ವಿಜಯಪುರ: ಜಾತ್ರೆಯಲ್ಲಿ ಬೈಕ್​ ವೀಲ್ಹಿಂಗ್, ನಾಲ್ವರ ಸಾವು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಯುವಕರು ಬೈಕ್​ ವೀಲ್ಹಿಂಗ್​ ಮಾಡಿದ್ದಾರೆ. ವೀಲ್ಹಿಂಗ್ ವೇಳೆ ನಿಯಂತ್ರಣ ತಪ್ಪಿ ಬೈಕ್​ ರಸ್ತೆ ಬದಿ ನಿಂತವರ ಮೇಲೆ ಹರಿದ ಪರಿಣಾಮ​ ಇಬ್ಬರು ಮೃತಪಟ್ಟಿದ್ದಾರೆ. ಮತ್ತು ವೀಲ್ಹಿಂಗ್​ ಮಾಡಿದ ಇಬ್ಬರು ಸಾವೀಗಿಡಾಗಿದ್ದಾರೆ.

ವಿಜಯಪುರ: ಜಾತ್ರೆಯಲ್ಲಿ ಬೈಕ್​ ವೀಲ್ಹಿಂಗ್, ನಾಲ್ವರ ಸಾವು
ಮುದ್ದೇಬಿಹಾಳ ಪೊಲೀಸ್​ ಠಾಣೆ
Follow us
| Updated By: ವಿವೇಕ ಬಿರಾದಾರ

Updated on:Sep 06, 2024 | 12:38 PM

ವಿಜಯಪುರ, ಸೆಪ್ಟೆಂಬರ್​ 06: ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ನಾಲ್ವರು ಮೃತಪಟ್ಟಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ(Muddebihal) ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಗುರುವಾರ (ಸೆ.06) ತಡರಾತ್ರಿ ನಡೆದಿದೆ. ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಮತ್ತು ರಸ್ತೆ ಬದಿ ನಿಂತಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ. ಕುಂಟೋಜಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆಗೆ ಆಗಮಿಸಿದವರು ಮಸಣ ಸೇರಿದಂತಾಗಿದೆ.

ಪ್ರತಿ ವರ್ಷದಂತೆ ಈ ವರ್ಷ ಕುಂಟೋಜಿ ಗ್ರಾಮದ ಬಸವೇಶ್ವರ ದೇವರ ಜಾತ್ರೆ ನಡೆದಿತ್ತು. ಜಾತ್ರೆಗೆ ಸುತ್ತಮುತ್ತ ಗ್ರಾಮಗಳ ಜನರು ಬರುವುದು ವಾಡಿಕೆ. ಹೀಗೆ ಜಾತ್ರೆಗೆ ಬಂದಿದ್ದ ಇಬ್ಬರು ಯುವಕರು ಪಲ್ಸರ್ 200 ಸಿಸಿ ಬೈಕ್​ನಲ್ಲಿ ವ್ಹೀಲಿಂಗ್ ಮಾಡಿದ್ದಾರೆ. ಎರಡು ಬಾರಿ ವ್ಹಿಲೀಂಗ್ ಮಾಡಿ ಮೂರನೇ ರೌಂಡ್ ವ್ಹೀಲಿಂಗ್ ಮಾಡುವ ವೇಳೆ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ರಾಯಚೂರು: ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು, ಕೈಕಾಲು ಛಿದ್ರಗೊಂಡ ಮಕ್ಕಳ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪೋಷಕರು 

ನಿಂಗರಾಜ ಚೌಧರಿ ಹಾಗೂ ಅನೀಲ ಖೈನೂರ ಬೈಕ್ ಹಿಂಬದಿಯಲ್ಲಿ ಕುಳಿತು ವ್ಹೀಲಿಂಗ್ ಮಾಡಿದ್ದಾರೆ. ಆಗ ರಸ್ತೆ ಬದಿ ಜಾತ್ರೆಯ ಪ್ರಯುಕ್ತ ನಾಟಕ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಮುದ್ದೇಬಿಹಾಳ ತಾಲೂಕಿನ ಮಲಗಲದನ್ನಿ ಗ್ರಾಮದ ಯುವಕರ ತಂಡದ ಮೇಲೆ ಬೈಕ್ ಹರಿದಿದೆ. ಪರಿಣಾಮ ಬೈಕ್ ಸವಾರ ತಾಳಿಕೋಟೆ ತಾಲೂಕಿನ ಗೋಟಖಂಡಕಿ ಗ್ರಾಮದ ವಾಸಿ ನಿಂಗರಾಜ ಚೌಧರಿ (22) ಹಾಗೂ ಹಿಂಬದಿ ಸವಾರ ದೇವರಹಿಪ್ಪರಗಿ ತಾಲೂಕಿನ ಹಂಚಲಿ ಗ್ರಾಮದ ನಿವಾಸಿ ಅನೀಲ ಖೈನೂರ (23) ಹಾಗೂ ರಸ್ತೆ ಬದಿ ನಿಂತಿದ್ದ ಮಲಗಲದಿನ್ನಿ ಗ್ರಾಮದ ಉದಯಕುಮಾರ ಪ್ಯಾಟಿ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಮಲಗಲದಿನ್ನಿ ಗ್ರಾಮದ ರಾಯಪ್ಪ ಬಾಗೇವಾಡಿ, ಶಾಹೀದ್ ಹುನಗುಂದ, ಪ್ರಶಾಂತ ಕುರುಬಗೌಡರ, ಹನುಮಂತ ಕುರುಬಗೌಡರ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಯಪ್ಪ ಬಾಗೇವಾಡಿ (24) ಮೃತಟ್ಟಿದ್ದಾಗಿ ಮಾಹಿತಿ ಲಭ್ಯವಾಗಿದೆ. ಇತರೆ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಘಟನೆ ಸುದ್ದಿ ತಿಳಿದು ಸ್ಥಳಕ್ಕೆ ಎಸ್​​ಪಿ ಶಂಕರ ಮಾರೀಹಾಳ, ಡಿವೈಎಸ್ಪಿ ಬನಪ್ಪ ನಂದಗಾವಿ ಹಾಗೂ ಇತರೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ಶವಗಳನ್ನು ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ರವಾನಿಸಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:06 am, Fri, 6 September 24