ಆದಿಲ್ ಶಾಹಿಗಳ ಕಾಲದ ಹತ್ತಾರು ಬಾವಿಗಳು ಹೂಳು ತುಂಬಿ ಹಾಳಾಗಿ ಹೋಗಿವೆ, ಪುನ:ಶ್ಚೇತನಕ್ಕೆ ಸಚಿವ ಎಂ ಬಿ ಪಾಟೀಲ್ ಸೂಚನೆ
Adil Shahi wells revival: ಆದಿಲ್ ಶಾಹಿ ಕಾಲದಲ್ಲಿನ ಐತಿಹಾಸಿಕ ಬಾವಿಗಳಿಗೆ ಮತ್ತೆ ಕಂಟಕ.... 2016 ರಲ್ಲಿ ಅಂದಿನ ನೀರಾವರಿ ಸಚಿವ ಎಂ ಬಿ ಪಾಟೀಲ್ ನೇತೃತ್ವದಲ್ಲಿ ಪುನ:ಶ್ಚೇತನಗೊಂಡಿದ್ದ ಬಾವಿಗಳು..... ಹೂಳು ತೆಗೆದ ಬಳಿಕ ನೀರು ಉಪಯೋಗಿಸದ ಕಾರಣ ಪಾಳು ಬೀಳುತ್ತಿರೋ ಬಾವಿಗಳು... ಪುರಾತನ ಕಾಲದ ಬಾವಿಗಳಿಗೆ ಗೇಟ್ ಹಾಕಿ ಬೀಗ ಹಾಕಿರೋ ಆಧಿಕಾರಿಗಳು...
ವಿಜಯಪುರ ಸಾಮ್ರಾಜ್ಯವನ್ನು ಆಳಿದ ಆದಿಲ್ ಶಾಹಿಗಳು ಅಂದಿನ ಕಾಲದಲ್ಲಿ ಕುಡಿಯೋ ನೀರಿಗೆ ಬಹಳ ಪ್ರಾಮುಖ್ಯತೆ ನೀಡಿದ್ದರು. ಅಂದಿನ ಕಾಲದಲ್ಲಿ ನಗರದಲ್ಲೇ 10 ಲಕ್ಷಕ್ಕೂ ಆಧಿಕ ಜನರಿಗೆ ನೀರಿನ ತೊಂದರೆಯಾಗಬಾರದೆಂದು ಹತ್ತಾರು ಬಾವಿಗಳನ್ನು ನಿರ್ಮಾಣ ಮಾಡಿದ್ದರು. ಬಾವಿಗಳನ್ನು ಬಾವಡಿಗಳೆಂದು ಕರೆಯಲಾಗುತ್ತಿತ್ತು. ಇಂತಹ ಬಾವಿಗಳು ಹೂಳು ತುಂಬಿ ಹಾಳಾಗಿ ಹೋಗಿದ್ದವು. ಹಾಳಾಗಿ ಹೋಗಿದ್ದ ಬಾವಿಗಳಿಗೆ 2016 ರಲ್ಲಿ ಪುನಃಶ್ಚೇತನ ಮಾಡಲಾಗಿತ್ತು. ಕೋಟಿ ಕೋಟಿ ಖರ್ಚು ಮಾಡಿ ಹೂಳು ತೆಗೆಸಿ ಗತವೈಭವ ಮರಳುವಂತೆ ಮಾಡಲಾಗಿತ್ತು. ಜೊತೆಗೆ ಈ ಬಾವಿಗಳ ನೀರನ್ನು ಬಳಕೆ ಮಾಡಲು ನೀಲನಕ್ಷೆ ಮಾಡಲಾಗಿತ್ತಾದರೂ ಅದು ನೆನೆಗದಿಗೆ ಬಿದ್ದಿದ್ದು ನೀರು ಮಲಿನವಾಗಿ ಬಾವಿಗಳು ಹಾಳಾಗುತ್ತಿವೆ. ಈ ಕುರಿತ ವರದಿ ಇಲ್ಲಿದೆ ನೋಡಿ.
