
ವಿಜಯಪುರ, ಮೇ 29: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಆಸ್ತಿ ವಿವಾದ ಹಿನ್ನೆಲೆ 6 ಜನರ ಭೀಕರ ಹತ್ಯೆ ಮಾಡಲಾಗಿದೆ. ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ಹೋದ ಪರಿಣಾಮ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಅಮಾನುಷ ಕೃತ್ಯ ನಡೆದಿದೆ. ಚಂದು ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ರಾಹುಲ್ ನಿರಾಳೆ, ಸಮರ್ಥ ನಿರಾಳೆ, ಶಬ್ಬೀರ್ ನದಾಫ್ ಸೇರಿದಂತೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಜಮಿನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪನಿರಾಳೆ ಕುಟುಂಬದ ಮಧ್ಯೆ ಜಗಳವಿತ್ತು. ಕಳೆದ ಕೆಲ ದಿನಗಳ ಹಿಂದೆ ಎರಡೂ ಕುಟುಂಬಗಳ ಮಧ್ಯೆ ಈ ಸಂಬಂಧ ನ್ಯಾಯ ಪಂಚಾಯತಿ ಕೂಡ ಆಗಿತ್ತು. 15-20 ಜನರನ್ನು ಒಳಗೊಂಡ ದುರ್ಷರ್ಮಿಗಳ ಗುಂಪು ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಿರಾಳೆ ಕುಟುಂಬದವರ ಮೇಲೆ ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದ್ದು, ಅಟ್ಟಾಡಿಸಿ 6 ಮಂದಿಯನ್ನು ಕೊಲೆ ಮಾಡಲಾಗಿದೆ.
ಇದನ್ನೂ ಓದಿ: ‘ಮಗ, ಸೊಸೆ-ಮೊಮ್ಮಕ್ಕಳು ಬೆಳಗಾಗೋದ್ರೊಳಗೆ ಸತ್ತೋದ್ರು’; ವಿಜಯಪುರ ದುರಂತ, ತಾಯಿಯ ಕಣ್ಣೀರ ಮಾತು
ನಿರಾಳೆ ಕುಟುಂಬದವರು ಗೋವಿಂದಪುರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ 24 ಎಕರೆ ವಿವಾದಿತ ಜಮೀನನ್ನು ಆರು ತಿಂಗಳ ಹಿಂದೆ ಖರೀದಿ ಮಾಡಿದ್ದರು.ಈ ಸಂದರ್ಭದಲ್ಲಿ ವಿವಾದಿತ ಜಮೀನು ಖರೀದಿಸದಂತೆ ಊರಿನ ಅಪ್ಪುಗೌಡ ಪಾಟೀಲ್ ಹಾಗೂ ಕೊಲೆ ಮಾಡಿದ ಆರೋಪಿಗಳು ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ಆದರೂ ಅದನ್ನು ನಿರ್ಲಕ್ಷಿಸಿ ನಿರಾಳೆ ಕುಟುಂಬದವರು ಜಮೀನು ಖರೀದಿ ಮಾಡಿದ್ದರು. ಅಲ್ಲದೇ, ಇದೀಗ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಹೊಲವನ್ನು ಸ್ವಚ್ಛಗೊಳಿಸಿ ಕೃಷಿಗೆ ಸಜ್ಜುಗೊಳಿಸುತ್ತಿದ್ದ ವೇಳೆ ಕುಟುಂಬಸ್ಥರ ಮೇಲೆ ಆರೋಪಿಗಳು ದಾಳಿ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:33 pm, Fri, 29 May 26