ಕಾರಾಗೃಹದಲ್ಲೂ ಹಿಂದೂ-ಮುಸ್ಲಿಂ: ಮುನೀರ್ ಹೊಡೆದಿದ್ದಕ್ಕೆ ಮಂಗಳೂರು ಜೈಲು ರಣಾಂಗಣ
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಧರ್ಮದ ವಿಚಾರವಾಗಿ ಕೊಲೆಗಳಾಗಿವೆ. ಈ ಕೊಲೆಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪ್ರತೀಕಾರದ ಹೆಸರಿನಲ್ಲಿ ಹತ್ಯೆ ಮಾಡಲಾಗಿದೆ. ಮೇ 01 ರಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ ಆರೋಪಿ ಮೇಲೆ ಸೋಮವಾರ ಕಾರಾಗೃಹದಲ್ಲಿ ದಾಳಿ ಮಾಡಲಾಗಿತ್ತು. ಈ ಬೆನ್ನಲ್ಲೇ ಹಿಂದೂ ಕೈದಿ ಮೇಲೆ ಮತ್ತೋರ್ವ ಕೈದಿ ಮುನೀರ್ ಹಲ್ಲೆ ಮಾಡಿದ್ದಾನೆ.

ಮಂಗಳೂರು, ಮೇ 20: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ ಮೇಲೆ ಸೋಮವಾರ (ಮೇ.19) ದಂದು ಹಲ್ಲೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ (Mangalore Central Jail) ಅಡುಗೆ ಮಾಡುತ್ತಿದ್ದ ಹಿಂದೂ ಕೈದಿಗೆ ಮತ್ತೋರ್ವ ಕೈದಿ ಮುನೀರ್ ಹೊಡೆದಿದ್ದಾನೆ. ಇದರಿಂದ, ಆಕ್ರೋಶಗೊಂಡ ಇತರ ಕೈದಿಗಳು ಮುನೀರ್ ಮೇಲೆ ಹಲ್ಲೆಗೆ ಮುಂದಾದರು. ತಕ್ಷಣ ಜಾಗೃತರಾದ ಜೈಲಿನ ಅಧಿಕಾರಿಗಳು ಮುನೀರ್ ಮೇಲೆ ಹಲ್ಲೆ ಮಾಡುವುದನ್ನು ತಪ್ಪಿಸಿದರು. ಸ್ಥಳಕ್ಕೆ ತೆರಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಚೊಟ್ಟೆ ನೌಷಾದ್ ಮೇಲೆ ಹಲ್ಲೆ
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ್ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾಗಿತ್ತು. ಹೀಗಾಗಿ ಸೋಮವಾರ (ಮೇ.20) ದಂದು ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮೈಸೂರು ಕಾರಾಗೃಹಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಿದ್ದರು. ಈ ಮಧ್ಯೆ ನೌಷಾದ್, ಮಂಗಳೂರು ಜೈಲಿನಲ್ಲಿ ಯಾರನ್ನೋ ನೋಡಬೇಕು ಎಂದಿದ್ದನು. ಹೀಗಾಗಿ ಜೈಲಿನಲ್ಲಿ ಮತ್ತೋರ್ವ ಕೈದಿ ಭೇಟಿಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಚೊಟ್ಟೆ ನೌಷಾದ್ ಮೇಲೆ ಬಿ ಬ್ಯಾರಕ್‌ನ ಹಲವು ಕೈದಿಗಳು ಇದ್ದಕಿದ್ದಂತೆ ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ಮಾಡಿದ್ದರು.
ಸುಹಾಸ್ ಶೆಟ್ಟಿ ಕೊಲೆ
ಕಳೆದ ಗುರುವಾರ (ಮೇ.01) ದಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ನೋಡಿ: ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
3 ತಿಂಗಳ ಹಿಂದೆಯೇ ಸುಹಾಸ್ ಕೊಲೆಗೆ ಸಿದ್ಧವಾಗಿತ್ತು ಸ್ಕೆಚ್
ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದನು. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದನು. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Tue, 20 May 25







