ವಿಜಯಪುರದಲ್ಲಿ ಅಕ್ರಮ ಕಸಾಯಿಖಾನೆಗಳ ದರ್ಬಾರ್: ಜಾನುವಾರುಗಳ ತ್ಯಾಜ್ಯ ಚರಂಡಿಗೆ, ದುರ್ವಾಸನೆ
ವಿಜಯಪುರದ ವಾರ್ಡ್ ನಂಬರ್ 7 ರ ಶಾಪೂರ ಅಗಸಿಯಲ್ಲಿ, ಅಕ್ರಮ ಕಸಾಯಿಖಾನೆಗಳು ಹೆಚ್ಚುತ್ತಿವೆ. ಜಾನುವಾರುಗಳ ರಕ್ತ ಮತ್ತು ತ್ಯಾಜ್ಯ ಚರಂಡಿಗೆ ಬಿಡಲಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ವಿಜಯಪುರ, ಮಾರ್ಚ್ 13: ನಗರದ ಅಕ್ರಮ ಕಾಸಾಯಿ ಖಾನೆಗಳ (slaughterhouses) ಅಡ್ಡೆಯಾಗುತ್ತಿದೆಯಾ? ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಕಾರಣ ನಗದರ ಹೃದಯ ಭಾಗದಲ್ಲಿ ಅದರಲ್ಲೂ ಎಸ್ಪಿ ಕಚೇರಿ ಕೂಗಳತೆಯಲ್ಲೇ ಈ ಅಕ್ರಮ ನಡೆಯುತ್ತಿದೆ. ವಾರ್ಡ್ ನಂಬರ್ 7 ರಲ್ಲಿನ ಶಾಪೂರ (Shapur) ಆಗಸಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗಳನ್ನು ನಡೆಸಲಾಗುತ್ತಿದೆ. ಇಡೀ ಏರಿಯಾದಲ್ಲಿ ಕೆಟ್ಟ ದುರ್ವಾಸನೆ ಬೀರಿದ್ದು, ಶ್ವಾಸಕೋಶದ ರೋಗಕ್ಕೀಡಾಗುವಂತಾಗಿದೆ. ಚರಂಡಿಯಲ್ಲಿ ಜಾನುವಾರುಗಳ ರಕ್ತ, ತ್ಯಾಜ್ಯವೇ ಹರಿದು ಹೋಗುತ್ತಿದೆ. ಸಂಬಂಧ ಪಟ್ಟ ಆಧಿಕಾರಿಗಳ ನಿರ್ಲಕ್ಷತನವೋ ಅಥವಾ ಜಾಣ ಕುರುಡೋ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಅಕ್ರಮ ಕಸಾಯಿಖಾನೆಗಳ ಅಟ್ಟಹಾಸ
ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 7 ರಲ್ಲಿ ಬರುವ ಶಾಪೂರ ಅಗಸಿಯಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುತ್ತವೆ. ಕಾನೂನು ಪ್ರಕಾರ ಇಲ್ಲಿ ಜಾನುವಾರುಗಳ ವಧೆ ನಡೆಯುತ್ತಿಲ್ಲಾ. ಇಲ್ಲಿನ ಕಸಾಯಿಖಾನೆಗಳು ಪರವಾನಿಗೆಯನ್ನು ಪಡೆಯದೇ ಹಸುಗಳು ಸೇರಿದಂತೆ ಇತರೆ ಪ್ರಾಣಿಗಳ ವಧೆ ಮಾಡಿ ಮಾಂಸ, ಚರ್ಮದ ವ್ಯಾಪಾರ ವಹಿವಾಟು ಮಾಡುತ್ತಿವೆ. ಪ್ರಾಣಿಗಳ ವಧೆಯಿಂದ ಬರುವ ರಕ್ತ ಹಾಗೂ ತ್ಯಾಜ್ಯ ಸಂಸ್ಕರಣೆ ಮಾಡದೇ ಚರಂಡಿಗೆ ಬಿಡುವ ಕಾರಣ ಇಡೀ ಚರಂಡಿಯಲ್ಲಿ ರಕ್ತವೇ ಹರಿದು ಹೋಗುವಂತೆ ಕಾಣುತ್ತಿದೆ.
ಇದನ್ನೂ ಓದಿ: ಮೊಣಕಾಲು ಮತ್ತು ಚಪ್ಪೆಯ ಎಲಬು ಮರು ಜೋಡಣೆ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡ ವಿಜಯಪುರ ಜಿಲ್ಲಾಸ್ಪತ್ರೆ ವೈದ್ಯರು
ಶಾಪೂರ ಅಗಸಿ, ಪೊಲೀಸ್ ತರಬೇತಿ ಶಾಲೆ, ಪೊಲೀಸ್ ಪರೇಡ್ ಮೈದಾನದ ಬಳಿಯ ಏರಿಯಾದಲ್ಲಿ ವಿಪರೀತ ದುರ್ವಾಸಣೆ ಹರಡಿದೆ. ಉಸಿರಾಡಲು ಸಹ ಜನರು ಸಮಸ್ಯೆಗೀಡಾಗುವಂತಾಗಿದೆ. ದುರ್ವಾಸಣೆಯಿಂದ ಜನರೆಲ್ಲಾ ಮಾಸ್ಕ್ ಉಪಯೋಗಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆಗಳಿಗೆ ಜನರು ಈಡಾಗುತ್ತಿದ್ದಾರೆ. ಕ್ಯಾನ್ಸರ್, ಇತರೆ ರೋಗಗಳು ಹಾಗೂ ಇತರೆ ಶ್ವಾಸಕೋಶ ರೋಗದಿಂದ ಬಳಲುತ್ತಿದ್ದ ಜನರು ಇಲ್ಲಿಂದ ಮನೆಗಳನ್ನು ಖಾಲಿ ಮಾಡಿ ಬೇರಡೆ ಬಾಡಿಗೆ ಮನೆ ಮಾಡುವಂತಾಗಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲಾ ಎಂಬುದು ದುರಂತವಾಗಿದೆ ಎಂದು ಸಮಸ್ಯೆ ಅನುಭವಿಸುತ್ತಿರುವ ಡಾ. ರೂಪಾದೇವಿ ಸುರಪೂರ ಎಂಬುವವರು ಆರೋಪ ಮಾಡಿದ್ದಾರೆ.
