AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ, ಇದ್ದ ಕೆಲಸವನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾದ ಜನ

ಮಂಗಳೂರಿನ ಹೈರ್ ಗ್ಲೋ ಎಲಿಗಂಟ್ ಎಂಬ ಖಾಸಗಿ ಸಂಸ್ಥೆ ನ್ಯೂಜಿಲೆಂಡ್‌ನಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ 185ಕ್ಕೂ ಹೆಚ್ಚು ಜನರಿಂದ 8 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಿಸಿ ವಂಚಿಸಿದೆ. ಕರ್ನಾಟಕ ಮತ್ತು ಕೇರಳದ ಜನರು ಈ ವಂಚನೆಗೆ ಬಲಿಯಾಗಿದ್ದಾರೆ. ಸದ್ಯ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಂಚನೆ ಪ್ರಕರಣದ ವಿವರ ಇಲ್ಲಿದೆ.

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ, ಇದ್ದ ಕೆಲಸವನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾದ ಜನ
ಹೈರ್ ಗ್ಲೋ ಎಲಿಗಂಟ್ ಕಚೇರಿ
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: May 20, 2025 | 9:32 AM

Share

ಮಂಗಳೂರು, ಮೇ 20: ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangalore) ಖಾಸಗಿ ಏಜೆನ್ಸಿಯೊಂದು ಕೋಟ್ಯಂತರ ರೂಪಾಯಿ ವಂಚನೆ ಎಸಗಿದ್ದು, 185ಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. Hire Glow Elegent overseas international Private Ltd ಎಂಬ ಹೆಸರಿನಿಂದ ವಂಚನೆಗೊಳಗಾದ 185 ಜನ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಕೇರಳ ಸೇರಿದಂತೆ ಇತರ ಕೆಲವು ರಾಜ್ಯಗಳ ಜನರೂ ವಂಚನೆಗೆ ಒಳಗಾಗಿದ್ದಾರೆ. ಇದೀಗ ವಂಚನೆಗೊಳಗಾದವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ವಂಚನೆಯ ಕರಾಳ ಮುಖ ಅನಾವರಣಗೊಂಡಿದೆ.

ನ್ಯೂಜಿಲೆಂಡ್​​ನಲ್ಲಿ ಕೆಲಸ ಕೊಡಿಸುವ ಆಮಿಷ

ಮಂಗಳೂರಿನ ಕಂಕನಾಡಿಯಲ್ಲಿ ಕಚೇರಿಯನ್ನು ‌ಹೊಂದಿದ್ದ ಖಾಸಗಿ ಸಂಸ್ಥೆ ನ್ಯೂಜಿಲೆಂಡ್​​ನ VALARIS ಕಂಪೆನಿಯಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಭರವಸೆ ನೀಡಿತ್ತು. ಹೀಗಾಗಿ ದಕ್ಷಿಣಕನ್ನಡ ಜಿಲ್ಲೆಯ 185ಕ್ಕೂ ಹೆಚ್ಚು ಮಂದಿ ಕಂಪನಿಯನ್ನು ಉದ್ಯೋಗಕ್ಕಾಗಿ‌ ಸಂಪರ್ಕಿಸಿದ್ದರು. ಪಕ್ಕದ ಉಡುಪಿ ಜಿಲ್ಲೆ, ಕೇರಳ ಸೇರಿದಂತೆ ಹೊರರಾಜ್ಯಗಳಿಂದ ಸುಮಾರು ‌300ಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಸಂಸ್ಥೆಯನ್ನು ಸಂಪರ್ಕಿಸಿದ್ದರು.

8 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ!

ಸಂಸ್ಥೆಯು 185ಕ್ಕೂ ಹೆಚ್ಚು ವ್ಯಕ್ತಿಗಳಿಂದ ತಲಾ 1ಲಕ್ಷದ 85 ಸಾವಿರ ರೂ., ಎಜೆಂಟ್​​ಗಳ ಮುಖಾಂತರ ಸುಮಾರು 60 ಮಂದಿಯಿಂದ ತಲಾ 3 ಲಕ್ಷ ರೂಪಾಯಿ ಹಾಗೂ ಬೇರೆ ಬೇರೆ ರಾಜ್ಯದ ಏಜೆನ್ಸಿಗಳ ಮೂಲಕ ತಲಾ 5ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಮಂದಿಯಿಂದ ಸುಮಾರು ‌8 ಕೋಟಿ ರೂಪಾಯಿಗೂ‌ ಅಧಿಕ ಹಣ ಪಡೆದಿರುವ ಆರೋಪ ಸಂಸ್ಥೆಯ ಮೇಲಿದೆ. ಉದ್ಯೋಗಕಾಂಕ್ಷಿಗಳು ಎಲ್ಲಾ ಹಣವನ್ನು ಆನ್​​ಲೈನ್ ಮುಖಾಂತರವೇ ಹೈರ್ ಗ್ಲೋ ಕಂಪೆನಿಗೆ ಪಾವತಿಸಿದ್ದಾರೆ.

