ವಿಜಯಪುರ ವೈದ್ಯಕೀಯ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗೆ ರ‍್ಯಾಗಿಂಗ್: ಪ್ರಧಾನಿಗೆ ದೂರು, ಐವರ ಬಂಧನ
ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ರ‍್ಯಾಗಿಂಗ್ ಆರೋಪ ಕೇಳಿಬಂದಿದೆ. ಹಮೀಮ್ ಎಂಬ ವಿದ್ಯಾರ್ಥಿ, ಸೀನಿಯರ್ಸ್ ಹಲ್ಲೆ ಮತ್ತು ರ‍್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮತ್ತು ರಾಜ್ಯ ಮುಖ್ಯಮಂತ್ರಿಗಳಿಗೆ ಟ್ವೀಟ್ ಮಾಡಿದ್ದಾರೆ. ಸದ್ಯ ಪೊಲೀಸರು ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ವಿಜಯಪುರ, ಫೆಬ್ರವರಿ 19: ಸಾಮಾಜಿಕ ಪಿಡಿಗು ರ‍್ಯಾಗಿಂಗ್ (Ragging), ಶಾಲಾ ಕಾಲೇಜುಗಳಲ್ಲಿ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ರ‍್ಯಾಗಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕಾಗಿ ಕಠಿಣ ಕಾನೂನು ಜಾರಿ ಮಾಡಲಾಗಿದೆ. ಇಷ್ಟಾಗಿಯೂ ನಾಗರಿಕ ಸಮಾಜ ತಲೆ ತಗ್ಗಿಸುವಂತ ರ‍್ಯಾಗಿಂಗ್ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಹೊರ ಭಾಗದಲ್ಲಿರುವ ಅಲ್ ಅಮೀನ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ಮಾಡಿರುವ ಆರೋಪ ಗಂಭೀರವಾಗಿ ಕೇಳಿ ಬಂದಿದೆ. ರ್ಯಾಗಿಂಗ್ಗೆ ಒಳಗಾಗಿರುವ ವೈದ್ಯಕೀಯ ವಿದ್ಯಾರ್ಥಿ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮುಕಾಶ್ಮೀರ ಮುಖ್ಯಮಂತ್ರಿ, ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಟ್ವಿಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಐವರು ವಿದ್ಯಾರ್ಥಿಗಳ ಬಂಧನ
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಗ್ರಾಮಾಂತರ ಪೊಲೀಸರಿಂದ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳಾದ ಮೊಹಮ್ಮದ್ ಕಾಸರ್(23), ಬಳ್ಳಾರಿ ಮೂಲದ ಸಮೀರ್ ತಾಡಪತ್ರಿ(24), ಮನ್ಸೂರ್ ಬಾಷಾ(24), ರಾಯಚೂರಿನ ಶೇಖ್ ಸಾವುದ್(23), ಮುಜಫರ್ ಜಮಾದಾರ್(23) ಬಂಧಿತರು. ಬಂಧಿತ ವಿದ್ಯಾರ್ಥಿಗಳ ವಿರುದ್ಧ ಬಿಎನ್‌ಎಸ್ ಕಾಯ್ದೆ 155(2), 329(4), 352 351(2), 189(2), 191(2), 190ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ನಡೆದದ್ದೇನು?
ಜಿಲ್ಲೆಯ ತಿಕೋಟಾ ತಾಲೂಕು ವ್ಯಾಪ್ತಿಯಲ್ಲಿ ಬರುವ ನಗರದ ಹೊರ ಭಾಗದಲ್ಲಿರುವ ಅಲ್ ಅಮೀನ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ಸೀನಿಯರ್ಸ್ ರ‍್ಯಾಗಿಂಗ್ ಮಾಡಿರೋ ಆರೋಪ ಗಂಭೀರವಾಗಿ ಕೇಳಿ ಬಂದಿದೆ. ವಿಜಯಪುರದ ಅಥಣಿ ರಸ್ತೆಯ ಅಲ್ ಅಮೀನ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ನಿನ್ನೆ ಅಂದರೆ ಫೆಬ್ರವರಿ 18 ಮಂಗಳವಾರ ಸಂಜೆ ಕಾಲೇಜಿನಲ್ಲಿ ಎಂಬಿಬಿಎಸ್ನ ಸೀನಿಯರ್ಸ್ ಹಾಗೂ ಜ್ಯೂನಿಯರ್ಸ್ ತಂಡಗಳು ಕ್ರಿಕೆಟ್ ಪಂದ್ಯವಾಡಿದ್ಧಾರೆ. ಈ ವೇಳೆ ಗಲಾಟೆ ಆಗಿದೆಯಂತೆ. ಇದೇ ನೆಪದಲ್ಲಿ 2023 ರ ಬ್ಯಾಚ್ನ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮೂಲದ ಹಮೀಮ್ ಎಂಬ ಎಂಬಿಬಿಎಸ್ ವಿದ್ಯಾರ್ಥಿಗೆ 2019 ರ ಬ್ಯಾಚ್ನ ಹಿರಿಯ ಎಂಬಿಬಿಎಸ್ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದಾರಂತೆ.
