ದಸರಾ ಹಬ್ಬದಲ್ಲಿ ಅನ್ಯ ಕೋಮಿನವರ ಬಳಿ ವ್ಯಾಪಾರ ಮಾಡಬಾರದು- ಯತ್ನಾಳ್​ ವಿವಾದಾತ್ಮಕ ಹೇಳಿಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 11, 2024 | 10:09 PM

ಹಿಜಾಬ್ ವಿಚಾರ, ಹಲಾಲ್ ಕಟ್, ಜಟಕಾ ಕಟ್ ವಿಚಾರ ರಾಜ್ಯದಲ್ಲಿ ಪ್ರತಿಧ್ವನಿಸಿದ ಬಳಿಕ ಕೋಮು ಸೌಹಾರ್ದತೆಯ ವಿಚಾರವಾಗಿ ಅಲ್ಲಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇದರ ಜೊತೆಗೆ ಹಿಂದೂ ಸಮಾಜದ ಹಬ್ಬ ಹರಿ ದಿನಗಳು ಬಂದಾಗ ಅನ್ಯ ಕೋಮಿನವರ ಜೊತೆಗೆ ವ್ಯಾಪಾರ ವಹಿವಾಟು ನಡೆಸುವ ವಿಚಾರವೂ ಚರ್ಚೆಗೆ ಬರುತ್ತಿದೆ. ಈ ವಿಚಾರದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಹಿಂದೂ ಸಮಾಜದ ಹಬ್ಬಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಬಳಿ ಖರೀಧಿ ಮಾಡಬೇಡಿ ಎಂದು ಹೇಳುತ್ತಲೇ ಬಂದಿದ್ಧಾರೆ. ಸಧ್ಯ ನಾಡಹಬ್ಬ ದಸರಾದಲ್ಲೂ ಮುಸ್ಲಿಂ ವ್ಯಾಪಾರಸ್ಥರ ಬಳಿ ವ್ಯಾಪಾರ ವಹಿವಾಟು ಮಾಡಬಾರದು ಎಂದು ಪ್ರಕಟಣೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ದಸರಾ ಹಬ್ಬದಲ್ಲಿ ಅನ್ಯ ಕೋಮಿನವರ ಬಳಿ ವ್ಯಾಪಾರ ಮಾಡಬಾರದು- ಯತ್ನಾಳ್​ ವಿವಾದಾತ್ಮಕ ಹೇಳಿಕೆ
ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ, ಅ.11: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal)
​ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ನೇರವಾಗಿ ಮಾತನಾಡುವ ಇವರು, ‘ಹಿಜಾಬ್, ಹಲಾಲ್ ಹಾಗೂ ಜಟಕಾ ಕಟ್ ವಿಚಾರ ತೀವ್ರ ಚರ್ಚೆಗೆ ಬಂದ ಬಳಿಕ ಹಿಂದೂಗಳ ದೇವಾಲಯ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಹಾಗೂ ಹಿಂದೂಗಳ ಹಬ್ಬದಲ್ಲಿ ಮುಸ್ಲಿಂ ವ್ಯಾಪಾರಿಗಳ ಬಳಿ ಹಿಂದೂಗಳು ಖರೀದಿ ಮಾಡಬಾರದೆಂದು ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಇದೀಗ ನಾಡಹಬ್ಬ ದಸರಾ ಆಚರಣೆಯಾಗುತ್ತಿದ್ದು, ದಸರಾದಲ್ಲಿ ಹಿಂದೂಗಳು ಮುಸ್ಲಿಂ ವ್ಯಾಪಾರಿಗಳ ಬಳಿ ವ್ಯಾಪಾರ ವಹಿವಾಟು ಮಾಡಬಾರದು ಎಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಹಣೆಗೆ ಕುಂಕುಮ ಹಚ್ಚಿಕೊಂಡು ವ್ಯಾಪಾರ ಮಾಡುವ ಹಿಂದೂಗಳ ಹತ್ತಿರವೇ ಪೂಜಾ ಸಾಮಾಗ್ರಿಗಳನ್ನು ಖರೀದಿಸುವುದರಿಂದ, ನಮ್ಮ ಹಬ್ಬಗಳ ಪಾವಿತ್ರ್ಯತೆ ಕಾಪಾಡಿಕೊಂಡು, ಮಡಿವಂತಿಕೆಯಿಂದ ಧರ್ಮಾನುಸಾರವಾಗಿ ನಡೆದುಕೊಳ್ಳುವ ಜೊತೆಗೆ ಭಗವಂತನ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ. ಪವಿತ್ರ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲದ, ಹಿಂದೂ ದೇವರನ್ನು ನಂಬದ, ಹಿಂದೂಗಳನ್ನು ವಿರೋಧಿಸುವರು ಅಲ್ಲಿಯೇ ತಮ್ಮ ಬುತ್ತಿಯಲ್ಲಿ ಮಾಂಸಾಹಾರ ತಂದು ತಿಂದು ಅಥವಾ ಮನೆಯಲ್ಲಿ ಮಾಂಸಾಹಾರ ತಿಂದು ಬಂದು, ಅಶುದ್ಧತೆಯಿಂದ ವ್ಯಾಪಾರ ಮಾಡುವವರ ಹತ್ತಿರ ಯಾವುದೇ ಕಾರಣಕ್ಕೂ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಬಾರದು. ಅಂತವರ ಹತ್ತಿರ ಖರೀದಿಸಿದ ವಸ್ತುಗಳಿಂದ, ನಾವು ಪೂಜಿಸುವ ಭಗವಂತನ ಪೂಜೆಯು ಅಪವಿತ್ರತೆಯಿಂದ ಕೂಡಿ, ಭಗವಂತನ ಕೃಪೆಗೆ ಪಾತ್ರರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸಿಎಂ ಆಗಲು ‘ಸಾವಿರ ಕೋಟಿ’ ಹಣ ಹೇಳಿಕೆ: ಯತ್ನಾಳ್​ ವಿರುದ್ಧ ಕಾಂಗ್ರೆಸ್​ ದೂರು