ವಿಜಯಪುರ ನಗರದಲ್ಲಿ ಹತ್ತಾರು ಐತಿಹಾಸಿಕ ಬಾವಿಗಳು ಇವೆ. ಆದಿಲ್ ಶಾಹಿಗಳ ಕಾಲದಲ್ಲಿ ನಿರ್ಮಾಣಗೊಂಡಿದ್ದ ಬಾವಿಗಳು ಕಾಲಾನಂತರದಲ್ಲಿ ಹೂಳು ತುಂಬಿ ಹಾಳಾಗಿ ಹೋಗಿದ್ದವು. 2016 ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಹಾಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸರ್ಕಾರ ಕೆಬಿಜೆಎನ್ಎಲ್ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಹಣ ಕೂಡಿಸಿ ಮೊದಲ ಹಂತದಲ್ಲಿ 11 ಬಾವಿಗಳನ್ನು 9 ಕೋಟಿ ರೂಪಾಯಿ ವೆಚ್ಚದಲ್ಲಿ ಹೂಳು ತೆಗೆದು ಪುನಶ್ಚೇತನ ಮಾಡಲಾಗಿತ್ತು.
ನಂತರ ಬಾವಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ 11 ಬಾವಿಗಳ ನೀರನ್ನು ಸ್ಥಳಿಯ ವಾರ್ಡ್ ಗಳಲ್ಲಿನ ಜನರಿಗೆ ಬಳಕೆಗಾಗಿ ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ಇದರ ಜವಾಬ್ದಾರಿ ನಗರ ಕುಡಿಯೋ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹಾಗೂ ಮಹಾನಗರ ಪಾಲಿಕೆಯ ಆಧಿಕಾರಿಗಳಿಗೆ ವಹಿಸಲಾಗಿತ್ತು.
ಸ್ವಚ್ಛಗೊಳಿಸಿದ ಬಾವಿಗಳಿಗೆ ಪಂಪ್ ಸೆಟ್ ಹಾಗೂ ಪೈಪ್ ಕೂಡಿಸಿ ಆಯಾ ವಾರ್ಡ್ ಗಳಲ್ಲಿನ ಹಳೆಯ ನೀರಿನ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡುವಂತೆ ನಿರ್ಧಾರ ಮಾಡಲಾಗಿತ್ತು. ಆದರೆ 2016 ರಿಂದ ಸ್ವಚ್ಛಗೊಂಡ ಐತಿಹಾಸಿಕ ಬಾವಿಗಳಿಂದ ಸ್ಥಳಿಯ ಹಾಗೂ ಸುತ್ತಮುತ್ತಲ ವಾರ್ಡ್ ಗಳಿಗೆ ನೀರು ಪೂರೈಕೆ ಮಾಡದೇ ಆಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಷ್ಟೇ ಅಲ್ಲ, ಇವೆಲ್ಲಾ ಬಾವಿಗಳಿಗೆ ಗೇಟ್ ಗಳನ್ನು ಅಳವಡಿಸಿ ಬೀಗ ಹಾಕಿದ್ದಾರೆ. ಇದೀಗ ಬಾವಿಗಳಲ್ಲಿನ ನೀರು ಬಳಕೆಯಾಗದೆ ಮಲಿನವಾಗುವುದರ ಜೊತೆಗೆ ಹೂಳು ಸಹ ತುಂಬುತ್ತಿದೆ. ಬಾವಿಗಳಲ್ಲಿನ ನೀರು ಬಳಕೆಯಾದರೆ ಬಾವಿಗಳು ಅಷ್ಟೇ ಅಲ್ಲ, ಅದರಲ್ಲಿರೋ ನೀರು ಸಹ ಸ್ವಚ್ಛವಾಗಿ ಉಳಿಯುತ್ತವೆ. ಹಾಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಆಧಿಕಾರಿಗಳ ನಿರ್ಲಕ್ಷ್ಯದಿಂದ ಬಾವಿಗಳು ಹಾಳಾಗುತ್ತಿರೋದಕ್ಕೆ ಸಾರ್ವಜನಿಕರು ಪಾಲಿಕೆಯ ಸದಸ್ಯರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವಿಚಾರ ಕುರಿತು ಕಳೆದ ಕೆಲ ದಿನಗಳ ಹಿಂದೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಗಮನ ಸೆಳೆದಿದ್ದರು. ಪುರಾತನ ಬಾವಿಗಳಿಂದ ಗೃಹ ಬಳಕೆಯಾಗಿ ಪೂರೈಕೆ ಮಾಡಬೇಕೆಂದು ತೀರ್ಮಾಣ ಮಾಡಿದ್ದರೂ ಆ ಕೆಲಸ ಮಾಡಿಲ್ಲಾ. ಇದು ದುರ್ದೈವದ ಸಂಗತಿ ಎಂದು ಅಸಮಾಧಾನವನ್ನು ಹೊರ ಹಾಕಿದರು. ಸದ್ಯ ಈ ಹಿಂದೆ ನಾವು ಸ್ವಚ್ಛ ಮಾಡಿದ್ದ ಎಲ್ಲಾ ಬಾವಿಗಳ ಸ್ಥಿತಿಗತಿಗಳನ್ನು ವೀಕ್ಷಣೆ ಮಾಡಿ ಕೂಡಲೇ ಅಲ್ಲಿಂದ ನೀರು ಗೃಹ ಬಳಕೆಗೆ ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ.
