ಮೊಣಕಾಲು ಮತ್ತು ಚಪ್ಪೆಯ ಎಲಬು ಮರು ಜೋಡಣೆ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡ ವಿಜಯಪುರ ಜಿಲ್ಲಾಸ್ಪತ್ರೆ ವೈದ್ಯರು
ವಿಜಯಪುರ ಜಿಲ್ಲಾಸ್ಪತ್ರೆಯು ಮೊಣಕಾಲು ಮತ್ತು ಚಪ್ಪೆಯ ಎಲುಬು ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿಮುಗಿಸಿದೆ. ಇದು ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಬಹಳ ಅಗ್ಗವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಬಡ ರೋಗಿಗಳು ಪ್ರಯೋಜನ ಪಡೆಯಬಹುದಾಗಿದೆ. ಆಪರೇಷನ್ಗೆ ಒಳಗಾದವರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯಪುರ, ಮಾರ್ಚ್ 12: ಸರಿಯಾಗಿ ಸೌಲಭ್ಯ, ಚಿಕಿತ್ಸೆ ಇರಲ್ಲಾ ಎಂದು ಸರ್ಕಾರಿ ಆಸ್ಪತ್ರೆಗಳ (district hospital) ಬಗ್ಗೆ ಆಡಿಕೊಳ್ಳುವವರೇ ಹೆಚ್ಚು. ಬಡವರು, ಹಣವಿಲ್ಲದವರು ಮಾತ್ರ ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡುವುದಿಲ್ಲ. ವೈದ್ಯರ ಹಾಗೂ ಸೌಕರ್ಯಗಳ ಕೊರತೆ ಕಾರಣವಾಗಿರುತ್ತದೆ. ಹೀಗಾಗಿ ಬಡವರು ಸಹ ವಿವಿಧ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳಿಗೆ ಸಾಲಸೋಲ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇದೆಲ್ಲದಕ್ಕೂ ಅಪವಾದವೆಂಬಂತೆ ವಿಜಯಪುರ (Vijayapura) ಜಿಲ್ಲಾಸ್ಪತ್ರೆ ವೈದ್ಯರು ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದಾರೆ.
ಮೊಣಕಾಲು ಮತ್ತು ಚಪ್ಪೆಯ ಎಲಬು ಮರು ಜೋಡಣೆ
ಸರ್ಕಾರಿ ಆಸ್ಪತ್ರೆಗಳು ಎಂದರೆ ಅಲ್ಲಿ ಎಲ್ಲವೂ ಸರಿಯಾಗಿರಲ್ಲಾ, ವೈದ್ಯರಿರಲ್ಲಾ, ಸ್ವಚ್ಛತೆಯಿರಲ್ಲಾ, ಚಿಕಿತ್ಸೆಗೆ ಸೌಲಭ್ಯಗಳಿರಲ್ಲ ಎಂಬ ಮಾತು ಹೇಳುವುದು ಮಾಮೂಲು. ಆದರೆ ಈ ಆರೋಪವನ್ನು ವಿಜಯಪುರ ಜಿಲ್ಲಾಸ್ಪತ್ರೆ ಅಲ್ಲಗಳೆಯುವಂತೆ ಸೇವೆ ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುತ್ತಿದೆ. ಕೆಲ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗಲ್ಲಾ. ಸೂಕ್ತ ವೈದ್ಯರು ಸಕಲರಣೆ ಸಾಧನಗಳ ಕೊರತೆಯಿಂದ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಲಾಗುತ್ತದೆ. ಆದರೆ ವಿಜಯಪುರ ಜಿಲ್ಲಾಸ್ಪತ್ರೆ ವೈದ್ಯರು ಇದೇ ಮೊದಲ ಬಾರಿಗೆ ಮೊಣಕಾಲು ಮತ್ತು ಚಪ್ಪೆಯ ಎಲಬು ಮರು ಜೋಡಣೆ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡಿದ್ಧಾರೆ.
