ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಆಡಿದ್ದ ವಿಜಯಪುರದ ಆಟಗಾರನಿಗೆ ಇದೆಂಥ ಸ್ಥಿತಿ, ಗುಡಿಸಿಲಿನಲ್ಲಿ ವಾಸ
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಆಡಿದ್ದ ವಿಜಯಪುರದ ಆಟಗಾರ ಇನ್ನೂ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಸೂಕ್ತವಾದ ವಸತಿ ಮತ್ತು ಆರ್ಥಿಕ ನೆರವು ಅವರಿಗೆ ಇನ್ನೂ ದೊರೆತಿಲ್ಲ. ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಸಹಾಯದ ಅಗತ್ಯವಿದೆ. ವಿಕಲಚೇತನ ಕ್ರಿಕೆಟ್ ಲೋಕದಲ್ಲಿ ಮತ್ತಷ್ಟು ಸಾಧನೆ ಮಾಡಲು ರಾಜೇಶ್ ಅವರಿಗೆ ಸಾದ್ಯವಾಗುತ್ತದೆ ಎಂದು ಸ್ನೇಹಿತರು ಹೇಳಿದ್ದಾರೆ.

ವಿಜಯಪುರ, ಮಾರ್ಚ್ 05: ಇದೇ ವರ್ಷ ಜನವರಿಯಲ್ಲಿ ನಡೆದ ವಿಕಲಚೇತನರ ಚಾಂಪಿಯನ್ಸ್ ಟ್ರೋಫಿಯಲ್ಲಿ (Physical Disability Champions Trophy) ಭಾರತ ತಂಡ ಗೆದ್ದು ಬೀಗಿದೆ. ಆದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತವಾಗಿ ಆಟವಾಡಿದ ವಿಜಯಪುರದ (Vijayapura) ರಾಜೇಶ ಕನ್ನೂರಗೆ ಕಿತ್ತು ತಿನ್ನುವ ಬಡತನವಿದ್ದು, ಇನ್ನೂವರೆಗೂ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ. ಮುರಿದ-ಹರಿದ ಗುಡಿಸಿಲಿನಲ್ಲಿ ವಾಸವಿರುವ 26 ವರ್ಷದ ರಾಜೇಶ್ ಕನ್ನೂರ ಭಾರತ ವಿಕಲಚೇತನ ಕ್ರಿಕೆಟ್ ತಂಡ ಕಂಡ ಅದ್ಭುತ ಪ್ರತಿಭೆ. ಪಿಡಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಕಾರಣವಾಗಿರುವ ರಾಜೇಶ ಕನ್ನೂರ ಅವರಿಗೆ ಇದೀಗ ನೆರವಿನ ಆವಶ್ಯಕತೆಯಿದೆ.
ವಿಜಯಪುರ ತಾಲೂಕಿನ ಕನ್ನೂರ ಗ್ರಾಮದ ರಾಜೇಶ್ ಕ್ರಿಕೆಟ್ ಮೇಲಿನ ಪ್ರೀತಿಗಾಗಿ 8 ವರ್ಷಗಳ ಹಿಂದೆ ಮನೆ ಬಿಟ್ಟು ವಿಜಯಪುರಕ್ಕೆ ಬಂದು ನೆಲೆಸಿದ್ದಾರೆ. ರಾಜೇಶ್ ಅವರಿಗೆ ಕಾಲಿನ ಸಮಸ್ಯೆಯಿದ್ದು, 2023 ರಲ್ಲಿ ಕರ್ನಾಟಕ ರಾಜ್ಯ ವಿಕಲಚೇತನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಕರ್ನಾಟಕ ರಾಜ್ಯ ವಿಕಲಚೇತನರ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಭಾರತ ತಂಡಕ್ಕೆ ಆಯ್ಕೆಯಾದರು.
ಶ್ರೀಲಂಕಾ ಆಯೊಜಿಸಿದ್ದ ಪಿಜಿಕಲ್ ಡೆಸಿಬಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಜೇಶ್ ಅವರು ಭಾರತ ತಂಡದ ಪರವಾಗಿ ಓಪನರ್ ಬ್ಯಾಟ್ಸಮನ್ ಆಗಿ ಕಣಕ್ಕೆ ಇಳಿದು, ಅದ್ಭುತ ಪ್ರದರ್ಶನ ನೀಡಿದರು. ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಪಿಡಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಜೇಶ್ ಅವರು ಆಡಿದ ಐದೂ ಪಂದ್ಯಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ.
ಪಿಡಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ, ಭಾರತ, ಪಾಕಿಸ್ತಾನ, ಇಂಗ್ಲೆಂಡ್ ದೇಶಗಳ ತಂಡಗಳು ಭಾಗಿಯಾಗಿದ್ದವು. ಭಾರತ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದ್ದು, ರಾಜೇಶ ಕನ್ನೂರ 11 ರನ್ ಗಳಿಸಿದ್ದರು. ನಂತರ ಇಂಗ್ಲೆಂಡ್ ತಂಡದ ವಿರುದ್ಧ 119 ರನ್ ಬಾರಿಸಿದರು. ಬಳಿಕ ಶ್ರೀಲಂಕಾ ತಂಡದ ವಿರುದ್ಧ 64 ರನ್ ಗಳಿಸಿ ಅಜೇಯ ಹಾಗೂ ಪಾಕಿಸ್ತಾನ ವಿರುದ್ಧ ನಾಲ್ಕನೇ ಪಂದ್ಯದಲ್ಲಿ 74 ರನ್ ಗಳಿಸಿ ಅಜೇಯರಾಗುಳಿದರು. ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 16 ರನ್ ಗಳಿಸಿ ಪಿಡಿ ಚಾಂಪಿಯನ್ಸ್ ಟ್ರೋಫಿ ಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು.
ರಾಜೇಶ ಕನ್ನೂರು ಇಡೀ ಟೂರ್ನಮೆಂಟ್ನಲ್ಲಿ ಒಂದು ಶತಕ, ಎರಡು ಅರ್ಧ ಶತಕಗಳ ನೆರವಿನಿಂದ 286 ರನ್ ಗಳಿಸಿದ್ದಾರೆ. ಟೂರ್ನಮೆಂಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕೆ ಮ್ಯಾನ್ ಆಫ್ ದಿ ಸೀರೀಸ್ ಹಾಗೂ ಬೆಸ್ಟ್ ಪ್ಲೇಯರ್ ಆಫ್ ದಿ ಮ್ಯಾಚ್ಗೆ ಭಾಜನರಾಗಿದ್ದರು.
ಆದರೆ, ರಾಜೇಶ ಕನ್ನೂರಗೆ ಇರಲು ಒಂದು ಸೂರಿಲ್ಲ. ವಿಜಯಪುರ ನಗರದ ಹೊರ ಭಾಗದಲ್ಲಿರುವ ಕಲ್ಲಿನ ಕ್ವಾರಿಯ ಸಮೀಪ ಮತ್ತೊಬ್ಬರ ಜಾಗದಲ್ಲಿ ಹರಕಲು ಮುರಿಕಲು ಗುಡಿಸಿನಲ್ಲಿ ತಂದೆ-ತಾಯಿ, ಸಹೋದರರ ಜೊತೆಗೆ ವಾಸವಾಗಿದ್ದಾರೆ. ಕಳೆದ ಪಿಡಿ ಚಾಂಪಿಯನ್ಸ್ ಟ್ರೋಫಿಗೆ ತೆರಳಲು ರೆಲ್ವೆ ಹಾಗೂ ವಿಮಾನಯಾನದ ಶುಲ್ಕವನ್ನು ಸ್ವೇಹಿತರು ನೀಡಿದ್ದಾರೆ.
ಇದನ್ನೂ ಓದಿ: IND vs AUS: ಆಸ್ಟ್ರೇಲಿಯಾವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ಗೇರಿದ ಟೀಂ ಇಂಡಿಯಾ
ಖ್ಯಾತನಾಮ ಕ್ರಿಕೆಟಿಗರಿಗೆ ಹಲವಾರು ಸೌಲಭ್ಯ, ಸೌಕರ್ಯ, ನೆರವು ನೀಡುವ ಸರ್ಕಾರ ಎಲೆ ಮರೆಯ ಕಾಯಿಯಂತೆ ಇರುವ ವಿಕಲಚೇತನ ಕ್ರಿಕೆಟ್ ತಂಡದ ಆಟಗಾರ ರಾಜೇಶ ಅವರಿಗೆ ಸಹಾಯ ಮಾಡಬೇಕು. ರಾಜೇಶ ಕನ್ನೂರಗೆ ಸರ್ಕಾರ, ಸಂಘ ಸಂಸ್ಥೆಗಳಾದರೂ ಸಹಾಯ ಮಾಡಿದರೆ ವಿಕಲಚೇತನ ಕ್ರಿಕೆಟ್ ಲೋಕದಲ್ಲಿ ಮತ್ತಷ್ಟು ಸಾಧನೆ ಮಾಡಲು ರಾಜೇಶ್ ಅವರಿಗೆ ಸಾದ್ಯವಾಗುತ್ತದೆ ಎಂದು ಸ್ನೇಹಿತರು ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:38 am, Wed, 5 March 25







