Karnataka Rains: ಭಾರಿ ಮಳೆಗೆ ಕರ್ನಾಟಕದಲ್ಲಿ 4 ಸಾವು, ಬೆಂಗಳೂರಿನಲ್ಲಿ ಇನ್ನೂ 3 ದಿನ ವರ್ಷಧಾರೆ
ಕರ್ನಾಟಕ ಮಳೆ: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಭಾರಿ ಮಳೆಯಿಂದ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೂರು ಸಾವು ಸಂಭವಿಸಿದ್ದು, ಮಳೆ ನೀರಿನಿಂದ ಬೇಸ್‌ಮೆಂಟ್‌ನಲ್ಲಿ ಸಿಲುಕಿ ವಿದ್ಯುತ್ ಶಾಕ್ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಮಳೆಯ ಮುನ್ಸೂಚನೆ ನೀಡಿದೆ. ಬೆಂಗಳೂರಿಗೆ ಯೆಲ್ಲೋ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು, ಮೇ 20: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆ (Karnataka Rains) ಸುರಿದಿದ್ದು, ಅನೇಕ ಅವಾಂತರಗಳು ಸಂಭವಿಸಿವೆ. ಮಳೆ ಸಂಬಂಧಿತ ಅವಘಡಗಳಲ್ಲಿ ರಾಜ್ಯದಾದ್ಯಂತ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲೇ (Bengaluru Rain) ಮೂರು ಸಾವುಗಳು ಸಂಭವಿಸಿವೆ. ಸೋಮವಾರ ಬೆಳಗ್ಗೆಯಷ್ಟೇ ಬೆಂಗಳೂರಿನಲ್ಲಿ ಉದ್ಯೋಗಿಯೊಬ್ಬರನ್ನು ಬಲಿ ಪಡೆದಿದ್ದ ಮಳೆ, ರಾತ್ರಿ ಹೊತ್ತಿಗೆ ಮತ್ತಿಬ್ಬರನ್ನು ಬಲಿ ಪಡೆದಿದೆ. ಬಿಟಿಎಂ ಲೇಔಟ್ನ 2ನೇ ಹಂತದ ಎನ್ಎಸ್ ಪಾಳ್ಯದ ಮಧುವನ ಅಪಾರ್ಟ್ಮೆಂಟ್ ಬೇಸ್‌ಮೆಂಟ್‌ನಲ್ಲಿ ದುರ್ಘಟನೆ ಸಂಭವಿಸಿದೆ. ಮಳೆಯಿಂದ ಬೇಸ್ಮೆಂಟ್ ಜಲಾವೃತವಾಗಿತ್ತು. ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಕರೆಂಟ್ ಶಾಕ್ ತಗುಲಿ ಅಪಾರ್ಟ್ಮೆಂಟ್ ನಿವಾಸಿ ಮನೋಹರ ಕಾಮತ್ ಮತ್ತು ನೇಪಾಳ ಮೂಲದ 9 ವರ್ಷದ ಬಾಲಕ ದಿನೇಶ್ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 2 ಕಡೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲನೆ ಮಾಡಿದ್ದಾರೆ. ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿದ ಅವರು, ಯಾರಿಗೆ ಪರಿಹಾರ ಕೊಡಬೇಕೋ ಅವರಿಗೆ ಕೊಡುತ್ತೇವೆ. ಉಳಿದುಕೊಳ್ಳಲು ಜಾಗದ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಶಿರೂರು ದುರಂತದಲ್ಲಿ ಬದುಕುಳಿದಿದ್ದ ತಮ್ಮಣ್ಣಿ ಗೌಡ ಸಿಡಿಲಿಗೆ ಬಲಿ
ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆ ಶಿರೂರಿನಲ್ಲಿ ಭೂ ಕುಸಿತ ಉಂಟಾಗಿ, 11 ಜನ ಮೃತಪಟ್ಟಿದ್ದರು. ಆ ಈ ದುರಂತದಲ್ಲಿ ಅಂಕೋಲ ತಾಲೂಕಿನ ಉಳವರೆಯ ಈ ತಮ್ಮಣ್ಣಿಗೌಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಅಂದು ಗುಡ್ಡ ಕುಸಿತದಲ್ಲಿ ಉಳವರೆಯ ತಮ್ಮಣ್ಣಿಗೌಡರ ಮನೆಯೂ ಧ್ವಂಸವಾಗಿತ್ತು. ಅಂದು ಮನೆಯಿಂದ ಹೊರಗೆ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದ ತಮ್ಮಣ್ಣಿ ಗೌಡ, ಸೋಮವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ, ಯೆಲ್ಲೋ ಅಲರ್ಟ್
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಗ್ರೇಟರ್ ಅಲ್ಲ ಲೂಟಿಕೋರರ ಬೆಂಗಳೂರು: ಮಳೆ ಅವಾಂತರದ ಬೆನ್ನಲ್ಲೇ ಕುಮಾರಸ್ವಾಮಿ ಟೀಕೆ
ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ 22 ಜಿಲ್ಲೆಗಳಿಗೂ ಮೂರು ದಿನ ಮಳೆ ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಮತ್ತು ನಾಡಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.








