ವಿಜಯಪುರ: ತೊಗರಿ ಮಧ್ಯೆ ಗಾಂಜಾ ಬೆಳೆದ ರೈತ ಅರೆಸ್ಟ್‌; ಕೋಟ್ಯಂತರ ಮೌಲ್ಯದ ಗಿಡಗಳು ಜಪ್ತಿ

ವಿಜಯಪುರ ಜಿಲ್ಲೆಯಲ್ಲಿ ಬರಗಾಲದ ನಡುವೆಯೂ, ಹಣದ ದುರಾಸೆಗೆ ಬಿದ್ದ ರೈತನೊಬ್ಬ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ತೊಗರಿ ಬೆಳೆಗಳ ನಡುವೆ ಒಂದು ಕೋಟಿ ರೂ ಮೌಲ್ಯದ 500ಕ್ಕೂ ಅಧಿಕ ಗಾಂಜಾ ಗಿಡಗಳನ್ನು ಬೆಳೆದಿದ್ದ. ಪೊಲೀಸರು ದಾಳಿ ನಡೆಸಿ ರೈತನನ್ನು ಬಂಧಿಸಿ, ಗಿಡಗಳನ್ನ ಜಪ್ತಿ ಮಾಡಿದ್ದಾರೆ.

ವಿಜಯಪುರ: ತೊಗರಿ ಮಧ್ಯೆ ಗಾಂಜಾ ಬೆಳೆದ ರೈತ ಅರೆಸ್ಟ್‌; ಕೋಟ್ಯಂತರ ಮೌಲ್ಯದ ಗಿಡಗಳು ಜಪ್ತಿ
ಬಂಧಿತ ರೈತ
Edited By:

Updated on: Oct 18, 2026 | 6:06 PM

ಮುಖ್ಯಾಂಶಗಳು

  • ಜಮೀಜನನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ರೈತ
  • ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪೊಲೀಸರ ಕಾರ್ಯಾಚರಣೆ
  • 1.1 ಕೋಟಿ ರೂ ಮೌಲ್ಯದ 500 ಗಾಂಜಾ ಗಿಡಗಳು ಜಪ್ತಿ

ವಿಜಯಪುರ, ಅಕ್ಟೋಬರ್​​ 18: ಜಿಲ್ಲೆಯಲ್ಲಿ ಒಂದೆಡೆ ಬರಗಾಲದ ತೀವ್ರತೆ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆ ಕೈಗೆ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಿರುವಾಗ ಜಿಲ್ಲೆಯ ರೈತನೊಬ್ಬ ಅಕ್ರಮವಾಗಿ ಗಾಂಜಾ ಬೆಳೆದು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿವಶಂಕರ್ ಜೀರ್ ಬಂಧಿತ ರೈತ. ತೊಗರಿ ಬೆಳೆ ಮಧ್ಯೆ ಬೆಳೆದಿದ್ದ 1 ಕೋಟಿ 1 ಲಕ್ಷ 37 ಸಾವಿರ ರೂ ಮೌಲ್ಯದ ಗಾಂಜಾ ಗಿಡಗಳನ್ನು ಬಸವನ ಬಾಗೇವಾಡಿ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದಲ್ಲಿ ಘಟನೆ ನಡೆದಿದೆ.

ಕಟ್ಟುನಿಟ್ಟಿನ ನಿಯಮಗಳ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದ ರೈತ 

ವಿಜಯಪುರ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಸಂಗ್ರಹ, ಸಾಗಾಟ ಮತ್ತು ಮಾರಾಟ ತಡೆಯಲು ಜಿಲ್ಲಾ ಪೊಲೀಸರು ನಿಗಾ ವಹಿಸಿದ್ದಾರೆ. ಬೇಡಾ ಬ್ರೋ ಕಾರ್ಯಕ್ರಮಗಳ ಮೂಲಕ ಹಾಗೂ ಬೀಟ್ ಮಟ್ಟದ ಸಿಬ್ಬಂದಿಗಳ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಿರುವಾಗ ಓರ್ವ ರೈತ ಅಕ್ರಮವಾಗಿ ಜಮೀನಿನಲ್ಲಿ ಗಾಂಜಾ ಬೆಳೆದು ಖಾಕಿ ಕೈಗೆ ಸಿಕ್ಕಿ ಬಿದ್ದಿದ್ದಾರೆ.

Loading...

