ಕೊಡಗು ಜಿಲ್ಲೆಯ ಹಲವೆಡೆ ಲಘು ಭೂಕಂಪ: ಮದೆನಾಡಿನಲ್ಲಿ ಕಂಪಿಸಿದ ಭೂಮಿ
Madikeri Earthquake: ಮಡಿಕೇರಿ ತಾಲೂಕಿನ ಕೆಲವು ಪ್ರದೇಶಗಳು ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಬಳಿ ಮಂಗಳವಾರ ಬೆಳಗ್ಗೆ ಲಘು ಭೂಕಂಪನ ಅನುಭವವಾಗಿದೆ. ಸದ್ಯ ಈ ಬಗ್ಗೆ ಅಧಿಕಾರಿಗಳು ಭೂವಿಜ್ಞಾನಿಗಳಿಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ರೀತಿಯಲ್ಲಿ ಹಾನಿ, ಸಾವು-ನೋವು ಸಂಭವಿಸಿಲ್ಲ.

ಮಡಿಕೇರಿ, ಮಾರ್ಚ್ 12: ಕೊಡಗು (Kodagu) ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ (Earthquake) ಅನುಭವವಾಗಿದೆ. ಮಡಿಕೇರಿ (Madikeri) ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಭೂಕಂಪನ ಅನುಭವವಾಗಿದೆ. ಬೆಳಗ್ಗೆ 10.50 ರ ಸುಮಾರಿಗೆ ತೀರಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ, ಈ ವಿಚಾರದ ಬಗ್ಗೆ ಭೂ ವಿಜ್ಞಾನಿಗಳಿಗೆ ಮಾಹಿತಿ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ.
ಭೂಕಂಪನ ದೃಢೀಕರಿಸಿದ ಜಿಲ್ಲಾಧಿಕಾರಿ
ಬೆಳಗ್ಗೆ 10.49ರ ಸುಮಾರಿಗೆ ಮದೆನಾಡು ವ್ಯಾಪ್ತಿಯಲ್ಲಿ ಲಘು ಭೂಕಂಪವಾಗಿದೆ. ಭೂ ಕಂಪನದಿಂದ ಯಾವುದೇ ಹಾನಿಯಾಗಿಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಭೂಕಂಪನವನ್ನು ದೃಢೀಕರಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 1.6ರಷ್ಟು ದಾಖಲಾಗಿದೆ. ಮದೆ ಗ್ರಾಮ ಪಂಚಾತಿಯ 2.5 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆ ಆಗಿದೆ. 15ರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನ ಹರಡಿದೆ ಎಂದು ಮಾಹಿತಿ ನೀಡಿದ್ದಾರೆ.
ಭೂಕಂಪಕ್ಕೆ ಕಾರಣಗಳೇನು?
ಭೂಮಿಯೊಳಗೆ ಏಳು ಟೆಕ್ಟೋನಿಕ್ ಪ್ಲೇಟ್‌ಗಳಿವೆ ಎನ್ನಲಾಗಿದೆ. ಈ ಟೆಕ್ಟೋನಿಕ್ ಪ್ಲೇಟ್‌ಗಳು ನಿರಂತರವಾಗಿ ಸುತ್ತುತ್ತಿರುತ್ತವೆ. ಇವುಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಭೂಕಂಪ ಸಂಭವಿಸುತ್ತದೆ. ಟೆಕ್ಟೋನಿಕ್ ಪ್ಲೇಟ್‌ಗಳು ಡಿಕ್ಕಿಯಾಗಿ ಒಂದರ ಮೇಲೊಂದು ಹತ್ತಿದಾಗ ಅಥವಾ ದೂರ ಸಂಚರಿಸಿದಾಗ ನೆಲ ಅಲುಗಾಡಲು ಪ್ರಾರಂಭವಾಗುತ್ತದೆ. ಇದನ್ನು ಭೂಕಂಪ ಎಂದು ಕರೆಯಲಾಗುತ್ತದೆ. ಭೂಕಂಪಗಳನ್ನು ಅಳೆಯಲು ರಿಕ್ಟರ್ ಮಾಪಕವನ್ನು ಬಳಸಲಾಗುತ್ತದೆ. ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಮಾಪಕ ಎಂದು ಕರೆಯಲಾಗುತ್ತದೆ.
ರಿಕ್ಟರ್ ಮಾಪಕದ ಮಾಪನ 1 ರಿಂದ 9 ರವರೆಗೆ ಇರುತ್ತದೆ. ಭೂಕಂಪದ ತೀವ್ರತೆಯನ್ನು ಅದರ ಕೇಂದ್ರದಿಂದ ಅಳೆಯಲಾಗುತ್ತದೆ. ಅಂದರೆ ಭೂ ಕಂಪನ ಕೇಂದ್ರದಿಂದ ಹೊರಹೊಮ್ಮುವ ಶಕ್ತಿಯನ್ನು ಈ ಮಾಪಕದಲ್ಲಿ ಅಳೆಯಲಾಗುತ್ತದೆ. 1 ಎಂದರೆ ಕಡಿಮೆ ತೀವ್ರತೆಯ ಕಂಪನ ಎಂದರ್ಥ. 9 ಎಂದರೆ ಗರಿಷ್ಠ. ಇದು ತುಂಬಾ ಭಯಾನಕ ಮತ್ತು ವಿನಾಶಕಾರಿಯಾಗಿದೆ. ಸಾಮಾನ್ಯವಾಗಿ ರಿಕ್ಟರ್ ಮಾಪಕದಲ್ಲಿ 6ಕ್ಕಿಂತ ಹೆಚ್ಚಿನ ತೀವ್ರತೆ ವರದಿಯಾದರೆ ಭೀಕರ ಭೂಕಂಪ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಶಿರೂರು ಗುಡ್ಡ ದುರಂತದಲ್ಲಿ ಅನಾಥವಾಗಿದ್ದ ಶ್ವಾನ ಮ್ಯಾರಥಾನ್ನಲ್ಲಿ ಓಟ: ಬೆಳ್ಳಿ ಪದಕ
ಹೆದ್ದಾರಿ ಬದಿಯ ಅನಧಿಕೃತ ವ್ಯಾಪಾರಿಗಳಿಗೆ ಶಾಕ್
ಹೆದ್ದಾರಿ ಬದಿಯ ಅನಧಿಕೃತ ವ್ಯಾಪಾರಿಗಳಿಗೆ ಶಾಕ್ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ರಸ್ತೆ ಬದಿಯ ಅನಧಿಕೃತ ಅಂಗಡಿ ಮುಂಗಟ್ಟು ತೆರವಿಗೆ ಸೂಚನೆ ನೀಡಲಾಗಿದೆ. ಕೊಡಗು ಜಿಲ್ಲೆ ಕುಶಾಲನಗರದಿಂದ ಸಂಪಾಜೆವರೆಗಿನ ರಾಷ್ಟ್ರೀಯ ಹೆದ್ದಾರಿ 275 ರ ಬದಿ ಹಾಕಿಕೊಂಡಿರುವ ಅನಧಿಕೃತ ಶೆಡ್ ಅಂಗಡಿಗಳ ತೆರವಿಗೆ ಸೂಚನೆ ನೀಡಲಾಗಿದೆ. ಈ ಅಂಗಡಿಗಳಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಹಿನ್ನೆಲೆ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಂಡಿದೆ. ರಸ್ತೆ ಬದಿ ಅಂಗಡಿಗಳ ತೆರವಿಗೆ ಮಾರ್ಚ್ 15ರವರೆಗೆ ಗಡುವು ವಿಧಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Wed, 12 March 25