ಬರೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಬಸ್ ಸೌಲಭ್ಯವಿಲ್ಲದ್ದು ಇವರ ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಮಧ್ಯಮ ವರ್ಗದ ಜನರು, ಬಡವರು ರೈತಾಪಿ ವರ್ಗದವರೇ ವಾಸ ಮಾಡುವ ಹರನಾಳ ಗ್ರಾಮದಲ್ಲಿ ತಮ್ಮೂರಿನ ಮಕ್ಕಳಿಗೆ ಖಾಸಗಿ ವಾಹನವನ್ನಾದರೂ ವ್ಯವಸ್ಥೆ ಮಾಡುವ ಶಕ್ತಿಯಿಲ್ಲಾ. ಖಾಸಗಿ ವಾಹನ ಮಾಡುವಷ್ಟು ಸ್ಥಿತಿವಂತರಿಲ್ಲಾ. ಹಾಗಾಗಿ ಪ್ರತಿನಿತ್ಯ ಒಟ್ಟು 15 ಕಿ.ಮಿ. ನಡೆದುಕೊಂಡು ಹೋಗಿ ಬರೋದು ಇವರಿಗೆ ಶಾಪವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ.
ಹರನಾಳ ಗ್ರಾಮದಿಂದ ತಿಕೋಟಾ 7 ಕಿಲೋ ಮೀಟರ್ ದೂರವಿದೆ. ಶಾಲಾ ಮಕ್ಕಳು ಹರನಾಳದಿಂದ ತಿಕೋಟಾ ಪಟ್ಟಣ ತಲುಪಿ ಅಲ್ಲಿಂದ ವಿವಿಧ ಸರ್ಕಾರಿ ಶಾಲೆಗೆ ಹೋಗುತ್ತಾರೆ. ಹೀಗಾಗಿ ನಿತ್ಯ 15 ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಿ ಬರುವುದು ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದಿದೆ. ಪ್ರಾಥಮಿಕ ಶಾಲೆಗೆ ಹೋಗುವ ಪುಟ್ಟ ಮಕ್ಕಳ ಗೋಳು ಯಾರ ಕಣ್ಣಿಗೂ ಕಾಣದಂತಾಗಿದೆ. ಈ ಮೊದಲು ಶಾಲಾ ಸಮಯಕ್ಕೆ ಬೆಳಿಗ್ಗೆ ಸಾಯಂಕಾಲ ಸರ್ಕಾರಿ ಬಸ್ಸಿನ ವ್ಯವಸ್ಥೆ ಇತ್ತು. ಆದರೆ ನಷ್ಟದ ಕಾರಣದಿಂದ ಸರ್ಕಾರಿ ಬಸ್ ಸಂಚಾರವನ್ನು ಬಂದ್ ಮಾಡಲಾಗಿದೆ.
ಇನ್ನು ಕೆಲ ಸ್ಥಿತಿವಂತರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಾರೆ. ಖಾಸಗಿ ಶಾಲೆಯ ವತಿಯಿಂದ ವಾಹನದ ವ್ಯವಸ್ಥೆಯಿದೆ. ಆದರೆ ಸರ್ಕಾರಿ ಶಾಲೆಗೆ ಹೋಗುವ 60ಕ್ಕೂ ಆಧಿಕ ಮಕ್ಕಳು ನಡೆದುಕೊಂಡು ಹೋಗುವುದು ಅಲಿಖಿತ ನಿಯಮವಾಗಿದೆ. ಮಳೆಗಾಲದಲ್ಲಂತೂ ಇಲ್ಲಿಯ ಮಕ್ಕಳ ಗೋಳು ಹೇಳತೀರದು. ಸುರಿವ ಮಳೆಯಲ್ಲೇ ಹೋಗಿ ಬರುವ ಅದೆಷ್ಟೋ ಮಕ್ಕಳ ಪುಸ್ತಕಗಳು, ನೋಟ್ಸ್ಗಳು ಮಳೆಗೆ ಆಹುತಿಯಾಗಿವೆ. ಹೀಗಾಗಿ ಸಂಬಂಧಿಸಿದ ಆಧಿಕಾರಿಗಳು ಇತ್ತ ಗಮನ ಹರಿಸಿ ಶಾಲಾ ಮಕ್ಕಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಧಿಕಾರಿಗಳು ನಷ್ಟದ ಲೆಕ್ಕ ಹಾಕದೆ ಮೊದಲಿನಂತೆ ಹರನಾಳ ಗ್ರಾಮಕ್ಕೆ ಶಾಲಾ ಸಮಯಕ್ಕೆ ಬಸ್ ಬಿಡುವ ವ್ಯವಸ್ಥೆ ಮಾಡಬೇಕಿದೆ. ಸ್ಥಳಿಯ ಶಾಸಕ ಎಂ.ಬಿ ಪಾಟೀಲ್ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಿದೆ. ಹರನಾಳ ಗ್ರಾಮದ ಸರ್ಕಾರಿ ಶಾಲಾ ಮಕ್ಕಳ ಸಮಸ್ಯೆಗೆ ಶಿಕ್ಷಣ ಇಲಾಖೆ ಸಚಿವರು ಹಾಗೂ ಸಾರಿಗೆ ಇಲಾಖೆ ಸಚಿವರು ಸಹ ಗಮನ ಹರಿಸಿ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕಿದೆ. ಇಲ್ಲವಾದರೆ ಶಿಕ್ಷಣ ಪಡೆಯಲು ಇವರೆಲ್ಲಾ ಶಿಕ್ಷೆ ಅನುಭವಿಸುತ್ತಲೇ ಇರಬೇಕಾಗುತ್ತದೆ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:53 am, Mon, 7 November 22