ವಿಜಯಪುರ: ಭೋವಿ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಸಾಲ ನೀಡುವ ಹೆಸರಲ್ಲಿ ಮಹಾ ಗೋಲ್ಮಾಲ್ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಸಾಲ ಕೊಡಿಸುವ ವಿಚಾರದಲ್ಲಿ ಕೋಟಿ ಕೋಟಿ ಪಂಗನಾಮ ಹಾಕಲಾಗಿದೆ. ಬಡ ಫಲಾನುಭವಿಗಳಿಗೆ ಲೋನ್ ಹೆಸರಲ್ಲಿ ಏಜೆಂಟರು ಉಂಡೆನಾಮ ಹಾಕಿದ್ದಾರೆ. ಏಜೆಂಟರು, ನಿಗಮದ ಅಧಿಕಾರಿಗಳು, ಐಡಿಬಿಐ ಬ್ಯಾಂಕ್ ಅಧಿಕಾರಿಗಳು ಈ ಮಹಾ ಮೋಸದಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ.
ಅವರೆಲ್ಲಾ ಬಡವರು. ನಿತ್ಯ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಏನೋ ಸರ್ಕಾರದಿಂದ ಸಹಾಯ ಧನ ಸಹಿತ ಸಾಲ ಸಿಗುತ್ತೇ ಅಂತ ನಂಬಿ ಇದೀಗ ಮಹಾ ವಂಚನೆಗೊಳಗಾಗಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಸಾಲದ ಹಣ ಮಂಜೂರಾಗಿ ನಗದಾಗಿದ್ದನ್ನಾ ಎಗರಿಸಿರೋದನ್ನಾ ತಿಳಿದು ದಂಗಾಗಿ ಹೋಗಿದ್ದಾರೆ. ಫಲಾನುಭವಿಗಳ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಏಜೆಂಟರು ಪಾಲಾಗಿದೆ. ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ ಈಗಾ ನನ್ನ ಮೇಲಿನ 5 ಲಕ್ಷ ಸಾಲ ಕಟ್ಟೋದು ಹೇಗೆ ಅಂತ ವಿಧವೆ ಮಹಿಳೆ ಕಣ್ಣೀರು ಹಾಕಿದ್ದಾರೆ. ಕೊಟ್ಟವ ಕೋಡಂಗಿ ಇಸ್ಕೊಂಡವ ವೀರಭದ್ರ ಅನ್ನೋ ಹಾಗೆ ಆಗಿದೆ ಇವರ ಪರಿಸ್ಥಿತಿ. ವಿಜಯಪುರ ತಾಲೂಕಿನ ಮದಭಾವಿ ಗ್ರಾಮದ ಭೋವಿ ಸಮಾಜದ 40 ಫಲಾನುಭವಿಗಳು ಮಹಾವಂಚನೆಗೊಳಗಾಗಿದ್ದಾರೆ. ಭೋವಿ ಅಭಿವೃದ್ಧಿ ನಿಗಮದಿಂದ ಉದ್ಯಮಶೀಲತೆ ಯೋಜನೆ ಅಡಿ ಬಡವರ ಆರ್ಥಿಕ ಸ್ವಾವಲಂಬನೆ ಆಗಲಿ ಅಂತಾ ಸ್ವ ಉದ್ಯೋಗಕ್ಕೆ ಸರ್ಕಾರ ಬ್ಯಾಂಕ್ ಮೂಲಕ ಸಬ್ಸಿಡಿ ಲೋನ್ ಕೊಡುತ್ತದೆ.
ಇದನ್ನೆ ಬಂಡವಾಳ ಮಾಡಿಕೊಂಡಿರೋ ಏಜೆಂಟರು, ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಫಲಾನುಭವಿಗಳಿಗೆ ಪಂಗನಾಮ ಹಾಕಿರೋದು ಬೆಳಕಿಗೆ ಬಂದಿದೆ. ಮೊದಲು ಮದಭಾವಿ ಗ್ರಾಮದ 40 ಫಲಾನುಭವಿಗಳಿಗೆ ಕಾಯಿಪಲ್ಲೆವ್ಯಾಪಾರ ಹಾಗೂ ಮಾರಾಟ, ಕಿರಾಣಿ ಶಾಪ್ ಹಾಕಲು ಹಾಗೂ ಇತರೆ ಸ್ವ ಉದ್ಯೋಗಕ್ಕೆ ತಲಾ 50 ಸಾವಿರ ಸಬ್ಸಿಡಿ ಸಾಲ ಕೊಡುತ್ತೇವೆ ಅಂತ ಹೇಳಿ ಏಜೆಂಟರಾದ, ಪರಶುರಾಮ ಹೊಸಪೇಟೆ, ಪುಂಡಲೀಕ ಮುರಾಳ,ಗುಜ್ಜಲಕೇರಿ,ಕಾಂತು ಒಡೆಯರ ಎಂದು ಜನರನ್ನು ನಂಬಿಸಿದ್ದಾರೆ. ಫಲಾನುಭವಿಗಳಿಂದ ಚೆಕ್ ಗೆ ಮೊದಲೇ ಸಹಿ ಮಾಡಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿ,ಮಾರ್ಚ್ ತಿಂಗಳಲ್ಲಿ ಮದಭಾವಿ ಗ್ರಾಮದ 30 ಜನ ಫಲಾನುಭವಿಗಳಿಗೆ 5 ಲಕ್ಷ , ಹಾಗೂ 10 ಫಲಾನುಭವಿಗಳಿಗೆ 10 ಲಕ್ಷ ಹಣ ಖಾತೆಗೆ ಜಮಾ ಆಗಿದೆ. ತಕ್ಷವೇ ಫಲಾನುಭವಿಗಳಿಂದ ಪಡೆದಿದ್ದ ಚೆಕ್ ಮೂಲಕ ಅವರ ಅಕೌಂಟ್ ನಲ್ಲಿದ್ದ ಎಲ್ಲಾ ಹಣವನ್ನಾ ಚೆಕ್ ಮೂಲಕ ಒಂದೇ ದಿನ ಡ್ರಾ ಮಾಡಿಕೊಂಡಿದ್ದಾರೆ. ಇದೀಗ ಬರೋಬ್ಬರಿ 2 ಕೋಟಿ 50 ಲಕ್ಷ ರೂಪಾಯಿಗಳನ್ನು ನಾಲ್ವರು ಏಜೆಂಟರು ಲಪಟಾಯಿಸಿದ್ದಾರೆ. ಇದಕ್ಕೆ ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಐಡಿಬಿಐ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರೋ ವಾಸನೆ ಬಂದಿದೆ. ಸರ್ಕಾರದಿಂದ ಮಂಜೂರಾದ ಸಬ್ಸಿಡಿ ಸಹಿತ ಸಾಲದ ಹಣದಲ್ಲಿ ನಯಾಫೈಸೆ ಫಲಾನುಭವಿಗಳಿಗೆ ಸಿಕ್ಕಿಲ್ಲ. ಇದರಿಂದ ಫಲಾನುಭವಿಗಳು ವಿಜಯಪುರ ನಗರದ ಐಡಿಬಿಐ ಬ್ಯಾಂಕ್ ಮುಂದೆ ಜಮಾಯಿಸಿ ಅಳಲು ತೋಡಿಕೊಂಡರು
ಇನ್ನು ಐಡಿಬಿಐ ಬ್ಯಾಂಕ್ ನ ಮ್ಯಾನೇಜರ್ ಬ್ಯಾಂಕ್ ನಲ್ಲಿ ಸಿಗದ ಕಾರಣ, ವಂಚನೆಗೊಳಗಾದ ಫಲಾನುಭವಿಗಳು ವಿಜಯಪುರ ಜಿಲ್ಲಾಧಿಕಾರಿ ಮೊರೆ ಹೋಗಿ ಮನವಿ ಸಲ್ಲಿಸಿದರು. ಫಲಾನುಭವಿಗಳ ಹೆಸರಿನಲ್ಲಿ ಲೋನ್ ತೆಗೆದುಕೊಂಡು, ನಮಗೆ ನಯಾ ಪೈಸೆ ಕೊಟ್ಟಿಲ್ಲ. ಮುಂದೆ ಲೋನ್ ತುಂಬೋದು ಹೇಗೆ ಅಂತ ಅಳಲು ತೋಡಿಕೊಂಡರು. ಇದರಲ್ಲಿ ಏಜೆಂಟರು, ನಿಗಮದ ಅಧಿಕಾರಿಗಳು, ಬ್ಯಾಂಕ್ ನವರು ಶಾಮೀಲಾಗಿರೋ ಆರೋಪ ಕೇಳಿ ಬಂದಿದೆ. ಇನ್ನು ಸಾಲದ ಹಣ ಕೇಳಿದರೆ ಏಜೆಂಟರು ಬೆದರಿಕೆ ಹಾಕುತ್ತಿದ್ದಾರಂತೆ. ಫಲಾನುಭವಿಗಳ ಮೊಬೈಲ್ ಗೆ ಹಣ ತೆಗೆದಿರೋ ಮೆಸೆಜ್ ಬಂದ ಬಳಿಕ ವಂಚನೆ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ಫಲಾನುಭವಿಗಳು ಬ್ಯಾಂಕ್ ನವರನ್ನು ವಿಚಾರಿಸಿದರೆ ಸ್ಪಂದಿಸುತ್ತಿಲ್ಲ. ಫಲಾನುಭವಿಗಳ ಹೆಸರಿನಲ್ಲಿ ಕೋಟಿ ಕೋಟಿ ಹಣ ನುಂಗಿದ ಪ್ರಕಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಕೊಡಬೇಕಿದೆ. ಈ ಬಗ್ಗೆ ತನಿಖೆ ನಡೆದಿ ಸೂಕ್ತ ಕ್ರಮ ತೆಗೆದುಕೊಳ್ಳೋದಾಗಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಬಡ ಫಲಾನುಭವಿಗಳ ಹೆಸರಲ್ಲಿ ಏಜೆಂಟರು ಬ್ಯಾಂಕ್ ಮೂಲಕವೇ ಕೋಟಿ ಕೋಟಿ ಹಣ ಪಂಗನಾಮ ಹಾಕಿರೋದು ಮಾತ್ರ ವಿಪರ್ಯಾಸ. ಇನ್ಮೇಲಾದರೂ ಜಿಲ್ಲಾಡಳಿತ ತಪ್ಪಿತಸ್ಥ ಅಧಿಕಾರಿಗಳು, ಏಜೆಂಟರು, ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಅಂತ ಕಾದು ನೋಡಬೇಕಿದೆ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಇದನ್ನೂ ಓದಿ: ಮಗಳಿಗೆ ಎಸ್ ಸಿ ಸರ್ಟಿಫಿಕೇಟ್ ಪಡೆದುಕೊಂಡಿರುವ ರೇಣುಕಾಚಾರ್ಯ ವಿರುದ್ಧ ಕ್ರಮ ಜರುಗಲೇಬೇಕು: ಸಿದ್ದರಾಮಯ್ಯ
Covid 4th Wave: ಚೀನಾ, ಯುರೋಪ್ನಲ್ಲಿ ಹೆಚ್ಚಿದ ಕೊರೊನಾವೈರಸ್ ಕೇಸ್; ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ
Published On - 5:21 pm, Fri, 25 March 22