ತೊಗರಿ ಬೆಳೆಯ ಮಧ್ಯೆ ಗಾಂಜಾ 

ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ರೈತ ಶಿವಶಂಕರ್ ಜೀರ್,​ ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ತೊಗರಿ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿದ್ದರು. ಬೀಟ್ ಪೊಲೀಸರಿಗೆ ಈ ಅಕ್ರಮ ಗಾಂಜಾ ಘಾಟು ಬಡಿಯುತ್ತಿದ್ದಂತೆ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಇನ್ಸ್ಪೆಕ್ಟರ್ ಗುರುಶಾಂತ ದಾಸ್ಯಾಳ ಹಾಗೂ ತಂಡ ಜಮೀನಿನ ಮೇಲೆ ದಾಳಿ ಮಾಡಿದೆ. ತೊಗರಿ ಬೆಳೆಯ ನಡುವೆ ಹುಲುಸಾಗಿ ಬೆಳೆದಿದ್ದ 500 ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನ ಕಿತ್ತು ವಶಕ್ಕೆ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ಈ ಗಾಂಜಾ ಮೌಲ್ಯ ಬರೋಬ್ಬರಿ 1 ಕೋಟಿ 1 ಲಕ್ಷ 37 ಸಾವಿರ ರೂ ಎಂದು ಅಂದಾಜಿಸಲಾಗಿದೆ. 500ಕ್ಕೂ ಹೆಚ್ಚು ಗಾಂಜಾ ಗಿಡಗಳು ಸೇರಿದಂತೆ ಜಮೀನು ಮಾಲೀಕ ಶಿವಶಂಕರ್ ಜೀರ್​ನನ್ನು ಬಂಧಿಸಲಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಗದಗನಲ್ಲಿ ಅಂತಾರಾಜ್ಯ ಗಾಂಜಾ ಜಾಲ ಪತ್ತೆ: ಸೊಲ್ಲಾಪುರದಿಂದ ಮಾಲು ಸಾಗಿಸುತ್ತಿದ್ದ ಇಬ್ರು ಸೇರಿ ನಾಲ್ವರ ಬಂಧನ

ಇನ್ನು ಬಂಧಿತ ಶಿವಶಂಕರಪ್ಪ ಜೀರ್, ಇದೇ ಮೊದಲ ಬಾರಿಗೆ ತನ್ನ ಹೊಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಾಂಜಾ ಬೆಳೆದಿದ್ದರು ಎನ್ನಲಾಗಿದೆ. ರಾತೋರಾತ್ರಿ ಹಣ ಮಾಡುವ ದುರಾಸೆಯಿಂದ ಗಾಂಜಾ ಬೆಳೆಸಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾರೆ.

ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ವಿಜಯಪುರ ಜಿಲ್ಲೆಯ ಪೊಲೀಸರು ಕಳೆದ ಹಲವು ದಿನಗಳಿಂದ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ಈ ವರ್ಷದಲ್ಲಿ ಒಟ್ಟು 57 ಪ್ರಕರಣಗಳಲ್ಲಿ 65 ಆರೋಪಿಗಳನ್ನ ಬಂಧಿಸಿದ್ದಾರೆ‌‌‌. ಒಟ್ಟು 342.183 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಕರಣ ಬೇಧಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಗತ್ ಸಿಂಗ್ ಫೋಟೋ ಬಳಸಿ ಗಾಂಜಾ ಸಾಗಾಟ: ಬೆಂಗಳೂರಿನಲ್ಲಿ 1.70 ಕೋಟಿ ರೂ. ಮೌಲ್ಯದ 317 ಕೆಜಿ ಗಾಂಜಾ ಜಪ್ತಿ

‘ಸದ್ಯ ವಶಪಡಿಸಿಕೊಂಡಿರುವ ಗಾಂಜಾ ಹಾಗೂ ಇದಕ್ಕೂ ಮುನ್ನ ವಶಪಡಿಸಿಕೊಂಡಿರುವ ಗಾಂಜಾವನ್ನು ಕಾನೂನು ಪ್ರಕಾರ ನಾಶ ಮಾಡಲಾಗುತ್ತದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ. ಇನ್ನು ಮಹಾರಾಷ್ಟ್ರದ ಗಡಿ ಭಾಗದ ಜಿಲ್ಲೆಯಾಗಿರುವ ಕಾರಣ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟವಾಗುತ್ತದೆ ಎಂಬ ಕಾರಣಕ್ಕೆ ಅಕ್ರಮ ಗಾಂಜಾ ಬೆಳೆಯಲಾಗುತ್ತಿದೆ. ಈ ಕುರಿತಾಗಿಯೂ ಖಾಕಿ ಪಡೆ ಕ್ರಮ ತೆಗೆದುಕೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಶೋಕ ಯಡಳ್ಳಿ, ವಿಜಯಪುರ

ಅಶೋಕ ಯಡಳ್ಳಿಯವರು ಮೂಲತಃ ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮದವರು. ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದು ಇವರ ಕೆಲಸದ ಮಾಹಿತಿಯಾಗಿದೆ. ಪ್ರಾಥಮಿಕ ಶಿಕ್ಷಣ ನಂತರ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡವೇ ಇವರ ವಿದ್ಯಾ ಕ್ಷೇತ್ರವಾಗಿದೆ . ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ್ದಾರೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ, ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದಾರೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ, ಆಸಕ್ತಿ ಇವರಗಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ.

Read More
Loading...
Unable to load recommendations.
Follow Us