ಉಪ್ಪಾರ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ನೀಡುವುದಾಗಿ ಬಸವರಾಜ ಬೊಮ್ಮಾಯಿ ಭರವಸೆ
Basavaraj Bommai: 2023ಕ್ಕೆ ನಾವು ಸುಮ್ಮನೆ ಬರಲ್ಲ ಸಾಧನೆ ಜತೆ ಬರುತ್ತೇವೆ. ವಿರೋಧ ಪಕ್ಷದ ಮಾತಿಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.
ವಿಜಯಪುರ: ಉಪ್ಪಾರ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ನಡೆದ ಉಪ್ಪಾರ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಉಪ್ಪಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ಉತ್ತಮ ಕೆಲಸ ಮಾಡುತ್ತಿದ್ದಾರೆ. ಉಪ್ಪಾರ ಸಮಾಜದ ಅಭಿವೃದ್ಧಿಗೆ ಸರ್ಕಾರ 50 ಕೋಟಿ ರೂಪಾಯಿಗಳ ನೀಡಲಿದೆ ಎಂದು ತಿಳಿಸಿದ್ದಾರೆ. ಉಪ್ಪಾರ ಸಮಾಜದ ವತಿಯಿಂದ ಸಿಎಂಗೆ ಸನ್ಮಾನ ಮಾಡಲಾಗಿದೆ.
ನಮಗೆ ಯಾವ ಒಪ್ಪಂದವೂ ಬೇಡ. ಕಾಂಗ್ರೆಸ್ ಈ ಹಿಂದೆ ಯಾರ ಜತೆ ಒಪ್ಪಂದ ಮಾಡಿಕೊಂಡಿತ್ತು. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಗುತ್ತಿಗೆ ತೆಗೆದುಕೊಂಡಿದೆಯಾ? ನಿಜವಾಗಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ ಎಂದು ಬ್ಯಾಕೋಡ ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸಮಾವೇಶಕ್ಕೂ ಮೊದಲು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬ್ಯಾಕೋಡದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿದ್ದಾರೆ.
ಕಾಂಗ್ರೆಸ್ನವರು ಮತ ಹಾಕಿಸಿಕೊಂಡು ಜನರನ್ನು ಅಂಧಕಾರದಲ್ಲಿಡ್ತಾರೆ. ಐದು ವರ್ಷ ನಿಮ್ಮನ್ನು ಅಂಧಕಾರದಲ್ಲಿ ಇಡುತ್ತಾರೆ. 15 ಲಕ್ಷ ಮನೆ ಕೊಟ್ಟೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಬರೀ ಘೋಷಿಸಿ ಹೋದ್ರೆ ಮನೆ ಹೇಗೆ ಕೊಟ್ಟಂತಾಗುತ್ತದೆ. ಅವರು ಘೋಷಣೆ ಮಾಡಿದ ಕೆಲಸ ನಾವು ಮಾಡ್ತಿದ್ದೇವೆ. ಕಾಂಗ್ರೆಸ್ನವರ ಯಾವ ಭಾಗ್ಯವೂ ಜನರ ಮನೆ ತಲುಪಲಿಲ್ಲ. ನರೇಂದ್ರ ಮೋದಿ ಕೊಟ್ಟ ಯೋಜನೆ ಜನರ ಅಕೌಂಟ್ಗೆ ತಲುಪಿದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ರಾತ್ರೋರಾತ್ರಿ ಹಣ ಹಂಚಿ ಅಧಿಕಾರದ ಕನಸು ಕಾಣ್ತಿದ್ದಾರೆ ಎಂದು ಹಣ ಹಂಚಿಕೆ ಬಗ್ಗೆ ಸಿಎಂ ಬೊಮ್ಮಾಯಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್ ಚೀಲದಲ್ಲಿ ಹಣ ತಂದು ಹಂಚುತ್ತಿದ್ದಾರೆ. ಹಾಲುಮತದ ಜನರಿಗೆ ಮಾತಿನಲ್ಲಿ ಹೊಟ್ಟೆ ತುಂಬಿಸುತ್ತಿದ್ದಾರೆ. 2023ಕ್ಕೆ ನಾವು ಸುಮ್ಮನೆ ಬರಲ್ಲ ಸಾಧನೆ ಜತೆ ಬರುತ್ತೇವೆ. ವಿರೋಧ ಪಕ್ಷದ ಮಾತಿಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಮುಂದಿನ ವರ್ಷದಿಂದ ರಾಜ್ಯ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಣೆ: ಬಸವರಾಜ ಬೊಮ್ಮಾಯಿ ಘೋಷಣೆ
ಇದನ್ನೂ ಓದಿ: ಬಿಜೆಪಿ, ಜೆಡಿಎಸ್ಗೆ ನಾನೇ ಟಾರ್ಗೆಟ್; ಇಬ್ಬರಿಗೂ ನನ್ನನ್ನು ಕಂಡರೆ ಭಯ: ಸಿದ್ದರಾಮಯ್ಯ ಹೇಳಿಕೆ