ವಿಜಯಪುರು: ಶಾಲಾ ಶುಲ್ಕ ಭರಿಸಿಲ್ಲವೆಂದು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನ ಹೊರ ಹಾಕಿದ ಶಿಕ್ಷಕರು, ಪೋಷಕರು ಗರಂ
ವಿಜಯಪುರದ ಶಮ್ಸ್ ಶಾಲೆಯು ಎರಡನೇ ಸೆಮಿಸ್ಟರ್ ಶುಲ್ಕ ಬಾಕಿಯಿದ್ದ ಕಾರಣ 1 ರಿಂದ 6ನೇ ತರಗತಿಯ ವಿದ್ಯಾರ್ಥಿಗಳನ್ನು ಯುನಿಟ್ ಪರೀಕ್ಷೆಯಿಂದ ಹೊರಹಾಕಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಇಂದು ಪ್ರತಿಭಟನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಶಾಲಾ ಆಡಳಿತ ಮಂಡಳಿ ವಿರುದ್ದ ಪೋಷಕರು ವಾಗ್ದಾಳಿ ಮಾಡಿದ್ದಾರೆ.

ವಿಜಯಪುರ, ಫೆಬ್ರವರಿ 05: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ. ಇದು ವಿದ್ಯಾಮಂದಿರ ಎಂದು ಶಾಲಾ ಕಾಲೇಜುಗಳ ಪ್ರವೇಶ ದ್ವಾರದಲ್ಲಿ ಬರೆದಿರೋದನ್ನಾ ನೋಡಿದ್ದೇವೆ. ಆದರೆ ಈಗ ಜ್ಞಾನ ದೇಗುಲವಿದು ಶುಲ್ಕ (fees) ಭರಿಸಿ ಒಳಗೆ ಬಾ ಎಂಬಂತಾಗಿದೆ. ಆಧುನಿಕರಣದ ಭರಾಟೆಯಲ್ಲಿ ಶಿಕ್ಷಣ ಮಾರಾಟದ ವಸ್ತುವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕೇಂದ್ರಗಳಾಗಿ ಮಾರ್ಪಾಡಾಗಿವೆ. ವಿಜಯಪುರದಲ್ಲಿ ನಡೆದ ಘಟನೆ ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ಎರಡನೇ ಸೆಮಿಸ್ಟರ್ ಶುಲ್ಕ ಭರಿಸದ ಕಾರಣ ಯುನೀಟ್ ಟೆಸ್ಟ್ನಿಂದ ವಿದ್ಯಾರ್ಥಿಗಳನ್ನು ಹೊರಗೆ ಹಾಕಿ ಶಾಲಾ ಆಡಳಿತ ಮಂಡಳಿ ವಿಕೃತಿ ಮೆರೆದಿದೆ.
ಪೋಷಕರು ಆಕ್ರೋಶ
ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪೈಕಿ ಡಿ.ವಿ ದರಬಾರ್ ಮೆಮೋರಿಯಲ್ ಟ್ರಸ್ಟ್ ನ ಶಮ್ಸ್ ಶಾಲೆಯೂ ಒಂದು. ನಗರದ ಕೀರ್ತಿ ನಗರದಲ್ಲಿರುವ ಈ ಶಾಲೆಯಲ್ಲಿಂದು ಪೋಷಕರು ಆಕ್ರೋಶಗೊಂಡಿದ್ದು ಕಂಡು ಬಂತು. ಇಂದು ಮಕ್ಕಳ ಜೊತೆಗೆ ಶಾಲೆಗೆ ಆಗಮಿಸಿದ ಪೋಷಕರು ಏರು ಧ್ವನಿಯಲ್ಲೇ ಶಾಲಾ ಶಿಕ್ಷಕರ ಮುಖ್ಯೋಪಾಧ್ಯಾಯರ ಹಾಗೂ ಶಾಲಾ ಆಡಳಿತ ಮಂಡಳಿಯ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ವಿಜಯಪುರ ಜನರ ವಿಮಾನಯಾನ ಇನ್ನಷ್ಟು ವಿಳಂಬ: ಏರ್ಫೋರ್ಟ್ ಉದ್ಘಾಟನೆಗೆ ಮತ್ತೆ ವಿಘ್ನ
ಎರಡನೇ ಸೆಮಿಸ್ಟರ್ನ ಶಾಲಾ ಬೋಧನಾ ಶುಲ್ಕ ಭರಿಸಿಲ್ಲಾ ಎಂದು ಶಿಕ್ಷಕರು ಯುನಿಟ್ ಟೆಸ್ಟ್ ಗೆ ಹಾಜರಾಗಿದ್ದ 1 ರಿಂದ 6 ನೇ ತರಗತಿಯ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ಧಾರೆ. ಪರೀಕ್ಷೆ ಬರೆಸದೇ ಮಕ್ಕಳನ್ನು ಯಾಕೆ ಕಳುಹಿಸಿದ್ದು. ಇದು ನಮ್ಮ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಪೋಷಕರು ಶಾಲೆಗೆ ಆಗಮಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಎರಡನೇ ಸೆಮಿಸ್ಟರ್ಗೆ ಸಂಬಂಧಿಸಿದಂತೆ ಮೂರ್ನಾಲ್ಕು ಸಾವಿರ ಶುಲ್ಕ ಮಾತ್ರ ಬಾಕಿ ಇದೆ. ಇಷ್ಟು ಹಣದ ಕಾರಣ ಪರೀಕ್ಷೆ ಬರೆಯುತ್ತಿರುವವರನ್ನು ಬಿಡಿಸಿ ಕಳುಹಿಸಿದ್ದು ಯಾಕೆ? ಎಂದು ಪೋಷಕರ ಪ್ರಶ್ನೆಯಾಗಿದೆ.