Also Read: ವಿದ್ಯಾಕಾಶಿ ಧಾರವಾಡ- ವಾಣಿಜ್ಯ ನಗರಿ ಹುಬ್ಬಳ್ಳಿ ಅವಳಿ ನಗರದಲ್ಲಿ ಮಹಿಳೆಯರದ್ದೇ ದರ್ಬಾರ್!
ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಮತ್ತೆ ಅದೇ ಬಾವಿಗಳನ್ನು ಹಾಳು ಮಾಡುತ್ತಿದ್ದೀರಲ್ಲಾ ಎಂದು ಆಧಿಕಾರಿಗಳ ನಡೆಗೆ ಕಿಡಿಕಾರಿದ್ದಾರೆ. ಸದ್ಯ ನಗರ ಭಾಗದಲ್ಲಿರೋ ಪುರಾತನ ಬಾವಿಗಳ ಮೂಲಕ ನಗರದ ಐದರಿಂದ ಎಂಟು ವಾರ್ಡ್ ಗಳಿಗೆ ನೀರು ಪೂರೈಕೆ ಮಾಡಬಹುದಾಗಿದೆ. ಹಳೆಯ ನೀರಿನ ಪೈಪ್ ಲೈನ್ ಇದ್ದು ಅದಕ್ಕೆ ಬಾವಿಗಳಿಂದ ಪೈಪ್ ಸಂಪರ್ಕ ಕಲ್ಪಿಸಿದರೆ ನೀರು ಪೂರೈಕೆ ಮಾಡಬಹುದಾಗಿದೆ.
ಸದ್ಯ ಪುರಾತನ ಬಾವಿಗಳ ನೀರನ್ನು ಗೃಹ ಬಳಕೆಗೆ ಪೂರೈಕೆ ಮಾಡಲು ಸಚಿವ ಎಂ ಬಿ ಪಾಟೀಲ್ ಸೂಚಿಸಿದ್ದಾರೆ. ಬಾವಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡೋದಾಗಿ ಹೇಳಿದ್ದಾರೆ. ಸಚಿವರ ಬಿಸಿ ಮುಟ್ಟಿಸಿದ ಬಳಿಕ ಆಧಿಕಾರಿಗಳು ಗಾಢ ನಿದ್ದೆಯಿಂದ ಹಾಗೂ ನಿರ್ಲಕ್ಷ್ಯದಿಂದ ಮೇಲೆದಿದ್ದಾರೆ. 8 ವರ್ಷಗಳ ಬಳಿಕ ಸ್ವಚ್ಛಗೊಳಿಸಿದ ಬಾವಿಗಳ ನೀರನ್ನು ಪೂರೈಕೆ ಮಾಡುವಂತಾಗಿದೆ. ಇಷ್ಟರ ಮೇಲಾದರೂ ನಗರ ಕುಡಿಯೋ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹಾಗೂ ಮಹಾನಗರ ಪಾಲಿಕೆಯ ಆಧಿಕಾರಿಗಳು ಈ ದಿಸೆಯಲ್ಲಿ ಕೆಲಸ ಮಾಡುತ್ತಾರಾ ಎಂಬುದನ್ನು ಕಾಯ್ದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Thu, 1 February 24