ಬಸವನಬಾಗೇವಾಡಿ ಮನಗೂಳಿ ಬಳಿ ಎಸ್ಯುವಿ, ಕಂಟೇನರ್, ಖಾಸಗಿ ಬಸ್ ಭೀಕರ ಅಪಘಾತ: 6 ಮಂದಿ ಸಾವು
ವಿಜಯಪುರ ಜಿಲ್ಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆಯೇ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಐದು ಮಂದಿ ಸಾವಿಗೀಡಾಗಿದ್ದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಖಾಸಗಿ ಬಸ್, ಮಹೀಂದ್ರ ಟಿಯುವಿ ಹಾಗೂ ಕಂಟೇನರ್ ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ ನೀಡಿದ್ದಾರೆ. ಸದ್ಯ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಪುರ, ಮೇ 21: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ (Basavana Bagewadi) ತಾಲೂಕಿನ ಮನಗೂಳಿ (Managuli) ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 50 ರ ಚತುಷ್ಪಥ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಬಸ್ ಚಾಲಕ ಕೂಡ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಮಹೀಂದ್ರ ಟಿಯುವಿ 300 ಕಾರು, ಕಂಟೇನರ್, ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ವಿಜಯಪುರದತ್ತ ಪ್ರಯಾಣ ಮಾಡುತ್ತಿದ್ದ ಮಹಿಂದ್ರಾ ಕಾರು ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿಯಾಗಿದೆ. ಇದರ ಪರಿಣಾಮವಾಗಿ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಗೆ ನಿಂತಿದ್ದ ಕಂಟೇನರ್ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ ಚಾಲಕ ಬಸವರಾಜ ರಾಠೋಡ್ ಗಂಭೀರ ಗಾಯಗೊಂಡಿದ್ದರು. ಅವರು ನಂತರ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.
ಮಹಿಂದ್ರಾ ಕಾರಿನಲ್ಲಿ ತೆಲಂಗಾಣ ಮೂಲದ ಪಿ ಭಾಸ್ಕರ್ ಎಂಬುವರ ಕುಟುಂಬದವರು ಸಂಚರಿಸುತ್ತಿದ್ದರು. ಮುರುಡೇಶ್ವರ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳನ್ನು ವೀಕ್ಷಿಸಿ ವಾಪಸಾಗುತ್ತಿದ್ದರು. ಭಾಸ್ಕರ್ ಅವರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಕೆನರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದ ಸದಸ್ಯರೊಂದಿಗೆ ದಕ್ಷಿಣ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಿಕೊಂಡು ಬರುತ್ತಿದ್ದಾಗ ದುರಂತ ಸಂಭವಿಸಿದೆ.
ಟಿ ಭಾಸ್ಕರ್ ಹಾಗೂ ಕುಟುಂಬದ ಪವಿತ್ರ, ಅಭಿರಾಮ್ ಹಾಗೂ ಜೋಶ್ನಾ ಎಂಬುವವರು ಅಪಘಾತದಲ್ಲಿ ಸ್ಥಳದಲ್ಲೇ ಅಸುನೀಗಿದ್ದಾರೆ. ಕಾರು ಚಾಲಕ ಹೊರ್ತಿ ಗ್ರಾಮದ ವಿಕಾಸ್ ಮಣಿ ಕೂಡ ಸಾವಿಡಗೀಡಾಗಿದ್ದಾರೆ. ಕಾರಿನಲ್ಲಿದ್ದ 10 ವರ್ಷದ ಬಾಲಕ ಅಪಾಯದಿಂದ ಪಾರಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದ ಕರಾವಳಿ ಸೇರಿ 7 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್
ಬಸ್ಸು ಮುಂಬೈಯಿಂದ ಬಳ್ಳಾರಿಗೆ ಪ್ರಯಾಣಿಸುತ್ತಿತ್ತು. ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ನಲ್ಲಿ ಕಳುಹಿಸಿಕೊಡಲಾಗಿದೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ ಮಾರಿಹಾಳ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸಲಾಗಿದೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 am, Wed, 21 May 25