ವಿಜಯಪುರ, ಜುಲೈ 02: ರೈತ ದೇಶಕ್ಕೆ ಬೆನ್ನೆಲುಬು, ರೈತನಿಗೆ ಎತ್ತು (Bull) ಬೆನ್ನೆಲುಬು. ರೈತನ ಕೃಷಿ ಕಾರ್ಯದಲ್ಲಿ ಎತ್ತು ಸಾತ್ ನೀಡುತ್ತದೆ. ರೈತನಿಗೆ ಎತ್ತು ಜೀವನಾಡಿ ಇದ್ದ ಹಾಗೆ. ರೈತ ಎತ್ತುಗಳನ್ನು ಮನೆ ಮಗನಂತೆ ಸಾಕುತ್ತಾನೆ. ಉತ್ತರ ಕರ್ನಾಟಕ ಭಾಗದಲ್ಲಿ ಕಾರ ಹುಣ್ಣಿಮೆ ಸಮಯದಲ್ಲಿ ಎತ್ತುಗಳ ಓಟ ಸ್ಪರ್ಧೆ ನಡೆಯುತ್ತದೆ. ಮತ್ತು ಬೇಸಿಗೆ ಕಾಲದಲ್ಲೂ ಎತ್ತುಗಳ ಓಟ ಸ್ಪರ್ಧೆ ಆಯೋಜಿಸಲಾಗಿರುತ್ತದೆ. ತೆರಬಂಡಿ ಓಟ ಸ್ಪರ್ಧೆ ಮೂಲಕ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದ ಎತ್ತು ಇದೀಗ ಬರೊಬ್ಬರಿ ಎತ್ತು (Ox) 18 ಲಕ್ಷಕ್ಕೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ವಿಜಯಪುರ (Vijayapur) ಜಿಲ್ಲೆಯ ಬಬಲೇಶ್ವರ (Babaleshwar) ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬುವರಿಗೆ ಸೇರಿದ ಎತ್ತು, ತೆರಬಂಡಿ ಎಳೆಯುವುದರಲ್ಲಿ ನಿಸ್ಸೀಮ. ಉತ್ತರ ಕರ್ನಾಟಕ ಭಾಗದ ಯಾವುದೇ ಜಿಲ್ಲೆಯಲ್ಲಿ ತೆರಬಂಡಿ ಸ್ಪರ್ಧೆ ನಡೆದರೂ, ಈ ಎತ್ತು ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿತ್ತು. ಎತ್ತು ಇಲ್ಲಿಯವರೆಗೆ 15 ಲಕ್ಷ ರೂ. ಹಣ, 40 ಗ್ರಾಂ ಚಿನ್ನ, ಎರಡು ಬೆಳ್ಳಿ ಗದೆ, 4 ಬೈಕ್ ಗೆದ್ದಿದೆ.
ಮಾಲೀಕ ರಾಮನಗೌಡ ಪಾಟೀಲ್ ಎತ್ತಿಗೆ ಹಿಂದೂಸ್ಥಾನ ಹೆಚ್ಪಿ ಎಂದು ನಾಮಕರಣ ಮಾಡಿದ್ದಾರೆ. ಐದುವರೆ ಅಡಿ ಎತ್ತರವಿರುವ ಎತ್ತಿಗೆ ಮಾಲಿಕ ನಿತ್ಯ ಪೌಷ್ಟಿಕಾಂಶ ಆಹಾರ ನೀಡುತ್ತಿದ್ದನು. ಹಾಲು, ಮೊಟ್ಟೆ ದವಸ ಧಾನ್ಯ ಆಹಾರವಾಗಿ ನೀಡುತ್ತಿದ್ದನು.
ಇದನ್ನೂ ಓದಿ: ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್ ಟಿಸಿ ಏರಿ ಕೂತರು: ಜನರ ಹುಚ್ಚಾಟದ ವಿಡಿಯೋ ನೋಡಿ
ಬಬಲಾದಿಯಲ್ಲಿ ನಡೆದ ತೆರಬಂಡಿ ಎತ್ತಿನ ಸ್ಪರ್ಧೆಗೆ ಬಂದಿದ್ದ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ರೈತ ಸದಾಶಿವ ಡಾಂಗೆ, ಈ ಎತ್ತನ್ನು ಕಂಡು ಮಾರು ಹೋಗಿದ್ದಾರೆ. ರೈತ ಸದಾಶಿವ ಡಾಂಗೆ ಈ ಎತ್ತನ್ನು ಕೊಂಡುಕೊಳ್ಳಲೇಬೇಕು ಎಂದು ನಿರ್ಧರಿಸಿದ್ದಾರೆ. ನಂತರ, ಎತ್ತಿನ ಮಾಲಿಕ ರಾಮನಗೌಡ ಪಾಟೀಲ್ ಅವರ ಬಳಿ ಹೋಗಿ ಎತನ್ನು ನಾನು ಕೊಂಡುಕೊಳ್ಳುವೆ ಎಂದಿದ್ದಾರೆ. ಅದಕ್ಕೆ ರಾಮನಗೌಡ ಪಾಟೀಲ್ ನಾನು ಎತ್ತನ್ನು ಮಾರುವುದಿಲ್ಲ ಎಂದಿದ್ದಾರೆ. ಆದರೂ ಕೂಡ ಸದಾಶಿವ ಡಾಂಗೆ ನೀವು ಮಾರಲೇಬೇಕು ನಾನು ಕೊಂಡೇ ತೀರುವೆ ಎಂದು ಹಟ ಹಿಡಿದಿದ್ದಾರೆ.
ಆಗ, ರಾಮನಗೌಡ ಪಾಟೀಲ್ “ಎತ್ತಿನ ಬೆಲೆಯನ್ನು ಹೆಚ್ಚಿಗೆ ಹೇಳಿದರೆ ಈತ ಕೊಂಡುಕೊಳ್ಳುವುದರಿಂದ ಹಿಂದೆ ಸರೆಯುತ್ತಾನೆ” ಎಂದು 18 ಲಕ್ಷದ 1 ಸಾವಿರ ಎಂದು ಬೆಲೆ ಹೇಳಿದ್ದಾರೆ. ಅದಕ್ಕೆ ಸದಾಶಿವ ಡಾಂಗೆ ಸರಿ ಅಂತ 18 ಲಕ್ಷದ 1 ಸಾವಿರ ಸ್ಥಳದಲ್ಲೇ ಎಣಿಸಿ ರಾಮನಗೌಡ ಪಾಟೀಲ್ ಅವರ ಕೈಗೆ ನೀಡಿದ್ದಾರೆ. ರಾಮನಗೌಡ ಪಾಟೀಲ್ ವಿಧಿ ಇಲ್ಲದೆ ಎತ್ತನ್ನು ಮಾರಿದ್ದಾರೆ. ಈ ಎತ್ತು ಹೊರತಾಗಿ ರಾಮನಗೌಡ ಪಾಟೀಲ್ ಅವರ ಬಳಿ ಇನ್ನೂ 4-5 ಎತ್ತುಗಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