
ವಿಜಯಪುರ, (ಜೂನ್ 14): ವಿಜಯಪುರ (Vijayapura) ಜಿಲ್ಲೆ ಕ್ಯಾಡಗಿ ಗ್ರಾಮ ಪಂಚಾಯತಿಯಲ್ಲಿ (kyadgi Gram panchayat) ನರೇಗಾ (nrega) ಯೋಜನೆಯಲ್ಲಿ ಬಾರೀ ಗೋಲ್ಮಾಲ್ ನಡೆದಿದ್ದು, ಶಾಲಾ ಮಕ್ಕಳನ್ನೇ ಕಾರ್ಮಿಕರು ಎಂದು ದಾಖಾತಿಗಳಲ್ಲಿ ಫೋಟೋ ಅಪ್ಲೋಡ್ ಮಾಡಲಾಗಿದೆ. ಹೌದು.. ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಶಾಲಾ ಮೈದಾನ ನಿರ್ಮಾಣ ಕಾಮಗಾರಿ ಫೋಟೋ ಅಪ್ ಲೋಡ್ ಮಾಡಲಾಗಿದ್ದು, ಇದರಲ್ಲಿ ಮಕ್ಕಳ ಫೋಟೋಗಳು ಇವೆ. ಮಕ್ಕಳೇ ಕಾರ್ಮಿಕರೆಂದು ಬಿಂಬಿಸಿ ಕ್ಯಾಡಗಿ ಗ್ರಾಮ ಪಂಚಾಯತಿ ಪಿಡಿಓ ಬಿಲ್ ಪಾವತಿಸಿದ್ದಾರೆ. ಇದರ ಜೊತೆ ಇತರೆ ಬೇರೆ ಬೇರೆ ಕಾಮಗಾರಿಗಳಿಗೂ ಒಂದೇ ಫೋಟೋ ಎಡಿಟ್ ಮಾಡಿ ಬಿಲ್ ಎತ್ತಿರುವ ಆರೋಪ ಕೇಳಿಬಂದಿದೆ.
ವಿಜಯಪುರ ಜಿಲ್ಲೆ ಕ್ಯಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಹಳ್ಳಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯ ಮೈದಾನ ನಿರ್ಮಾಣ ಮಾಡಲಾಗಿದೆ. ಅದಕ್ಕಾಗಿ ನರೇಗಾ ಯೋಜನೆಯಲ್ಲಿ ಕೂಲಿಕಾರ್ಮಿಕರನ್ನು ಬಳಕೆ ಮಾಡಿಕೊಂಡು ಮೈದಾನ ಮಾಡಲಾಗಿದೆ ಎಂದು ನಮೂದಿಸಲಾಗಿದೆ. ಆದರೆ ಯಾವುದೇ ಕಾಮಗಾರಿ ಮುಕ್ತಾಯವಾದರೂ ಅಲ್ಲಿ ಕೆಲಸ ಮಾಡಿದ ಕಾರ್ಮಿಕರು ಇದ್ದ ಫೋಟೋಗಳನ್ನು ನಿಯಮಗಳ ಪ್ರಕಾರ ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಬೇಕು. ನಂತರವಷ್ಟೇ ಅಧಿಕೃತಗೊಂಡ ನಂತರ ಕೂಲಿಯ ಹಣ ನೀಡಲಾಗುತ್ತದೆ. ಆದ್ರೆ, ನಾಗರಹಳ್ಳಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯ ಮೈದಾನ ನಿರ್ಮಾಣ ಕಾಮಗಾರಿ ಮುಗಿದಿದೆ ಎಂದು ಅದೇ ಶಾಲೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳೇ ಕೂಲಿ ಕಾರ್ಮಿಕರು ಎಂದು ಫೋಟೋ ತೆಗೆದು ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲಾಗಿದೆ.
ಸರ್ಕಾರದ ನಿಯಮದ ಪ್ರಕಾರ ಅಪ್ರಾಪ್ತ ಮಕ್ಕಳನ್ನು ಕೂಲಿ ಕೆಲಸಕ್ಕೆ ಹಚ್ಚುವುದು ಅಪರಾಧ. ಅದರಲ್ಲೂ ನರೇಗಾ ಯೋಜನೆ ಕೆಲಸಕ್ಕೆ ಶಾಲಾ ಮಕ್ಕಳೇ ಕೂಲಿ ಕಾರ್ಮಿಕರು ಎಂದು ನರೇಗಾ ಎನ್ ಎನ್ ಎಂ ಎಸ್ ತಂತ್ರಾಶದಲ್ಲಿ ಫೋಟೋ ಹಾಕಿ ಕೂಲಿ ಹಣ ಪಡೆದುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಸ್ಥಳೀಯರು ಪ್ರಶ್ನೆ ಮಾಡಿದರೆ ಕಣ್ತಪ್ಪಿನಿಂದ ಆಗಿದೆ ಪಿಡಿಓ ಮಂಜುನಾಥ ಸಬೂಬು ಹೇಳುತ್ತಿದ್ದಾರೆ.