ಕ್ಯಾಮೆರಾ ಕಂಡು ಓಟ ಕಿತ್ತಿದ ಬಾಲಕರು
ಈ ಸಮಸ್ಯೆ ಕುರಿತು ಕಾಸಾಯಿಖಾನೆಗಳಿದ್ದ ಜಾಗಕ್ಕೆ ನಮ್ಮ ತಂಡ ತೆರಳಿದ್ದೇ ತಡ ಹಲವಾರು ಅಕ್ರಮ ಕಸಾಯಿಖಾನೆಗಳು ಹಸುಗಳನ್ನು ವಧೆ ಮಾಡುವ ದೃಶ್ಯ ನಮಗೆ ಕಂಡು ಬಂತು. ನಮ್ಮ ಕ್ಯಾಮೆರಾವನ್ನು ಕಂಡ ತಕ್ಷಣ ಹಲವಾರು ಬಾಲಕರು ಅಕ್ರಮ ಕಸಾಯಿಖಾನೆಯಿಂದ ಓಟ ಕಿತ್ತಿದ್ದು ಹಾಗೂ ಮಾಂಸವನ್ನು ಸಾಗಾಟ ಮಾಡುವ ವಾಹನ ಅಲ್ಲಿಂದ ತೆರಳಿದ್ದು ಕಂಡು ಬಂತು. ಸ್ಥಳಕ್ಕೆ ಬರುತ್ತಿದ್ದಂತೆ ಕೆಲವರು ಕಸಾಯಿಖಾನೆಗಳನ್ನು ನೀರಿನಿಂದ ಸ್ವಚ್ಛ ಮಾಡಿದ್ದು, ಅಲ್ಲಲ್ಲಿ ಜಾನುವಾರುಗಳ ರಕ್ತ, ಕತ್ತರಿಸಿದ ಕಾಲುಗಳು, ಚರ್ಮಗಳು ಕಂಡು ಬಂದವು.
ಕಸಾಯಿಖಾನೆಗಳ ಬಾಗಿಲುಗಳನ್ನು ಹಾಕಿ ಮುಚ್ಚಿಡೋ ಪ್ರಯತ್ನವನ್ನೂ ಮಾಡಲಾಯಿತು. ಕೆಲ ಕಸಾಯಿಖಾನೆಗಳಲ್ಲಿ ಹತ್ತಾರು ಹಸುಗಳನ್ನು ಕರುಗಳನ್ನು ಕಟ್ಟಿ ಹಾಕಿದ್ದು ದೃಶ್ಯಗಳಲ್ಲಿ ಸೆರೆ ಸಿಕ್ಕಿದೆ. ಶಾಪೂರ ಅಗಸಿ ಹಾಗೂ ಇತರೆ ಸ್ಥಳಗಳಲ್ಲಿ ಇರುವ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿ ಕಾನೂನು ಬದ್ಧವಾಗಿ ಕಸಾಯಿಖಾನೆಗಳು ಕಾರ್ಯ ಮಾಡಬೇಕೆಂದು ಹಿಂದೂಪರ ಹೋರಾಟಗಾರರು ಒತ್ತಾಯ ಮಾಡಿದ್ದಾರೆ. ಈ ಕುರಿತು ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರ ಗಮನ ಸೆಳೆದಾಗ ಅಕ್ರಮ ಕಸಾಯಿಖಾನೆಗಳ ಕುರಿತು ಗಮನ ಹರಿಸಲಾಗುತ್ತದೆ. ಅಕ್ರಮ ಕಸಾಯಿಖಾನೆಗಳಿರೋ ಏರಿಯಾಕ್ಕೆ ಬೇಟಿ ನೀಡಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಆಡಿದ್ದ ವಿಜಯಪುರದ ಆಟಗಾರನಿಗೆ ಇದೆಂಥ ಸ್ಥಿತಿ, ಗುಡಿಸಿಲಿನಲ್ಲಿ ವಾಸ
ನಗರದ ಹೃದಯ ಭಾಗದಲ್ಲೇ ಅಕ್ರಮವಾಗಿ ಕಸಾಯಿಖಾನೆಗಳು ಪ್ರಾಣಿಗಳ ವಧೆ ಮಾಡುತ್ತಿದ್ದರೂ ಆಧಿಕಾರಿಗಳ ಗಮನಕ್ಕೆ ಯಾಕೆ ಬಂದಿಲ್ಲಾ ಎಂಬುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ನಿಯಮಾನುಸಾರ, ಕಾನೂನು ಪ್ರಕಾರ ಪ್ರಾಣಿಗಳ ವಧೆ ಮಾಡಬಹುದು. ಆದರೆ ಕಾನೂನು ಬಾಹಿರವಾಗಿ ನಗರದಲ್ಲೇ ನಡೆಯುತ್ತಿರುವ ಈ ಅಕ್ರಮಕ್ಕೆ ಅಧಿಕಾರಿಗಳು ಬ್ರೇಕ್ ಹಾಕಲೇಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.