ಇದನ್ನೂ ಓದಿ: ಬಾಗಪ್ಪ ಹರಿಜನ್ ಹತ್ಯೆ ಆರೋಪಿಗಳನ್ನು 14-ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ವಿಜಯಪುರದ ನ್ಯಾಯಾಲಯ
ಕ್ರಿಕೆಟ್ ಮ್ಯಾಚ್ ವಿಚಾರದಲ್ಲಿ ನಡೆದ ಗಲಾಟೆಯ ಬಳಿಕ ರಾತ್ರಿ ಹಾಸ್ಟೇಲ್ನ ರೂಮಗೆ ಹಮೀಮ್ ಬಂದಾಗ 2019 ರ ಎಂಬಿಬಿಎಸ್ ವಿದ್ಯಾರ್ಥಿಗಳು ಡಾನ್ಸ್ ಮಾಡು, ಹಾಡು ಹಾಡುವಂತೆ ರ‍್ಯಾಗಿಂಗ್ ಮಾಡಿದ್ದಾರೆ. ನೀನು ಇನ್ನೂ ನಾಲ್ಕು ವರ್ಷ ಇಲ್ಲಿಯೇ ಇರಬೇಕು ಹೇಗೆ ಇರ್ತಿಯಾ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರಂತೆ. ಈ ವಿಚಾರವನ್ನು ರ್ಯಾಗಿಂಗ್ಗೆ ಒಳಗಾದ ವಿದ್ಯಾರ್ಥಿ ಹಮೀಮ್ ನಾಸೀರ್ ಹುಸೇನಿ ಎಂಬ ಹೆಸರಿನಲ್ಲಿರೋ ಎಕ್ಸ್ ಖಾತೆಯಿಂದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ , ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಟ್ವೀಟ್ ಮಾಡಿದ್ದಾನೆ. ಹಲ್ಲೆ ಮಾಡಿ ರ‍್ಯಾಗಿಂಗ್ ಮಾಡಿದ ಬಳಿಕ ಹಾಸ್ಟೇಲ್ನಲ್ಲಿ ತನ್ನ ರೂಂ ಬಳಿ ಸೆಕ್ಯೂರಿಟಿ ಗಾರ್ಡ್ ನಿಯೋಜಿಸಲಾಗಿದೆ. ಸುರಕ್ಷತೆಗಾಗಿ ಸೆಕ್ಯುರಿಟಿ ಗಾರ್ಡ್ ನಿಯೋಜನೆ ಮಾಡಲಾಗಿದೆ ಎಂದು ಮೆಸೇಜ್ ಜೊತೆಗೆ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.
ನಾಸೀರ್ ಹುಸೇನಿ ಹೆಸರಿನಲ್ಲಿರುವ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕುತ್ತಿದ್ದಂತೆ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಸಾವಿರಾರು ಜನರು ವೀಕ್ಷಣೆ ಮಾಡಿದ್ಧಾರೆ. ಇನ್ನು ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆ ಎಎಸ್ಪಿ ರಾಮನಗೌಡ ಹಟ್ಟಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ರಾಯಗೊಂಡ ಜನಾರ ಹಾಗೂ ಇತರೆ ಪೊಲೀಸ್ ಆಧಿಕಾರಿಗಳು ಅಲ್ ಅಮೀನ್ ಮೆಡಿಕಲ್ ಕಾಲೇಜಿಗೆ ಆಗಮಿಸಿ ಮೆಡಿಕಲ್ ಸೂಪರಿಟೆಂಡೆಂಟ್ ಹಾಗೂ ಪ್ರಾಂಶುಪಾಲರು ಸೇರಿದಂತೆ ಇತರರ ವಿಚಾರಣೆ ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ಮೇಲ್ನೋಟಕ್ಕೆ ಅಲ್ಪ ಪ್ರಮಾಣದ ರ‍್ಯಾಗಿಂಗ್ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಸೂಪರಿಟೆಂಡೆಂಟ್ ಡಾ. ಜಿಲಾನಿ ಆವಟಿ ಹೇಳಿದ್ದಿಷ್ಟು
ಈ ಕುರಿತು ಅಲ್ ಅಮೀನ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸೂಪರಿಟೆಂಡೆಂಟ್ ಡಾ. ಜಿಲಾನಿ ಆವಟಿ ಮಾತನಾಡಿದ್ದು, ಕ್ರಿಕೆಟ್ ಆಡುವ ವೇಳೆ ಜಗಳ ಆಗಿದೆ. ಜಗಳ ಕುರಿತು ಆಡಳಿತ ಮಂಡಳಿ ಪ್ರಾಥಮಿಕ ತನಿಖೆ ನಡೆಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದ್ದಾರೆ. ಇಲ್ಲಿ ಜಗಳ ಆಗಿದೆ, ರ‍್ಯಾಗಿಂಗ್ ಆಗಿಲ್ಲಾ ಎಂದಿದ್ದಾರೆ.
