ಜಾನಪದ ಸಾಹಿತಿ, ಭಾವೈಕ್ಯತೆಯ‌ ಹರಿಕಾರ ಕಾಹು ಬಿಜಾಪುರ ನಿಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 04, 2022 | 12:21 PM

ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದಲ್ಲಿದ್ದ ಕಾಹು ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಜಾನಪದ ಸಾಹಿತಿ, ಭಾವೈಕ್ಯತೆಯ‌ ಹರಿಕಾರ ಕಾಹು ಬಿಜಾಪುರ ನಿಧನ
ಜಾನಪದ ಸಾಹಿತಿ ಕಾಹು ಬಿಜಾಪುರ
Follow us on

ವಿಜಯಪುರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಜಾನಪದ ಸಾಹಿತಿ, ಭಾವೈಕ್ಯತೆಯ‌ ಹರಿಕಾರ ಕಾಸೀಮಸಾಬ ಹುಸೇನಸಾಬ ಬಿಜಾಪುರ (88) ಇತ್ತೀಚೆಗೆ ನಿಧನರಾದರು. ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದಲ್ಲಿದ್ದ ಕಾಹು ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಿದುಳಿಗೆ ಪಾರ್ಶ್ವವಾಯುವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕಾಹು ಎಂದೇ ಅವರು ಸಾಂಸ್ಕೃತಿಕ ವಲಯದಲ್ಲಿ ಜನಜನಿತರಾಗಿದ್ದರು.‌ ಮೃತರು ಇಬ್ಬರು ಪುತ್ರರು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಜಾನಪದ ಸಾಹಿತ್ಯದಲ್ಲಿ ಕೃಷಿ ಮಾಡಿದ್ದ ಕಾಹು ಅವರು ಫೆಬ್ರುವರಿ 4, 1935ರಂದು ಜನನಿಸಿದ್ದರು.‌ 2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಂದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದರು. ಕಾಹು ಬಿಜಾಪುರ ಅಗಲಿಕೆಗೆ ಜಾನಪದ ಸಾಹಿತಿಗಳು, ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

‘ವಿವಿಧೆತೆಯಲ್ಲಿ ಏಕತೆಯ ಮಂತ್ರ ಜಪಿಸುತ್ತ ಐದು ದಶಕಗಳ ಕಾಲ ಭಾವೈಕ್ಯದ ದಾರ ಪೋಣಿಸಿದ ಸೂತ್ರಧಾರರಾಗಿದ್ದ ಸಂತ ಸಾಹಿತಿ ಕಾಹು ಬಿಜಾಪುರ’ ಎಂದು ಬಸವನಬಾಗೇವಾಡಿ ತಾಲೂಕಿನ ಯರನಾಳ ವಿರಕ್ತಮಠದ ಸಂಗನಬಸವ ಶಿವಾಚಾರ್ಯರು ಸಂತಾಪ ಸಂದೇಶದಲ್ಲಿ ತಿಳಿಸಿದರು.

ಗೊಳಸಂಗಿ ಗ್ರಾಮದಲ್ಲಿ ಮಸೀದಿಯೊಂದನ್ನು ನನ್ನ ಕೈಯಾರೆ ಉದ್ಘಾಟನೆ ಮಾಡಿಸಿದ್ದಲ್ಲದೇ ಅದೇ ಮಸೀದಿಯಲ್ಲಿ ಲಿಂಗಪೂಜೆಯನ್ನೂ ಮಾಡಲು ಮಾಡಲು ಅವಕಾಶ ಕಲ್ಪಿಸಿದ್ದರು. ಆಧುನಿಕ ಬಸವಣ್ಣನಂತೆ ಜೀವಿಸಿದ್ದರು ಎಂದು ಯರನಾಳ ಶ್ರೀಗಳು ಹೇಳಿದರು. ಗೊಳಸಂಗಿ ಗ್ರಾಮದಲ್ಲಿ ಇಸ್ಲಾಂ ಧರ್ಮದ ನಿಯಮಾವಳಿ ಪ್ರಕಾರ ಕಾಹು ಬಿಜಾಪುರ ಅವರ ಅಂತ್ಯಕ್ರಿಯೆ ನೆರವೇರಿತು.

Published On - 11:59 am, Sun, 4 September 22