ಇದನ್ನೂ ಓದಿ
Image
ಭಾರಿ ಮಳೆಗೆ ಕರ್ನಾಟಕದಲ್ಲಿ 4 ಸಾವು, ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆ
Image
ಕರ್ನಾಟಕದ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್
Image
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
Image
ಲೂಟಿಕೋರರ ಬೆಂಗಳೂರು: ಮಳೆ ಅವಾಂತರ ಬೆನ್ನಲ್ಲೇ ಹೆಚ್​ಡಿಕೆ ಟೀಕೆ

ಕಳೆದ ನವೆಂಬರ್​​ನಲ್ಲಿ ಸಂದರ್ಶನ: ಆಮೇಲೆನಾಯ್ತು?

ಕಳೆದ ನವೆಂಬರ್ ತಿಂಗಳಿನಲ್ಲಿ ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಿದ್ದ ಸಂಸ್ಥೆ, ಅದೇ ತಿಂಗಳ ಕೊನೆಯಲ್ಲಿ ಫಿಟ್​​ನೆಟ್ ಟೆಸ್ಟ್ ಕೂಡ ಮಾಡಿಸಿತ್ತು. ಮಂಗಳೂರು ಕಚೇರಿಯ ಗ್ರೇಟಲ್ ಕ್ವಾಡ್ರಸ್, ಅಶ್ವಿನಿ‌ ಆಚಾರ್ಯ ಎಂಬವರು ಈ ಎಲ್ಲ ಕಾರ್ಯನಿರ್ವಹಿಸಿದ್ದರು. ಜನವರಿ ತಿಂಗಳ ಮೊದಲ ವಾರದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಕೆಲಸಕ್ಕೆ ಸೇರಲು ಕಾಂಟ್ರಾಕ್ಟ್​​ಗೆ ಸಹಿ ಹಾಕಿಸಲಾಗಿತ್ತು. ಮಾರ್ಚ್ ತಿಂಗಳ ಕೊನೆಯಲ್ಲಿ ಭಾವಚಿತ್ರ, ವೀಸಾ ಅಪ್ಲಿಕೇಶನ್ ಫಾರ್ಮ್, ಬಾಕಿ ಉಳಿದ ಮೊತ್ತವನ್ನು ಕಚೇರಿಯಲ್ಲಿ ನೀಡಲು ಸಂಸ್ಥೆ ತಿಳಿಸಲಾಗಿತ್ತು. ಎಪ್ರಿಲ್‌ ಮೊದಲ ವಾರದಲ್ಲಿ ಟಿಕೆಟ್ ಮೊತ್ತದ ಹಣವನ್ನು ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ, ಕೊರಿಯರ್ ಮೂಲಕ ವೀಸಾ ಬರಲಿದೆ ಎಂದು ತಿಳಿಸಿತ್ತು.

ಕೊರಿಯರ್ ತೆರೆದು ನೋಡಿದಾಗ ಶಾಕ್ ಆದ ಉದ್ಯೋಗಾಕಾಂಕ್ಷಿಗಳು

ಎಪ್ರಿಲ್ ಕೊನೆಯ ವಾರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೊರಿಯರ್‌ ಬಂದಿತ್ತು. ಅದನ್ನು ತೆರೆದು ನೋಡಿದಾಗ, ತಾವೇ ನೀಡಿದ್ದ ಪಾಸ್‌ಪೋರ್ಟ್, ಫೋಟೋ, ಆನ್ವಲಪ್ ನೋಡಿ ಅವರು ಶಾಕ್ ಆಗಿದ್ದರು. ಆಗ, ತಾವು ಮೋಸ ಹೋಗಿರುವ ಬಗ್ಗೆ ಉದ್ಯೋಗಕಾಂಕ್ಷಿಗಳಿಗೆ ಮನವರಿಕೆಯಾಗಿದೆ. ಸದ್ಯ ಸಂಸ್ಥೆಯ ವಿರುದ್ಧ ಸಂತ್ರಸ್ತರು ಕದ್ರಿ ಪೊಲೀಸ್ ಠಾಣೆಯಲ್ಲಿ ಸಂಸ್ಥೆಯ ಪ್ರಮುಖ ಮಸೀಉಲ್ಲಾ ಅತೀಉಲ್ಲಾ ಖಾನ್, ಗ್ರೆಟಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ವಿರುದ್ಧ ದೂರು ನೀಡಿದ್ದಾರೆ. ಅದರಂತೆ, ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಅತೀಉಲ್ಲಾ ಖಾನ್ ಮುಂಬೈ ಮೂಲದವ ಎನ್ನಲಾಗಿದೆ.

