ವಿಜಯಪುರ: ಕೃಷ್ಣಾ ನದಿ ಪಾಲಾದ ಐವರಲ್ಲಿ ಮೂವರ ಶವ ಪತ್ತೆ, ಮುಂದುವರೆದ ಶೋಧ
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣ ನದಿಯ ತಟದಲ್ಲಿ ಎಂಟು ಜನರು ಇಸ್ಪೀಟ್ ಆಡುತ್ತಿದ್ದರು. ಈ ವಿಚಾರ ತಿಳಿದು ಪೊಲೀಸರು ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಎಂಟೂ ಜನರು ತೆಪ್ಪದಲ್ಲಿ ನದಿಯ ಮತ್ತೊಂದು ತಟಕ್ಕೆ ಹೋಗುತ್ತಿದ್ದ ವೇಳೆ ತೆಪ್ಪ ಮಗಚಿದೆ. ಐವರು ನೀರು ಪಾಲಾಗಿದ್ದು, ಮೂವರ ಮೃತ ದೇಹ ಸಿಕ್ಕಿದೆ. ಮೂವರು ಈಜಿ ದಡ ಸೇರಿದ್ದಾರೆ.
ವಿಜಯಪುರ, ಜುಲೈ 03: ಕೊಲ್ಹಾರ (Kolhar) ತಾಲೂಕಿನ ಬಳೂತಿ ಜಾಕವೆಲ್ ಬಳಿ ತೆಪ್ಪ ಮಗುಚಿ ಕೃಷ್ಣಾ ನದಿಯಲ್ಲಿ (Krishna River) ಐವರು ನೀರು ಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಮೃತದೇಹ ಪತ್ತೆಯಾಗಿದ್ದು, ಇಬ್ಬರಿಗಾಗಿ ಶೋಧಕಾರ್ಯ ನಡೆದಿದೆ. ನೀರು ಪಾಲಾಗಿದ್ದ ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ (40), ಕೊಲ್ಹಾರ ಪಟ್ಟಣದ ನಿವಾಸಿ ದಶರಥ ಗೌಡರ್ (54) ಮೃತದೇಹ ಪತ್ತೆಯಾಗಿವೆ. ಆಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಶವಗಳನ್ನು ರವಾನೆ ಮಾಡಲಾಗಿದೆ. ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲೀಕಾರಗಾಗಿ ಅಗ್ನಿಶಾಮಕ ದಳ, ಪೊಲೀಸರಿಂದ ಶೋಧಕಾರ್ಯ ನಡೆದಿದೆ.
ಬಳೂತಿ ಜಾಕ್ವೆಲ್ ಬಳಿಯ ಕೃಷ್ಣ ನದಿ ತಟದಲ್ಲಿ ಎಂಟು ಜನರು ಇಸ್ಪೀಟ್ ಆಟವಾಡುತ್ತಿದ್ದರು. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಾರೆಂಬ ಮಾಹಿತಿ ದೊರೆಯುತ್ತಿದ್ದಂತೆ ಭಯದಿಂದ ತಪ್ಪಿಸಿಕೊಳ್ಳಲು ತೆಪ್ಪದ ಮೂಲಕ ನದಿಯ ತಟಕ್ಕೆ ಹೋಗುತ್ತಿದ್ದರು. ಆದರೆ, ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನಡು ನದಿಯಲ್ಲಿ ಮಗುಚಿ ಬಿದ್ದಿದೆ. ನಂತರ, ಕೊಲ್ಹಾರ ಪಟ್ಟಣದ ಸಚಿನ್ ಕಟಬರ ಈಜಿ ದಡ ಸೇರಿದ್ದಾನೆ. ಬಶೀರ್ ಹೊನವಾಡ ಎಂಬಾತ ಈಜಿ ದಡ ಸೇರಿ ಗುಪ್ತವಾಗಿ ಮನೆ ಸೇರಿದ್ದಾನೆ. ಸ್ಥಳದಲ್ಲೇ ಇದ್ದ ಜಗದೀಶ ಸುಣಗದ ಹಾಗೂ ಮುತ್ತು ಬಾನಿ ಎಂಬುವರು ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಫಾರುಖ ಫತ್ತೇಮಹದ್ ಎಂಬಾತನನ್ನು ರಕ್ಷಣೆ ಮಾಡಿದ್ದಾರೆ. ಉಳಿದ ಐವರು ನೀರು ಪಲಾಗಿದ್ದಾರೆ. ಐವರಲ್ಲಿ ಮೂವರ ಮೃತ ದೇಹ ಪತ್ತೆಯಾಗಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಸಾವು
ಘಟನೆ ಸಂಬಂಧ ಪ್ರತ್ಯೇಕ್ಷದರ್ಶಿ ಬಶೀರ್ ಹೊನವಾಡ ಮಾತನಾಡಿ, ಎಂಟು ಜನರು ನದಿ ತಟದಲ್ಲಿ ಇಸ್ಪೀಟ್ ಆಡುತ್ತಿದ್ದರು. ಆಗ ಪೊಲೀಸರು ಬರುತ್ತಾರೆಂಬ ಕಾರಣ ಎಲ್ಲರೂ ಓಡಿದರು. ತೆಪ್ಪದಲ್ಲಿ ಹತ್ತಿದರು. ನಾನೂ ಗಾಬರಿಯಾಗಿ ತೆಪ್ಪದಲ್ಲಿ ಹತ್ತಿದೆ. ತೆಪ್ಪದಲ್ಲಿದ್ದವರು ಬೇಡಾ ಎಂದು ಕೆಳಗಿಳಿಸಿದರು. ತೆಪ್ಪದಲ್ಲಿ ನದಿಯ ಆಚೆ ದಡದತ್ತ ತೆರಳುತ್ತಿತ್ತು. ಆಗ ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಕೆಲ ಹೊತ್ತಿನಲ್ಲೇ ತೆಪ್ಪ ನದಿಯಲ್ಲಿ ಮಗುಚಿ ಎಲ್ಲರೂ ನದಿ ಪಾಲಾದರು. ಇಸ್ಪೀಟ್ ಆಡುತ್ತಿದ್ದವರು ಓಡುತ್ತಿದ್ದ ಕಾರಣ ಭಯದಲ್ಲಿ ಅವರ ತೆಪ್ಪ ಏರಿದ್ದೆ. ಆದರೆ ನಾನು ಇಸ್ಪೀಟ್ ಆಡಲು ಹೋಗಿಲ್ಲ ಎಂದು ಹೇಳಿದರು.
ಮೆಹಬೂಬ್ ತಂದೆ ನೂರಲಿ ವಾಲಿಕಾರ ಮಾತನಾಡಿ, ಪೊಲಿಸರು ಬೆನ್ನು ಹತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಹೋದಾಗ ಘಟನೆ ನಡೆದಿದೆ. ಇದು ಆಗ ಬಾರದಿತ್ತು, ಆಗಿ ಬಿಟ್ಟಿದೆ. ಪೊಲಿಸರು ಬೆನ್ನು ಹತ್ತಿರದಿದ್ದರೆ ಅವರು ಉಳಿತಾ ಇದ್ದರು ಎಂದು ಕಣ್ಣೀರು ಹಾಕಿದರು.
ನಾಪತ್ತೆಯಾಗಿರುವವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಪತ್ನಿ, ಇಬ್ಬರು ಮಕ್ಕಳ ಹಾಗೂ ಪೋಷಕರನ್ನು ಅಗಲಿರುವ ಮೆಹಬೂಬ್, ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