ಇನ್ನು ಕೆಲ ಪೋಷಕರು ನಾವು ಪೂರ್ಣ ಶುಲ್ಕ ಭರಿಸಿದ್ದರೂ ನಮ್ಮ ಮಕ್ಕಳನ್ನು ಪರೀಕ್ಷೆಯಿಂದ ಹೊರ ಹಾಕಿದ್ದಾರೆ. ಯಾಕೆ ಎಂದು ಪ್ರಶ್ನೆ ಮಾಡಿದರೆ ಶುಲ್ಕ ಭರಿಸಿದ್ದು ಅಪ್ ಡೆಟ್ ಆಗಿಲ್ಲಾ ಎಂದು ನೆಪ ಹೇಳಿದ್ದಾರೆಂದು ಪೋಷಕರಾದ ಮಹಾಂತಾ ಬಂಗಾರಿಕರ ಅಸಮಾಧಾನ ಹೊರ ಹಾಕಿದ್ದಾರೆ.
ಉಡಾಫೆ ಉತ್ತರ
ಶಮ್ಸ್ ಶಾಲೆಯಲ್ಲಿನ ಸಮಸ್ಯೆ ಕುರಿತು ಪೋಷಕರು ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರ ಜೊತೆಗೆ ವಾಗ್ವಾದ ನಡೆಸಿದ ಬಳಿಕ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರಿಗೆ ಕರೆ ಮಾಡಿದರೂ ಸಹ ಗಮನ ಹರಿಸಿಲ್ಲವಂತೆ. ಶಾಲೆಯ ಶುಲ್ಕ ಭರಿಸಿ ಎಂದು ಹೇಳಿದ್ದಾರೆ. ಮಕ್ಕಳನ್ನು ಪರೀಕ್ಷೆಯಿಂದ ಹೊರಗಡೆ ಕಳುಹಿಸಿದ್ದರ ಕುರಿತು ಶಿಕ್ಷಣ ಇಲಾಖೆಯವರಿಗೆ, ಮೇಲಾಧಿಕಾರಿಗಳಿಗೆ ಹೇಳಿ ನಾವೇನೂ ಮಾಡೋಕಾಗಲ್ಲಾ ಎಂದು ಉಡಾಫೆಯ ಉತ್ತರ ನೀಡಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.
ಇನ್ನು ಶಮ್ಸ್ ಶಾಲೆಯ ಮುಖ್ಯೋಪಾಧ್ಯಾಯ ರೇವತಿ ಕುಲಕರ್ಣಿ, ಈ ಸಮಸ್ಯೆಯನ್ನು ಬಗೆ ಹರಿಸೋದಾಗಿ ಹೇಳಿದ್ದಾರೆ. ವೈಯುಕ್ತಿಕ ಕಾರಣಗಳಿಂದ ರಜೆಯಲ್ಲಿದ್ದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಶುಲ್ಕದ ವಿಚಾರವಾಗಿ ಪರೀಕ್ಷೆಯಿಂದ ಹೊರ ಹಾಕಿದ್ದರ ಕುರಿತು ಗಮನ ಹರಿಸಲಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಪುನಃ ಯುನಿಟ್ ಟೆಸ್ಟ್ ಮಾಡುತ್ತೇವೆಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಪರೀಕ್ಷೆಯಿಂದ ಮಕ್ಕಳನ್ನು ಹೊರಗಡೆ ಕಳುಹಿಸಿದ್ದು ತಪ್ಪು ಎಂದು ತಮ್ಮ ಶಾಲಾ ಶಿಕ್ಷಕರ ನಿರ್ಧಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಯತ್ನಾಳ್ ಒಡೆತನದ ಸಂಸ್ಥೆಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ವಿಮೆ ಭಾಗ್ಯ! ಪೋಷಕರಿಂದ ಮೆಚ್ಚುಗೆ
ಸದ್ಯ ಶಮ್ಸ್ ಸ್ಕೂಲ್ನಲ್ಲಿ ಆದಂತ ಅವಾಂತರ ಕುರಿತು ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಬೇಕಿದೆ. ಶಾಲಾ ಭೋಧನಾ ಶುಲ್ಕ ಭರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಶುಲ್ಕದ ವಿಚಾರವಾಗಿ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನು ಹೊರ ಹಾಕಿರೋದು ಎಷ್ಟರ ಮಟ್ಟಿಗೆ ಸರಿ ಎಂಬ ನಿಟ್ಟಿನಲ್ಲಿ ವಿಚಾರಣೆ ನಡೆಸಬೇಕಿದೆ. ಶಿಕ್ಷಣ ಮೂಲ ಹಕ್ಕು ಎಂಬುದನ್ನು ಮರೆತು ಶಿಕ್ಷಣ ಸಂಸ್ಥೆಯ ಈ ರೀತಿಯ ನಡೆ ಇಟ್ಟಿದ್ದು ಸರಿಯಾದ ನಡೆಯಲ್ಲಾ ಎಂದು ಪೋಕಷರು ಮಾತ್ರ ಶಾಲಾ ಶಿಕ್ಷಕರ ವಿರುದ್ದ ಕಿಡಿ ಕಾರಿದ್ದಾರೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.