ಕಳೆದ 40 ವರ್ಷಗಳಿಂದ ಮೆಡಿಕಲ್ ಕಾಲೇಜು ನಡೆಸಿಕೊಂಡು ಬಂದಿದ್ದೇವೆ ಇಂಥ ಘಟನೆ ಎಂದೂ ಆಗಿಲ್ಲಾ. ಇದಕ್ಕೆಲ್ಲಾ ನಾವು ಅವಕಾಶ ನೀಡಲ್ಲ. ಹಮೀಮ್ಗೆ ಯಾವುದೇ ಗಾಯಗಳಾಗಿಲ್ಲ. ನಾವು ಹಮೀಮ್ ಪೋಷಕರೊಂದಿಗೆ ಮಾತನಾಡಿದ್ದೇವೆ. ದೊಡ್ಡ ಘಟನೆಯಾಗಿದೆ ಎಂದು ಆತನ ಪೋಷಕರು ತಿಳಿದುಕೊಂಡಿದ್ದರು. ಆದರೆ ಅಂತ ಘಟನೆ ಆಗಿಲ್ಲಾ ಎಂದಿದ್ದಾರೆ.
ಹಮೀಮ್ ತಂದೆ ಟ್ವೀಟ್ ಮಾಡಿದ್ದಾರೆ. ಸದ್ಯ ಪೊಲೀಸ್ ಅಧಿಕಾರಗಳು ಆಗಮಿಸಿ ವಿಚಾರಣೆ ಮಾಡಿಕೊಂಡು ಹೋಗಿದ್ದಾರೆ. ನಮ್ಮ ಕಾಲೇಜಿನಲ್ಲಿ ಡಿಸಿಪ್ಲೇನ್ ಕಮಿಟಿ ಇದೆ. ಎಲ್ಲದರ ಬಗ್ಗೆ ನಿಗಾ ವಹಿಸಿರುತ್ತೇವೆ. ಏನೇ ಸಮಸ್ಯೆಯಿದ್ದರೂ ಪರಿಹಾರ ಮಾಡುತ್ತೇವೆ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದ್ದಾರೆ. ಇಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸಮನಾಗಿ ಕಾಣುತ್ತೇವೆಂದು ಎಂದು ಹೇಳಿದ್ದಾರೆ.
ರ‍್ಯಾಗಿಂಗ್ ಆಗಿದ್ದು ನಿಜವೆಂದ ವೈದ್ಯಕೀಯ ವಿದ್ಯಾರ್ಥಿ ಹಮೀಮ್
ಇನ್ನು ಘಟನೆ ಕುರಿತು ರ್ಯಾಗಿಂಗ್ಗೆ ಒಳಗಾದ ವೈದ್ಯಕೀಯ ವಿದ್ಯಾರ್ಥಿ ಹಮೀಮ್ ಪ್ರತಿಕ್ರಿಯಿಸಿದ್ದು, ರ‍್ಯಾಗಿಂಗ್ ಆಗಿದ್ದು ನಿಜ ಎಂದಿದ್ದಾನೆ. ಕ್ರಿಕೆಟ್ ಪಂದ್ಯದ ಬಳಿಕ ರಾತ್ರಿ ಸೀನು ಎಂಬುವವನು ಸೆಲ್ಯೂಟ್ ಮಾಡು ಎಂದು ಹೇಳಿದ. ಇತರೆ ನಾಲ್ಕೈದು ಸೀನಿಯರ್ಸ್ ನನಗೆ ಹಾಡು ಹೇಳಿ ಹಾಗೂ ಡ್ಯಾನ್ಸ್ ಮಾಡು ಎಂದರು. ನಾನು ಎರಡನೇ ವರ್ಷದ ವಿದ್ಯಾರ್ಥಿ ಮಾಡಲ್ಲಾ. ಇದನ್ನೆಲ್ಲಾ ಫಸ್ಟ್ ಇಯರ್ನವರು ಮಾಡುತ್ತಾರೆ. ನಾನು ಮಾಡಲ್ಲಾ ಎಂದು ಹೇಳಿದೆ. ಆಗಲೇ ಇದು ದೊಡ್ಡದಾಗಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಸಹ ನಾನೇ ಮಾಡಿದ್ದೇನೆಂದು ಹಮೀಮ್ ಹೇಳಿದ್ಧಾನೆ.
