ಸಿಎಂ ಆಗಲು ‘ಸಾವಿರ ಕೋಟಿ’ ಹಣ ಹೇಳಿಕೆ: ಯತ್ನಾಳ್ ವಿರುದ್ಧ ಕಾಂಗ್ರೆಸ್ ದೂರು
ಸದ್ಯ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಸಾವಿರ ಕೋಟಿ ರೂ. ಬಾಂಬ್ ಸಿಡಿಸಿ, ಹಲ್ಚಲ್ ಎಬ್ಬಿಸಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರವಾಗಿ ಶಾಸಕ ಯತ್ನಾಳ್ ವಿರುದ್ಧ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 30: ಕೆಲವರು ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಶಾಸಕ ಯತ್ನಾಳ್ (Yatnal) ಬಾಂಬ್ ಸಿಡಿಸಿದ್ದರು. ಸದ್ಯ ವಿಚಾರವಾಗಿ ತನಿಖೆಗೆ ಆಗ್ರಹಿಸಿ ಯತ್ನಾಳ್ ವಿರುದ್ಧ ಕಾಂಗ್ರೆಸ್ ನಾಯಕರಿಂದ ದೂರು ನೀಡಲಾಗಿದೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ನಗರದ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಲಾಗಿದೆ.
ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಕಾಂಗ್ರೆಸ್ ಸರ್ಕಾರ ಬೀಳಿಸುವ ಯತ್ನ ನಡೆಯುತ್ತಿದೆ. ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದೇವೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆಲವರು ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಕೊಂಡು ಕಾಯ್ತಿದ್ದಾರೆ: ಶಾಸಕ ಯತ್ನಾಳ್ ಬಾಂಬ್
ಈ ಹೇಳಿಕೆ ಕೊಟ್ಟಿರುವವರ ವಿರುದ್ಧ ಕೇಸ್ ದಾಖಲಿಸಬೇಕು. ಅವರನ್ನ ಕರೆದು ವಿಚಾರಣೆ ನಡೆಸಿ ಎಂದು ದೂರು ನೀಡಿದ್ದೇವೆ. ಪೊಲೀಸರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಇಡಿ, ಐಡಿ ಅಧಿಕಾರಿಗಳು ಇದನ್ನ ಗಮನಿಸಬೇಕು ಎಂದಿದ್ದಾರೆ.
ಇದು ರಾಜಕೀಯ ಪ್ರೇರಿತ: ಮಾಜಿ ಸಂಸದ ಉಗ್ರಪ್ಪ
ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿಯಲ್ಲಿ ಇಸಿಐಆರ್ ದಾಖಲು ವಿಚಾರವಾಗಿ ಮಾತನಾಡಿದ ಅವರು, ಇದು ರಾಜಕೀಯ ಪ್ರೇರಿತ. ಸಿದ್ದರಾಮಯ್ಯರ ಮೇಲೆ ವಿನಾಕಾರಣ ದೂರು ದಾಖಲಾಗುತ್ತಿದೆ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ಯತ್ನ ಮಾಡುತ್ತಿದ್ದಾರೆ. ಎಷ್ಟೇ ಪ್ರಕರಣ ದಾಖಲಾದರೂ ಸಹ ಅದನ್ನ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಯಾರು ಸಾವಿರ ಕೋಟಿ ರೂ ಇಡೋದಿಲ್ಲ: ಶಿವಾನಂದ ಪಾಟೀಲ್
ಈ ವಿಚಾರವಾಗಿ ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ಶಿವಾನಂದ ಪಾಟೀಲ್ ಪ್ರತಿಕ್ರಿಯಿಸಿದ್ದು, ಇದೆಲ್ಲ ಗಾಳಿ ಮಾತು, ಗಾಳಿ ಮಾತಿಗೆ ಉತ್ತರ ಕೊಡಬೇಕಾಗಲ್ಲ. ಶಾಸಕ ಯತ್ನಾಳ್ ನೋಡಿರಬೇಕು ಅದಕ್ಕೆ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ನಮ್ಮ ಪಕ್ಷದಲ್ಲಿ ಯಾರು ಸಾವಿರ ಕೋಟಿ ರೂ. ಇಡೋದು ಇಲ್ಲ, ಇಡುವ ಪ್ರಶ್ನೆಯೂ ಬರಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.