ಸರ್ಕಾರಿ ಶಾಲೆಯಲ್ಲಿ ಗಣೇಶನ ಪ್ರತಿಷ್ಠಾಪನೆಗೆ ವಿರೋಧ: ಮಕ್ಕಳ ಪ್ರತಿಭಟನೆಗೆ ಮಣಿದು ಗಣೇಶ ಪ್ರತಿಷ್ಠಾಪಿಸಿದ ಶಿಕ್ಷಕ ದರ್ಗಾ
ಎಫ್ ಆರ್ ದರ್ಗಾ ಕೆಲ ಕಾರಣಗಳನ್ನು ನೀಡಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿಲ್ಲಾ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಎಲ್ಲಾ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶಾಲಾ ಆವರಣದ ಮರದ ಕೆಳಗೆ ಕುಳಿತು ಪಾಠಗಳನ್ನು ಕೇಳುವ ಮೂಲಕ ಪ್ರತಿಭಟನೆ ನಡೆಸಿದರು.
ವಿಜಯಪುರ: ಎಲ್ಲೆಡೆ ವಿಘ್ನ ವಿನಾಶಕ ಗಣೇಶನ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಮನೆ ಮನೆಗಳಲ್ಲಿಯೂ ಗಣೇಶನ ಮೂರ್ತಿಗಳನ್ನು ಇಟ್ಟು ಜನರು ಭಕ್ತಿಭಾವದಿಂದ ಪೂಜೆ ಮಾಡುತ್ತಿದ್ದಾರೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಜಾನನ ಮೂರ್ತಿಗಳನ್ನು ಇಡಲು ಯುವ ಹೈಕಳು ಕುಣಿದು ಕುಪ್ಪಳಿಸಿ ಲಂಬೋಧರನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇಷ್ಟೇಯಲ್ಲಾ ವಿವಿಧ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸಂಘ ಸಂಸ್ಥೆಗಳಲ್ಲಿಯೂ ಗಣೇಶನ ಮೂರ್ತಿ ಇಟ್ಟು ಪೂಜೆ ಮಾಡಲಾಗುತ್ತಿದೆ. ಇದರ ಮಧ್ಯೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣೇಶನ ಹಬ್ಬಕ್ಕೆ ಸಂಬಂಧಿಸಿದಂತೆ ವಿಘ್ನ ಉಂಟಾಗಿದೆ.
ನಿನ್ನೆ ಯಲಗೂರಿನ ಶಾಲೆಗೆ ಗಣೇಶ ಚತುರ್ಥಿಯ ಕಾರಣ ರಜೆ ಇತ್ತು. ಶಾಲಾ ಮಕ್ಕಳು ತಮ್ಮ ತಮ್ಮ ಮನೆಯಗಳಲ್ಲಿ ತಮ್ಮ ಏರಿಯಾಗಳಲ್ಲಿ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆಯಲ್ಲಿ ಸಖತ್ ಬ್ಯುಸಿಯಾಗಿದ್ದರು. ಆದರೆ ಇಂದು ಶಾಲೆಗೆ ಬಂದ ವಿದ್ಯಾರ್ಥಿಗಳಲ್ಲಿ ನಿರಾಸೆ ಕಾದಿತ್ತು. ಕಾರಣ ಶಾಲೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿರಲಿಲ್ಲಾ. ಈ ಕುರಿತು ಯಾಕೆ ಗಣೇಶನ ಮೂರ್ತಿಯನ್ನು ನಮ್ಮ ಶಾಲೆಯಲ್ಲಿ ಕೂಡಿಸಿಲ್ಲಾ ಎಂದು ಶಿಕ್ಷಕರಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ವಿದ್ಯಾರ್ಥಿಗಳು ಕೇಳಿದ್ದಾರೆ. ಆಗ ಎಫ್ ಆರ್ ದರ್ಗಾ ಕೆಲ ಕಾರಣಗಳನ್ನು ನೀಡಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿಲ್ಲಾ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಎಲ್ಲಾ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶಾಲಾ ಆವರಣದ ಮರದ ಕೆಳಗೆ ಕುಳಿತು ಪಾಠಗಳನ್ನು ಕೇಳುವ ಮೂಲಕ ಪ್ರತಿಭಟನೆ ನಡೆಸಿದರು.
ಇದಕ್ಕೆ ಯಲಗೂರು ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳ ಪೋಷಕರು ಸಹ ಸಾಥ್ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯ ಎಫ್ ಆರ್ ದರ್ಗಾ ಅವರನ್ನು ಈ ಕುರಿತು ಪ್ರಶ್ನೆ ಮಾಡಿದರು. ಈ ವೇಳೆ ಹೆಡ್ ಮಾಸ್ಟರ್ ದರ್ಗಾ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸುದ್ದಿ ತಿಳಿದ ನಿಡಗುಂದಿ ಪೊಲೀಸ್ ಠಾಣೆಯ ಸಿಬ್ಬಂದಿ ಶಾಲೆಗೆ ಆಗಮಿಸಿ ಪರಸ್ಥಿತಿಯನ್ನು ತಿಳಿಗೊಳಿಸಿದರು. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಎಫ್ ಆರ್ ದರ್ಗಾ ಹಾಗೂ ಇತರೆ ಶಿಕ್ಷಕರು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡೋದಾಗಿ ಹೇಳಿದರು. ಬಳಿಕ ಗಣೇಶನ ಮೂರ್ತಿಯನ್ನು ತಂದು ಶಾಲೆಯಲ್ಲಿ ಪ್ರತಿಷ್ಠಾಪಿಸಿದರು. ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಪೋಷಕರು ಹಾಗೂ ಇಡೀ ಶಿಕ್ಷಕ ಬಳಗ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದರು. ವಿಘ್ನಗಳ ನಡುವೆ ವಿಘ್ನೇಶ್ವನನ್ನು ತಂದು ಕೂಡಿಸಿದ ಬಳಿಕ ಎಲ್ಲಾ ವಿಘ್ನಗಳು ಪರಿಹಾರವಾದವು.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
Published On - 5:06 pm, Thu, 1 September 22