ಇದೇ ವೇಳೆ ಭಯಾನಕ ವಿಚಾರವನ್ನು ಬಾಯಿ ಬಿಟ್ಟ ಹಮೀಮ್, ಜೂನಿಯರ್ಸ್ಗೆ ಇದೆಲ್ಲಾ ಆಗುತ್ತದೆ ಸೀನಿಯರ್ಸ್ಗೆ ಅಲ್ಲಾ ಎಂದಿದ್ದಾನೆ. ಇಲ್ಲಿ ಹಮೀಮ್ ಪ್ರಕಾರ ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ಬರುವ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಆಗುತ್ತದೆ ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ತನ್ನ ಮೇಲೆ ರ‍್ಯಾಗಿಂಗ್ ಮತ್ತು ಹಲ್ಲೆ ಆಗಿದ್ದರ ಬಗ್ಗೆ ಹಾಸ್ಟೇಲ್ ವಾರ್ಡನ್ ಹಾಗೂ ಪ್ರಾಂಶುಪಾಲರ ಗಮನಕ್ಕೆ ತಂದಿದ್ಧಾನಂತೆ. ಇನ್ನು ಘಟನೆ ಬಳಿಕ ನನ್ನ ರೂಂ ಬಳಿ ಓರ್ವ ಸೆಕ್ಯೂರಿಟಿಯನ್ನು ನೇಮಿಸಿದ್ದಾರೆ. ಈ ಕುರಿತು ಪೊಲೀಸರಿಗೆ ನಾನು ಯಾವುದೇ ದೂರು ನೀಡಿಲ್ಲ. ನನ್ನ ಮೇಲೆ ಸ್ವಲ್ಪ ಮಟ್ಟಿಗಿನ ರ‍್ಯಾಗಿಂಗ್ ಆಗಿದ್ದು ನಿಜ ಎಂದಿದ್ದಾನೆ ಹಮೀಮ್.
ಇದನ್ನೂ ಓದಿ: ಕುವೈತ್ನಲ್ಲಿ ಅರಳಿದ್ದ ಪ್ರೀತಿ ವಿಜಯಪುರದಲ್ಲಿ ಅಂತ್ಯ: ಪ್ರೇಮಿಯನ್ನೇ ನಂಬಿ ಮೋಸ ಹೋದ ಆಂಧ್ರ ಬೆಡಗಿ
ಇನ್ನು ಯಾವುದೇ ಶಿಕ್ಷಣ ಸಂಸ್ಥೆಯ ಒಳಗೆ ಅಥವಾ ಹೊರಗಡೆ ಇಲ್ಲದೆ ರ‍್ಯಾಗಿಂಗ್ ಮಾಡುವುದು ಅಪರಾಧವಾಗಿದೆ. ರ‍್ಯಾಗಿಂಗ್ ಮಾಡಿರುವ ಆರೋಪ ಸಾಬೀತಾದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಲಾಬಹುದಾಗಿದೆ. ಸದ್ಯ ಅಲ್ ಅಮೀನ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ನಲ್ಲಿನ ಎಂಬಿಬಿಎಸ್ 2ನೇ ವರ್ಷದ ವಿದ್ಯಾರ್ಥಿ ಮೇಲೆ ನಡೆದಿದೆ ಎನ್ನಲಾದ ರ‍್ಯಾಗಿಂಗ್ ಆರೋಪವನ್ನು ಆಡಳಿತ ಮಂಡಳಿ ಹಾಗೂ ಮೆಡಿಕಲ್ ಸೂಪರಿಟೆಂಡೆಂಟ್ ಅಲ್ಲಗಳೆದಿದ್ದಾರೆ.
ರ್ಯಾಗಿಂಗ್ಗೆ ಒಳಗಾದ ವಿದ್ಯಾರ್ಥಿ ಹಮೀಮ್ ಮಾತ್ರ ಸ್ವಲ್ಪ ಮಟ್ಟಿಗಿನ ರ‍್ಯಾಗಿಂಗ್ ಆಗಿದೆ. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಆಗುತ್ತದೆ ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ಧಾನೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕಿದೆ. ಒಂದೇ ವೇಳೆ ಎಂಬಿಬಿಎಸ್ ಮೊದಲ ವರ್ಷದ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಆಗುತ್ತಿದ್ದರೆ ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 pm, Wed, 19 February 25