ಹಿಂದೂ ಧರ್ಮ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಿ: ಯತ್ನಾಳ್​ ಕರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 06, 2024 | 7:59 PM

ನಾಳೆ(ಸೆ.07) ಎಲ್ಲೆಡೆ ವಿಘ್ನ ವಿನಾಶಕ ಶ್ರೀ ಗಣೇಶ ಚತುರ್ಥಿ. ದೇಶ-ವಿದೇಶಗಳಲ್ಲಿಯೂ ಗಜಾನನ ಆರಾಧನೆ ನಡೆಯುತ್ತದೆ. ಪ್ರಥಮ ಪೂಜಿತನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಎಲ್ಲ ಕಷ್ಟಗಳನ್ನು ನಿವಾರಿಸುವ ಲಂಬೋಧರನಿಗೆ ಬೇಡಿಕೊಳ್ಳುತ್ತೇವೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಗಣೇಶನ ಹಬ್ಬದ ವೇಳೆ ಒಂದಿಲ್ಲ ಒಂದು ವಿವಾದಗಳು ಹುಟ್ಟುತ್ತಿರುತ್ತದೆ. ಈ ಬಾರಿ ನಗರ ಶಾಸಕ ಯತ್ನಾಳ್​. ‘ಹಬ್ಬದ ವೇಳೆ ವ್ಯಾಪಾರ ವಹಿವಾಟಿನ ಕುರಿತು ಹಿಂದೂ ಸಮಾಜದವರಿಗೆ ಮನವಿ ಮಾಡಿದ್ದು, ವಿವಾದದ ಬಾಗಿಲು ತಟ್ಟಿದೆ. ಅದೇನಂತೀರಾ? ಈ ಸ್ಟೋರಿ ಓದಿ.

ಹಿಂದೂ ಧರ್ಮ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಿ: ಯತ್ನಾಳ್​ ಕರೆ
ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ, ಸೆ.06: ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal)​ ಯಾವಾಗಲೂ ಸುದ್ದಿಯಲ್ಲಿರುವ ರಾಜಕಾರಣಿ. ಸ್ವ-ಪಕ್ಷ ವಿರೋಧ ಪಕ್ಷವೆಂಬ ಬೇಧ-ಭಾವವಿಲ್ಲದೇ ನೇರಾನೇರ ಮಾತನಾಡುವ ನಾಯಕ. ಯತ್ನಾಳ್​ ಮಾತು ಒಂದಲ್ಲಾ ಒಂದು ವಿವಾದಕ್ಕೆ ಗ್ರಾಸವಾಗುತ್ತವೆ. ಸಧ್ಯ ಗಣೇಶ ಚತುರ್ಥಿ ಹಬ್ಬದ ಮಾರುಕಟ್ಟೆ ವ್ಯಾಪಾರ, ವಹಿವಾಟಿನ ವಿಚಾರದಲ್ಲಿ ಬಿಜೆಪಿ ಶಾಸಕ ಯತ್ನಾಳ್​ ಮಾಡಿಕೊಂಡಿರುವ ಮನವಿ ಚರ್ಚೆಗೆ ಈಡಾಗಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ.