ಇದು ನಾಗರಹಾಳ ಗ್ರಾಮದ ಸರ್ಕಾರಿ ಶಾಲೆಯ ಕಥೆಯಾದರೆ, ಇದೇ ಪಿಡಿಓ ಮಂಜುನಾಥ ಡೊಳ್ಳಿ ಅವರು ಕ್ಯಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ರಸ್ತೆ ನಿರ್ಮಾಣ, ಹಳ್ಳದ ಹೂಳು ತೆಗೆಯುವುದು ಸೇರಿದಂತೆ ಇತರೆ ಕೆಲಸ ಕಾಮಗಾರಿಗಳನ್ನು ಮಾಡಿಸಿದ ಫೋಟೋಗಳನ್ನು ಸಹ ಎನ್ ಎನ್ ಎಸ್ ಎಂ ತಂತ್ರಾಂಶಗಳಲ್ಲಿ ಅಪ್ ಲೋಡ್ ಮಾಡಿ ಬಿಲ್ ಪಡೆದುಕೊಂಡಿದ್ದಾರೆ. ಅದರೆ ಇಲ್ಲಿಯೂ ಗೋಲ್ಮಾಲ್ ಮಾಡಿದ್ದು ಬಹಿರಂಗವಾಗಿದೆ. ಕಾರಣ ಎಲ್ಲಾ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಕೆಲವೇ ಕಾರ್ಮಿಕರನ್ನು ಫೋಟೋದಲ್ಲಿ ನಿಲ್ಲಿಸಿ ತೆಗೆದು ಅಪ್ ಲೋಡ್ ಮಾಡಲಾಗಿದೆ. ಹೀಗೆ ವಿವಿಧ ಕಾಮಗಾರಿಗಳಿಗೂ ಅದೇ ಮಕ್ಕಳನ್ನು ಕಾರ್ಮಿಕರು ಎಂದು ಫೋಟೋ ಅಪ್ಲೋಡ್ ಮಾಡಲಾಗಿದೆ.
ಪ್ರತಿಯೊಂದು ಕಾಮಗಾರಿ ಮುಗಿದೆ ಎಂದು ಅದೇ ಕಾರ್ಮಿಕರನ್ನು ನಿಲ್ಲಿಸಿ ಫೋಟೋಗಳನ್ನು ತೆಗೆದು ಎನ್ ಎನ್ ಎಂ ಎಸ್ ತಂತ್ರಾಶದಲ್ಲಿ ಹಾಕಿ ಬಿಲ್ ಪಡೆದುಕೊಳ್ಳಲಾಗಿದೆ. ಈ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಮಕ್ಮಲ್ ಟೋಪಿಯನ್ನು ಹಾಕಲಾಗಿದೆ. ಕ್ಯಾಡಗಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಂಜುನಾಥ ಡೊಳ್ಳಿ ಹಾಗೂ ಇತರೆ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪಿಸಲಾಗಿದ್ದು, ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಜಿಪಂ ಸಿಇಓ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆಯನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕ್ಯಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಅವ್ಯವಹಾರ ಭ್ರಷ್ಟಚಾರ ಆಗಿರೋ ಕುರಿತಂತೆ ದೂರು ಸ್ವೀಕರಿಸಿರೋ ಜಿಪಂ ಸಿಇಓ ರಿಶಿ ಆನಂದ ತನಿಖೆ ಮಾಡುವ ಭರವಸೆ ನೀಡಿದ್ದಾರೆ. ಭರವಸೆ ಭರವಸೆಯಾಗಿಯೇ ಉಳಿಯಲಿದೆಯೋ ಅಥವಾ ಕಾನೂನು ಪ್ರಕಾರ ತನಿಖೆಯಾಗಲಿದೆಯೋ ಎಂಬುದನ್ನು ಕಾದು ನೊಡಬೇಕಿದೆ.
Published On - 6:14 pm, Sat, 14 June 25