
ವಿಜಯಪುರ, ಮಾರ್ಚ್ 04: “ನನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ರಜೆ ಸಿಗಲಿಲ್ಲ, ಕಡೆಗೂ ನನ್ನ ಮಗ ಉಳಿಯಲಿಲ್ಲ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ನನಗೆ ಬಹಳ ನೋವಾಗಿದೆ” ಈ ರೀತಿಯಾಗಿ ವಿಜಯಪುರ (Vijayapura) ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ವಾಟ್ಸಪ್ ಗ್ರೂಪ್ನಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣೆಯ (Gandhi Chowk Police Station) ಪೊಲೀಸ್ ಪೇದೆ ಎ. ಎಸ್ ಬಂಡುಗೊಳ ಸಂದೇಶ ಕಳುಹಿಸಿದ್ದಾರೆ.
ಕಾನ್ಸಸ್ಟೇಬಲ್ ಎಎಸ್ ಬಂಡುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಎಎಸ್ ಬಂಡುಗೊಳ ಅವರು ಐಸಿಯುನಲ್ಲಿನ ಮಗುವಿನ ಫೋಟೋ ತೆಗೆದು ಪೊಲೀಸ್ ಸಿಬ್ಬಂದಿಗಳ ಗ್ರೂಪ್ನಲ್ಲಿ ಈ ರೀತಿಯಾಗಿ ಬರೆದು ಹಾಕಿದ್ದಾರೆ. ಈ ಘಟನೆಯನ್ನು ಜೊಹೇದ್ ಕಿಂಗ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿ, ಡಿಜಿಪಿ, ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಟಿವಿ9ಗೆ ಟ್ಯಾಗ್ ಮಾಡಲಾಗಿದೆ.
ಇದನ್ನೂ ಓದಿ: ಕಿರುಸಾಲ, ಬಡ್ಡಿ ವ್ಯವಹಾರ: ವಿಜಯಪುರ ಜಿಲ್ಲೆಯ 25 ಠಾಣಾ ವ್ಯಾಪ್ತಿಯ 104 ಕಡೆ ಪೊಲೀಸರು ದಾಳಿ
ಈ ಕುರಿತು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕಾನ್ಸಸ್ಟೇಬಲ್ ಎ ಎಸ್ ಬಂಡುಗೋಳ ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ ರಜೆ ಕೇಳಿಲ್ಲ. ಕಾನ್ಸಸ್ಟೇಬಲ್ ಎ ಎಸ್ ಬಂಡುಗೋಳ ಎರಡು ದಿನ ಕರ್ತವ್ಯಕ್ಕೆ ಹಾಜರಾಗಿಲ್ಲ. ಎ ಎಸ್ ಬಂಡುಗೋಳ ಪತ್ನಿಗೆ ಇದು ಮೂರನೇ ಹೆರಿಗೆ ಎಂದು ತಿಳಿದುಬಂದಿದೆ. ಇಲಾಖಾ ಸಿಬ್ಬಂದಿಗಳ ಗ್ರೂಪ್ನಲ್ಲಿ ಪೋಸ್ಟ್ ಹಾಕಿದ್ದಾನೆ. ಈ ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ತಿಳಿಸಿದರು.