ಏನದು ಯತ್ನಾಳ್​ ಮನವಿ

ಹಬ್ಬ ಹರಿದಿನಗಳು ಸೇರಿ ಇತರೆ ದಿನಗಳಲ್ಲೂ ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯವನ್ನು ಗೌರವಿಸುವ, ಪ್ರೀತಿಸುವ ಹಾಗೂ ಉಳಿಸಿ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಬೇಕೆಂದು ಬಸನಗೌಡ ಪಾಟೀಲ್​ ಯತ್ನಾಳ್​ ಕರೆ ನೀಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಯತ್ನಾಳ್​, ‘ನಮ್ಮ ಹಿಂದೂ ಧರ್ಮ, ನಮ್ಮ ದೇಶದ ಒಂದು ಜೀವನದ ಪದ್ದತಿ, ಸಂಸ್ಕೃತಿಯಾಗಿದೆ. ದೇಶದ ಸುರಕ್ಷತೆ, ಅಭಿವೃದ್ಧಿ ಜೊತೆಗೆ ಧರ್ಮದ ಉಳಿವಿಗಾಗಿ, ನಮ್ಮ ಧರ್ಮವನ್ನು ಗೌರವಿಸುವ, ದೇಶಾಭಿಮಾನ ಹೊಂದಿರುವ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರಿಂದ ಹಿಡಿದು, ದೊಡ್ಡ ವ್ಯಾಪಾರಸ್ಥರ ಹತ್ತಿರ ದಿನಸಿ, ಬಟ್ಟೆ, ಹಣ್ಣು, ತರಕಾರಿ ಯಾವುದೇ ಸಾಮಾಗ್ರಿಗಳನ್ನು ಖರೀದಿಸಬೇಕು. ಇದರಿಂದ ನಮ್ಮ ಧರ್ಮಕ್ಕೆ ಗೌರವ ಮತ್ತು ಕೊಡುಗೆ ನೀಡಿದಂತಾಗುತ್ತದೆ.

ಇದನ್ನೂ ಓದಿ:ವಾಲ್ಮೀಕಿ ನಿಗಮದ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಪಾಟೀಲ್ ಯತ್ನಾಳ್

ಆದರೆ, ಧರ್ಮ ವಿರೋಧಿ, ದೇಶ ವಿರೋಧಿಗಳ ಹತ್ತಿರ ವ್ಯವಹಾರ ಮಾಡಿದರೆ, ನಮ್ಮ ಧರ್ಮಾಚರಣೆಗೆ ಬಳಸುವ ಶುದ್ಧ ವಸ್ತುಗಳು ಸಿಗದೇ, ಅಶುದ್ಧತೆಯ ವಸ್ತುಗಳನ್ನು ಆಚರಣೆಗೆ ಬಳಸಿದಂತಾಗಿ, ನಮ್ಮ ಆಚರಣೆಗಳ ಪವಿತ್ರತೆಯು ಹಾಳಾಗಿ, ಪರಿಶುದ್ಧತೆಯಿಂದ ವಂಚಿತರಾಗುತ್ತೇವೆ. ನಾವು ನಮ್ಮ ಹಿಂದುಸ್ಥಾನವನ್ನು, ಈಗ ಹಿಂದುಗಳ ಮೇಲೆ ಅನ್ಯಾಯ, ದೌರ್ಜನ್ಯವಾಗುತ್ತಿರುವ ಬಾಂಗ್ಲಾ ದೇಶದಂತಾಗಲು ಬಿಡಬಾರದು. ಆದ್ದರಿಂದ ನಮ್ಮ ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಲು ಯಾವುದೇ ಚೌಕಾಸಿ ಮಾಡದೇ, ನಮ್ಮ ಧರ್ಮವನ್ನು ಗೌರವಿಸುವ ನಮ್ಮ ಬಡ ವ್ಯಾಪಾರಿಗಳ ಹತ್ತಿರವೇ ವ್ಯವಹರಿಸಲು ಪ್ರತಿಯೊಬ್ಬರೂ ಮುಂದಾಗಬೇಕು.

