ವಿಜಯಪುರ, ನವೆಂಬರ್ 14: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಸದಾ ಟೀಕೆ ಮಾಡುತ್ತಲೇ ಬಂದಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಈಗ ಮೌನಕ್ಕೆ ಶರಣಾಗಿದ್ದಾರೆ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಪಕ್ಷದ ಹೈಕಮಾಂಡ್ ನೇಮಕ ಮಾಡಿದ ಬೆನ್ನಲ್ಲೇ ಯತ್ನಾಳ್ ಮೌನದ ಮೊರೆ ಹೋಗಿದ್ದಾರೆ.
ಯತ್ನಾಳ್ ಅವರು ರಾಜ್ಯ ಬಿಜೆಪಿ ಆಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದೀಗ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾಗಿರುವುದರಿಂದ ಸಹಜವಾಗಿಯೇ ಅವರಿಗೆ ಹಿನ್ನಡೆಯಾಗಿದೆ. ವಿಜಯೇಂದ್ರ ರಾಜ್ಯ ಬಿಜೆಪಿ ಆಧ್ಯಕ್ಷರಾಗಿ ನೇಮಕವಾಗಿದ್ದು ಯತ್ನಾಳ ಕನಸಿಗೆ ತಣ್ಣೀರೆರಚಿದಂತಾಗಿದೆ ಎಂಬುದು ರಾಜಕೀಯ ಪರಿಣಿತರ ಅಭಿಪ್ರಾಯ. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ವಿಜಯೇಂದ್ರಗೆ ಮಣೆ ಹಾಕಿದ್ದು ಯತ್ನಾಳ ಪಾಳಯದಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಹೀಗಾಗಿ ವಿಜಯೇಂದ್ರ ಬಿಜೆಪಿ ಆಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಯತ್ನಾಳ ಮಾತ್ರ ಮೌನಕ್ಕೆ ಜಾರಿದ್ದಾರೆ. ಬಹಿರಂಗವಾಗಿ ಕಾಣಿಸಿಕೊಳ್ಳದೇ ಓಡಾಡುತ್ತಿದ್ದಾರೆ. ವಿಜಯೇಂದ್ರ ನೇಮಕ ಕುರಿತು ಈವರೆಗೆ ಯಾವುದೇ ಪ್ರತಿಕ್ರಿಯೆನ್ನೂ ನೀಡಿಲ್ಲ. ಈ ಮೂಲಕ ವಿಜಯೇಂದ್ರ ನೇಮಕಾತಿಗೆ ಯತ್ನಾಳ್ ತೀವ್ರ ವಿರೋಧವನ್ನು ಹೊರ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ಪ್ರತಿ ದೀಪಾವಳಿ ಹಬ್ಬದ ವೇಳೆ ತಮ್ಮ ಶಾಸಕರ ಕಚೇರಿಯ ಪಾಡ್ಯದ ಪೂಜೆಗೆ ಯತ್ನಾಳ್ ಆಗಮಿಸಿ ಪೂಜೆಯಲ್ಲಿ ಭಾಗಿಯಾಗುತ್ತಿದ್ದರು. ಆದರೆ ಇಂದು ಶಾಸಕರ ಕಚೇರಿಯಲ್ಲಿ ನಡೆದ ಪಾಡ್ಯದ ಪೂಜೆಯಲ್ಲಿ ಯತ್ನಾಳ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಪಾಲಿಕೆಯ ಸದಸ್ಯರು, ಬೆಂಬಲಿಗರು ಮಾತ್ರ ಹಾಜರಾಗಿದ್ದರು.
ಇದನ್ನೂ ಓದಿ: ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದು ಯಾರಿಗೂ ಅಸಮಾಧಾನವಿಲ್ಲ: ಪ್ರಹ್ಲಾದ್ ಜೋಶಿ
ಮೊದಲಿನಿಂದಲೂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದಿದ್ದಾರೆ ಯತ್ನಾಳ್. ಜೊತೆಗೆ ಕುಟುಂಬ ರಾಜಕಾರಣದ ವಿರುದ್ದವೂ ವಾಗ್ದಾಳಿ ನಡೆಸಿಕೊಂಡು ಬಂದಿದ್ದಾರೆ. ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುವಂತೆ ಮಾಡಿದ್ದರಲ್ಲಿ ಯತ್ನಾಳ ಆರೋಪವೂ ಪ್ರಮುಖ ಪಾತ್ರ ವಹಿಸಿತ್ತು. ಇಷ್ಟೆಲ್ಲದರ ಮದ್ಯೆ ವಿಜಯೇಂದ್ರ ಬಿಜೆಪಿ ರಾಜ್ಯಾದ್ಯಕ್ಷನಾಗಿದ್ದು ಯತ್ನಾಳಗೆ ವಿರೋಧ ಪಕ್ಷ ನಾಯಕರ ಸ್ಥಾನವೂ ಸಿಗದಂತಾಗಿದೆ. ಸದ್ಯದ ಪರಸ್ಥಿತಿಯಲ್ಲಿ ಯತ್ನಾಳ ವಿರೋಧಿಗಳ ಕೈ ಮೇಲಾಗಿರೋ ಕಾರಣ ಯತ್ನಾಳ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಇತ್ತ ವಿರೋಧ ಪಕ್ಷದ ನಾಯಕನ ಸ್ಥಾನ ಒಕ್ಕಲಿಗ ಅಥವಾ ಹಿಂದುಳಿದ ವರ್ಗಕ್ಕೆ ಸಿಗೋ ಸಾಧ್ಯತೆಯೂ ಹೆಚ್ಚಿದೆ. ಇವೆಲ್ಲ ಬೆಳವಣಿಗೆಗಳಿಂದ ಬಹಿರಂಗವಾಗಿ ಕಾಣಿಸಿಕೊಳ್ಳದೇ ಯತ್ನಾಳ್ ಓಡಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