ಇದ್ದ ಉದ್ಯೋಗವನ್ನೂ ಬಿಟ್ಟು ವಿದೇಶಿ ಕೆಲಸದ ಕನಸು ಕಂಡಿದ್ದ ಸಂತ್ರಸ್ತರು

ಸಂತ್ರಸ್ತರ ಪೈಕಿ ಕೆಲವು ಮಂದಿ ವಿದೇಶದಲ್ಲಿ ಉದ್ಯೋಗ ಮಾಡುವ ಆಸೆಯಿಂದ ಇರುವ ಕೆಲಸವನ್ನೂ ತ್ಯಜಿಸಿದ್ದರು. ಇದೀಗ ಉದ್ಯೋಗವೂ ಇಲ್ಲದೆ ಹಣವೂ ಇಲ್ಲದೆ ದಿಕ್ಕೆಟ್ಟಿದ್ದಾರೆ. ಬಹುತೇಕ ಅಭ್ಯರ್ಥಿಗಳು. ಫೈನಾನ್ಸ್ ಸಾಲ, ಚಿನ್ನ ಅಡವಿಟ್ಟು ಹಣ ಹೊಂದಿಸಿದ್ದರು. ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಸಂತ್ರಸ್ತರ ಪರ ನಿಂತಿದ್ದು, ಕಾನೂನು ಹೋರಾಟಕ್ಕೆ ನೆರವು ನೀಡುತ್ತಿದೆ.

ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿಗೂ ವಂಚನೆ ಪ್ರಕರಣದ ಬಗ್ಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಸಂಸ್ಥೆಗೆ ಬೀಗ ಜಡಿದ ಪೊಲೀಸರು, ಕಚೇರಿಯೊಳಗಿದ್ದ ಕಂಪ್ಯೂಟರ್ ಸೇರಿದಂತೆ ದಾಖಲೆಗಳನ್ನು ಜಫ್ತಿ ಮಾಡಿದದ್ದಾರೆ.

ತನಿಖೆಯಲ್ಲಿ ನಿರ್ಲಕ್ಷ್ಯ: ಪೊಲೀಸ್ ಅಧಿಕಾರಿಗಳ ಅಮಾನತು

Somashekhar And Umesh

ಇನ್ಸ್​​ಪೆಕ್ಟರ್ ಸೋಮಶೇಖರ್ ಹಾಗೂ ಪಿಎಸ್​ಐ ಉಮೇಶ್

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಸಂಬಂಧ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ. ನಕಲಿ ಸಂಸ್ಥೆಯ ಬಗ್ಗೆ ಆಫೀಸ್ ಪ್ರೊಟೆಕ್ಟರ್ ಎಮಿಗ್ರೇಟ್ಸ್ ಮೊದಲೇ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಗೂ ಮಾಹಿತಿ ನೀಡಿತ್ತು. ಅದರಂತೆ, ಸಂಸ್ಥೆಯ ವಿರುದ್ದ ತನಿಖೆ ನಡೆಸುವಂತೆ ಕದ್ರಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಪೊಲೀಸ್ ಕಮೀಷನರ್ ಆದೇಶಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ತನಿಖೆಗೆ ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಸುಹಾಸ್ ಹತ್ಯೆಗೆ 50 ಲಕ್ಷಕ್ಕೂ ಹೆಚ್ಚು ಫಂಡ್, ಬಜ್ಪೆ ಹೆಡ್ ಕಾನ್ಸ್‌ಟೇಬಲ್ ಕುತಂತ್ರ: ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ

ಪೊಲೀಸ್ ಅಧಿಕಾರಿಗಳು ನಕಲಿ ಸಂಸ್ಥೆಯಿಂದಲೇ ಹಣ ಪಡೆದು ದೋಖಾ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಕದ್ರಿ ಠಾಣೆ ಇನ್ಸ್​​ಪೆಕ್ಟರ್ ಸೋಮಶೇಖರ್, ಆ ಸಂದರ್ಭ ಪಿಎಸ್​ಐ ಆಗಿದ್ದ ಉಮೇಶ್ ಅವರನ್ನು ಅಮಾನತು ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