ನಮ್ಮ ಧರ್ಮವನ್ನು ಆಚರಿಸುವ ಮೂಲಕ ಧರ್ಮವನ್ನು ಗೌರವಿಸುವ, ಉಳಿಸಿ, ಬೆಳೆಸುವ ನಮ್ಮ ಬಡ ವ್ಯಾಪಾರಿಗಳ ಹತ್ತಿರ ವ್ಯಾಪಾರ ಮಾಡುವುದರಿಂದ ಅವರ ಜೀವನೋಪಾಯಕ್ಕೆ ಮತ್ತು ನಮ್ಮ ಹಿಂದೂ ಧರ್ಮಕ್ಕೆ ಪರೋಕ್ಷವಾಗಿ ಬೆಂಬಲ ಸಹಾಯ, ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ನಮ್ಮ ದೇಶ, ನಮ್ಮ ಧರ್ಮವನ್ನು ಉಳಿಸಿ-ಬೆಳೆಸುವ, ಪ್ರೀತಿಸುವ, ಗೌರವಿಸುವ ಜನರೊಂದಿಗೆ ಮಾತ್ರ ವ್ಯವಹರಿಸಲು, ನಾವೆಲ್ಲ ನಮ್ಮ ಸಣ್ಣ-ಪುಟ್ಟ, ಜಾತಿ-ಭೇಧವನ್ನು ಮರೆತು ಮುಂದಿನ ನಮ್ಮ ಮಕ್ಕಳ, ನಮ್ಮ ಪೀಳಿಗೆಯ ಭವಿಷ್ಯಕ್ಕಾಗಿ ನಾವೆಲ್ಲ ಹಿಂದೂಗಳು ಎಂಬ ಭಾವನೆಯೊಂದಿಗೆ ನಮ್ಮ ಸಹೋದರ-ಸಹೋದರಿಯರನ್ನು ಪ್ರೋತ್ಸಾಹಿಸಿ, ಬೆಳೆಸಲು ಹೊಸ ಹೆಜ್ಜೆಯನ್ನು ಇಡಬೇಕೆಂದು ಕರೆ ನೀಡಿದ್ದಾರೆ. ಇದಕ್ಕೆ ಜಿಲ್ಲಾ ಬಿಜೆಪಿ ಮುಖಂಡರು ಪದಾಧಿಕಾರಿಗಳು, ಹಿಂದೂ ಪರ ಸಂಘಟನೆಗಳು ಹಾಗೂ ಗಜಾನನ ಮಹಾಮಂಡಳಗಳು ಬೆಂಬಲ ನೀಡಿವೆ.

ಪರೋಕ್ಷವಾಗಿ ಅನ್ಯ ಕೋಮಿನ ವ್ಯಾಪಾರಿಗಳ ಜೊತೆ ವ್ಯಾಪಾರ ಮಾಡದಿರಲು ಯತ್ನಾಳ್​ ಮನವಿ

ಪರೋಕ್ಷವಾಗಿ ಅನ್ಯ ಕೋಮಿನ ವ್ಯಾಪಾರಿಗಳ ಜೊತೆಗೆ ಹಿಂದೂ ಸಮಾಜದವರು ಹಬ್ಬ ಹರಿದಿನಗಳು ಅಷ್ಟೇಯಲ್ಲ, ಇತರೆ ದಿನಗಳಲ್ಲಿಯೂ ವ್ಯಾಪಾರ ವಹಿವಾಟು ಮಾಡಬಾರದು ಎಂದು ಯತ್ನಾಳ್​ ಮನವಿ ಮಾಡಿಕೊಂಡಿದ್ದು, ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಿಂದೆಯೂ ಅನ್ಯಕೋಮಿನವರ ವಿಚಾರದಲ್ಲಿ ವಿವಾದದ ಮಾತನಾಡಿರುವ ಯತ್ನಾಳ್ ಮಾತು ಹೊಸತಲ್ಲ ಎಂದು ಮುಸ್ಲಿಂ ಸಮಾಜದ ಮುಖಂಡರು ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ:ಬಸನಗೌಡ ಪಾಟೀಲ್ ಯತ್ನಾಳ್​ಗೆ ಸಿಎಂ ಸಿದ್ದರಾಮಯ್ಯ ಕರೆ: ಪ್ರತಿಭಟನೆ ಕೈಬಿಡಲು ಮನವಿ