ಇದನ್ನೂ ಓದಿ: ಕೋಟಿ ಕೋಟಿ ವಹಿವಾಟು ನಡೆಸುವ ಮೀನುಗಾರಿಕೆಗೆ ತಟ್ಟಿದ ತಾಪಮಾನದ ಬಿಸಿ: ಮೀನು ಸಿಗದೆ ಕಂಗಾಲಾದ ಮೊಗವೀರರು
ವಿಜಯಪುರ ನಗರದ ವಾಸಿ 35 ವರ್ಷದ ನಬೀ ರಸೂಲ್ ಎಂಬ ಯುವಕ ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ಆಯತಪ್ಪಿ ಮೊಣಕಾಲು-ಚಪ್ಪೆಗೆ ಗಾಯವಾಗಿ ನಡೆದದಾಡಲು ಆಗದೇ ಇರೋ ಸ್ಥಿತಿಗೆ ಬಂದಿದ್ದ. ಜೊತೆಗೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಮೇಲೇಶ್ವರ ಗ್ರಾಮದ ವಾಸಿ 68 ವರ್ಷದ ಗುರಪ್ಪಾ ಕುಳಗೇರಿ ಎಂಬುವರಿಗೆ ಇದೇ ಮೊದಲ ಬಾರಿಗೆ ಮೊಣಕಾಲು ಮತ್ತು ಚಪ್ಪೆಯ ಎಲಬು ಮರು ಜೋಡಣೆ ಶಸ್ತ್ರಚಿಕಿತ್ಸೆ ಮಾಡಿದ್ಧಾರೆ. ಖಾಸಗಿ ಆಸ್ಪತ್ರೆಗಳಲ್ಲಿ 2-3 ಲಕ್ಷ ರೂ ಖರ್ಚು ಆಗುತ್ತಿರೋದು ಜಿಲ್ಲಾಸ್ಪತ್ರೆಯಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತವಾಗಿ ಆಪರೇಷನ್ ಮಾಡಲಾಗಿದೆ. ಆಪರೇಷನ್ ಗೆ ಒಳಗಾದ ವೃದ್ದ ಗುರಪ್ಪಾ ಹಾಗೂ ಯುವಕ ನಬೀ ರಸೂಲ್ ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲಾಸ್ಪತ್ರೆ ಕೇವಲ ಜಿಲ್ಲೆಯ ರೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಬಾಗಲಕೋಟೆ, ಯಾದಗಿರಿ, ಕಲಬುರಗಿ ಜಿಲ್ಲೆಗಳ ಗಡಿ ಭಾಗದ ಜನರು ಹಾಗೂ ನೆರೆಯ ಮಹಾರಾಷ್ಟ್ರದ ಗಡಿನಾಡ ಕನ್ನಡಿಗರೂ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ. ಇದೀಗ ಇದೇ ಮೊದಲ ಬಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಮೊಣಕಾಲು ಮತ್ತು ಚಪ್ಪೆಯ ಎಲಬು ಮರು ಜೋಡಣೆ ಶಸ್ತ್ರಚಿಕಿತ್ಸೆ ಮಾಡಿ ರೋಗಿಗಳು ಗುಣಮುಖರಾಗಿದ್ದಕ್ಕೆ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಹಾಗೂ ಇತರೆ ವೈದ್ಯರು ಸಂತಸ ಪಟ್ಟಿದ್ದಾರೆ.
ಬೆಳಗಾವಿ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸತೀಶ ನೇಸರಿ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯ ಎಲುಬು-ಕೀಲು ತಜ್ಞ ವೈದ್ಯ ಡಾ ಎಸ್ ನಾಗಠಾಣ, ಡಾ.ಎಸ್ ವಿ ಹಾವಿನಾಳ, ಡಾ.ಜಿಲಾನಿ ಬಾಷಾ, ಡಾ. ಆನಂದ ಮೇತ್ರಿ, ಅರವಳಿಕೆ ತಜ್ಞರಾದ ಡಾ.ಸಂದೀಪ ಸಜ್ಜನ, ಮಹಾ ಶಸ್ತ್ರಚಿಕಿತ್ಸೆಯ ವಿಭಾಗದ ಉಸ್ತುವಾರಿ ಕಾಶಿಬಾಯಿ ಬಡಿಗೇರ, ಕಸ್ತೂರಿ ನಡುವಿನಮನೆ, ಸುಮಿತ್ರಾ ರಾಮಕೃಷ್ಣ ಹಾಗೂ ಇತರ ಸಿಬ್ಬಂದಿ ಆಪರೇಷನ್ ಮಾಡಿ ಯಶಸ್ವಿಯಾಗಿದ್ಧಾರೆಂದು ಆಸ್ಪತ್ರೆಯ ಡಿಎಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 1 ವರ್ಷದಲ್ಲಿ ಅತಿಹೆಚ್ಚು ಸೀಜ್ ಆದ ವಸ್ತುಗಳಾವುವು ಗೊತ್ತಾ?
ಮುಂಬರುವ ದಿನಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ಕೈಗೊಳ್ಳಲು ವಿಜಯಪುರ ಜಿಲ್ಲಾ ಆಸ್ಪತ್ರೆಯನ್ನು ರಾಜ್ಯದ ಇಲಾಖೆಯ ಅತ್ಯುನ್ನತ ಸಮಿತಿ ಆಯ್ಕೆ ಮಾಡಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜಿಲ್ಲೆಯ ಜನರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಜನರು ಮಹಾರಾಷ್ಟ್ರದ ಗಡಿನಾಡ ಕನ್ನಡಿಗರು ಇದರ ಸುದುಪಯೋಗ ಮಾಡಿಕೊಳ್ಳಬಹುದು ಎಂದು ಡಿಎಸ್ ಮನವಿ ಮಾಡಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಎರಡ್ಮೂರು ಲಕ್ಷ ರೂ ಖರ್ಚು ಮಾಡುವುದಕ್ಕಿಂತ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:19 pm, Wed, 12 March 25