ಮುಸ್ಲಿಂ ವ್ಯಾಪಾರಿಗಳಿಂದ ವಿರೋಧ

ಇದಕ್ಕೆ ಮುಸ್ಲಿಂ ವ್ಯಾಪಾರಿಗಳು ವಿರೋಧ ಮಾಡಿದ್ದಾರೆ. ಯತ್ನಾಳ್​ ಸುಮ್ಮನೇ ಮಾತನಾಡುತ್ತಾರೆ. ಈಗ ಯತ್ನಾಳ್​ ಅವರ ಮಾತನ್ನು ಯಾರೂ ಕೇಳುತ್ತಿಲ್ಲ. ಇಲ್ಲಿ ನಾವು ಹಿಂದೂ-ಮುಸ್ಲಿಂ ಎಂಬ ಬೇಧ-ಭಾವವಿಲ್ಲದೇ ವ್ಯಾಪಾರ ಉದ್ಯೋಗ ಮಾಡಿಕೊಂಡು ಹೋಗುತ್ತಿದ್ದೇವೆಂದಿದ್ದಾರೆ.

ಕಳೆದ ಗಣೇಶ ಚತುರ್ಥಿಯ ವೇಳೆಯೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಮುಸ್ಲಿಂ ವ್ಯಾಪಾರಸ್ಥರ ಬಳಿ ವ್ಯಾಪಾರ ವಹಿವಾಟು ಮಾಡಬಾರದು ಎಂದು ಹೇಳಿಕೆ ನೀಡಿದ್ದರು. ಇದೀಗ ದಸರಾ ಹಬ್ಬದಲ್ಲಿಯೂ ಅದೇ ರೀತಿ ಹೇಳಿದ್ದು, ಯತ್ನಾಳ್​ ಮನವಿಗೆ ಕೆಲವರು ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಒಂದು ರೀತಿಯಲ್ಲಿ ಯತ್ನಾಳ್​ ಶಾಸಕರಾಗಿರಲು ಅರ್ಹರಲ್ಲ, ಎಂದು ಆಕ್ರೋಶ ಹೊರ ಹಾಕಿದ್ದಾರೆ. ಜನರಿಂದ ಆಯ್ಕೆಯಾದವರು ಎಲ್ಲರನ್ನು ಸಮಾನವಾಗಿ ಕಾಣಬೇಕು. ಇದು ವೈಯುಕ್ತಿಕ ಹಿತಾಸಕ್ತಿ. ಯತ್ನಾಳ್​ ಸಹ ನಿತ್ಯ ಬಿರಿಯಾನಿ ತಿನ್ನುತ್ತಾರೆ. ಇದೆಲ್ಲಾ ಅವರ ಮಾತಿನ ಚಪಲವಾಗಿದೆ. ಇಲ್ಲಿ ಎಲ್ಲರೂ ಒಂದೆಯಾಗಿದ್ದೇವೆ. ಇದೆಲ್ಲಾ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ತಂತ್ರವೆಂದಿದ್ದಾರೆ.

ಒಟ್ಟಾರೆ ದಸರಾ ಹಬ್ಬದಲ್ಲಿ ನಗರ ಶಾಸಕ ಯತ್ನಾಳ್​, ಮುಸ್ಲಿಂ ವ್ಯಾಪಾರಸ್ಥರ ಬಳಿ ಹಿಂದೂಗಳು ವ್ಯಾಪಾರ ವಹಿವಾಟು ಮಾಡಬಾರದೆಂಬ ಪ್ರಕಟಣೆ ಚರ್ಚೆಗೆ ಗ್ರಾಸವಾಗಿದೆ. ಯತ್ನಾಳ್​ ಬರೀ ಇದೇ ಮಾತನಾಡುತ್ತಾರೆ ಎಂದು ಹಿಂದೂ ಸಮಾಜದ ಕೆಲವರು ಹೇಳಿದರೆ, ಅವರ ಬೆಂಬಲಿಗರು ಇದರಿಂದ ಅಂತರ ಕಾಯ್ದುಕೊಂಡಿದ್ದಾರೆ. ಮುಸ್ಲಿಂ ವ್ಯಾಪಾರಿಗಳು ಮಾತ್ರ ಯತ್ನಾಳ್​ ಹೇಳಿಕೆ ಸರಿಯಿಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