ಸಾರ್ವಜನಿಕರ ಗಣೇಶನ ಪ್ರತಿಷ್ಟಾಪನೆ ಯತ್ನಾಳ್ ಸಹಾಯ

ವ್ಯಾಪಾರ ವಹಿವಾಟಿನಲ್ಲೂ ಹಬ್ಬ ಹರಿದಿನಗಳಲ್ಲಿಯೂ ಜಾತಿ ವ್ಯವಸ್ಥೆಯ ಬಗ್ಗೆ ಯತ್ನಾಳ್​ ಕಿಡಿ ಕಾರಿದ್ಧಾರೆಂದು ಅನ್ಯಕೋಮಿನ ವ್ಯಾಪಾರಸ್ಥರು ವಾಗ್ದಾಳಿ ನಡೆಸಿದರು. ಆದರೆ, ಈ ಕುರಿತು ಮಾತನಾಡಲು ಹಿಂದೆ ಸರಿದಿದ್ದಾರೆ. ಇನ್ನು ಯತ್ನಾಳ್​ ನೇತೃತ್ವದಲ್ಲಿ ನಗರ ಭಾಗದಲ್ಲಿ ಗಜಾನನ ಮಹಾ ಮಂಡಳಿಗಳ ಸಾರ್ವಜನಿಕರ ಗಣೇಶನ ಪ್ರತಿಷ್ಟಾಪನೆ ಮಾಡುವವರಿಗೆ ಸಿದ್ದಸಿರಿ ಸಂಸ್ಥೆಯಿಂದ ಸಹಾಯ ಮಾಡುವುದಾಗಿ ಸಂಸ್ಥೆಯವರು ತಿಳಿಸಿದ್ದಾರೆ. ನಗರದಲ್ಲಿ ಪ್ರತಿಷ್ಟಾಪಿಸೋ 500 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗುತ್ತದೆ. ಇವರೆಲ್ಲರಿಗೂ ಈ ಬಾರಿ ಭಗವದ್ಗೀತೆ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ಸೇನೆಯ ಆಧ್ಯಕ್ಷ ರಾಘು ಅಣ್ಣಿಗೇರಿ ಹೇಳಿದ್ದಾರೆ.

ಯುವಕ-ಯುವತಿಯರಿಗೆ ಭಗವದ್ಗೀತೆ ಪುಸ್ತಕ ವಿತರಣೆ

ಧರ್ಮ ಜಾಗೃತಿಗಾಗಿ ಭಗವದ್ಗೀತೆ ಪುಸ್ತಕಗಳನ್ನು ನೀಡಲಾಗುತ್ತಿದೆ. ಬೆಂಗಳೂರಿನ ಗೀತಾ ಪ್ರೆಸ್​ನಿಂದ ತರಿಸಲಾಗಿರುವ ಭಗವದ್ಗೀತಾ ಪುಸ್ತಕಗಳನ್ನು ಯುವಕ-ಯುವತಿಯರಲ್ಲಿ ಹಿಂದೂ ಜಾಗೃತಿ ಮೂಡಿಸಲು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಉತ್ತಮ ಗಣೇಶನ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಿದವರಿಗೆ. ಹಿಂದೂ ಪದ್ದತಿ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿದವರಿಗೆ, ಉತ್ತಮ ಅಲಂಕಾರ, ಪರಿಸರ ಸ್ನೇಹಿ ಗಣಪನ ಪ್ರತಿಷ್ಟಾಪನೆ ಸೇರಿದಂತೆ ಇತರ ಕಾರ್ಯಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸದ್ಯ ಗಣೇಶ ಚತುರ್ಥಿಯ ವೇಳೆ ವ್ಯಾಪಾರ ವಹಿವಾಟಿನ ವಿಚಾರದಲ್ಲಿ ನಗರ ಶಾಸಕ ಯತ್ನಾಳ್​ ಮಾಡಿಕೊಂಡಿರುವ ಮನವಿ ಪರ ವಿರೋಧಗಳಿಗೆ ಸಾಕ್ಷಿಯಾಗಿದೆ. ನಾಳೆಯೇ ಹಬ್ಬವಿರುವ ಕಾರಣ ವ್ಯಾಪಾರ ವಹಿವಾಟು ಸಹ ಜೋರಾಗಿ ನಡೆದಿದೆ. ಇಷ್ಟರ ಮದ್ಯೆ ಯತ್ನಾಳ್​ ಅವರ ಮನವಿ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟಿನಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದು ಸಹ ಗುಟ್ಟಾಗಿಯೇ ಉಳಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