ವಿಜಯಪುರದಲ್ಲಿ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಉದ್ಘಾಟಿಸಿದ ಸಚಿವ ಎಂ.ಬಿ. ಪಾಟೀಲ್
ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ವಿಜಯಪುರ, ಜ.10: ಬಿಸಿಲನಾಡು ಬರದ ಬೀಡು ಎಂದು ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯ ವಾತಾವರಣ ಇದೀಗಾ ಬದಲಾಗಿದೆ. ಸೈಕ್ಲಿಸ್ಟ್ ಗಳ (cyclist) ತವರೆಂದೇ ಪ್ರಖ್ಯಾತಿಗೆ ಪಾತ್ರವಾಗುತ್ತಿರುವ ಜಿಲ್ಲೆಯಲ್ಲಿ ಇದೀಗಾ 2023-24 ಸಾಲಿನ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ (International Road Cycling Championship) ನಡೆಯುತ್ತಿದೆ. ಭಾರತೀಯ ಸೈಕ್ಲಿಂಗ್ ಫೆಡರೇಶನ್, ವಿಜಯಪುರ ಅಮೇಚ್ಯೂರ ಸೈಕ್ಲಿಂಗ್ ಅಸೋಶಿಯೇಶನ್ ಹಾಗೂ ಜಿಲ್ಲಾ ಯುವ ಸಬಲೀಕರಣ-ಕ್ರೀಡಾ ಇಲಾಖೆ, ಬಿಎಲ್ಡಿಇ ಸಂಸ್ಥೆ, ಎನ್ಎಚ್ಎಐ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಿನ್ನೆಯಿಂದ ಆರಂಭವಾದ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ 2024 ನಾಲ್ಕು ದಿನಗಳ ಕಾಲ ನಡೆಯಲಿದೆ. ಎಲ್ಲಾ ಸ್ಪರ್ಧೆಗಳನ್ನು ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆಸಲಾಗುತ್ತಿದೆ. ಸ್ಪರ್ಧೆಗಳಿಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಧಿಕಾರಿಗಳ ಸಹಕಾರರಿಂದ ಎನ್ ಎಚ್ 52 ರಲ್ಲಿ ನಗರದ ಅರಕೇರಿ ಕ್ರಾಸ್ ನಿಂದ ತಿಡಗುಂದಿ ಬಳಿಯ ಟೂಲ್ ನಾಕಾದವರೆಗೆ ಒಮ್ಮುಖ ಸಂಚಾರ ಮಾಡಲಾಗಿದೆ.
ನಿನ್ನೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ 2023-24 ನ್ನು ಉದ್ಘಾಟಿಸಿದರು. ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಇದೇ ವೇಳೆ ತಿಳಿಸಿದ್ದಾರೆ. ವಿಜಯಪುರದಲ್ಲಿ ಸೈಕ್ಲಿಂಗ್ ವೆಲೊಡ್ರಂ ಕಾಮಗಾರಿ ಶೀಘ್ರದಲ್ಲಿ ಪೂರ್ಣವಾಗಲಿದೆ. ಅದಕ್ಕೆ ಅಗತ್ಯವಾಗಿರುವ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಲಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ವಿಜಯಪುರದಲ್ಲಿ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಬೇಕಿರುವ ಅತ್ಯುತ್ತಮ ಹವಾಮಾನ ಮತ್ತು ಪೂರಕ ವಾತಾರವಣವಿದೆ. ಅಲ್ಲದೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸೈಕ್ಲಿಷ್ಟಗಳು ರೋಡ್ ಸೈಕ್ಲಿಂಗ್ ನಲ್ಲಿ ರಾಷ್ಟ್ರಾದ್ಯಂತ ಹೆಸರು ಮಾಡಿ ಇಲ್ಲಿ ಸೈಕ್ಲಿಂಗ್ ಅಕಾಡೆಮಿ ಸ್ಥಾಪನೆಯಿಂದ ರೋಡ್ ಸೈಕ್ಲಿಂಗ್, ವೆಲೋಡ್ರಂ ಸೈಕ್ಲಿಂಗ್ ಮತ್ತು ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧಿಗಳಿಗೂ ಅನುಕೂಲವಾಗಲಿದೆ. ಈ ಅಕಾಡೆಮಿ ಸ್ಥಾಪನೆಯಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳು ಸೈಕ್ಪಿಷ್ಟ್ ಗಳಿಗೆ ಸಿಗಲಿವೆ. ಅಲ್ಲದೇ, ಸ್ಥಳೀಯ ಬಡ ಮತ್ತು ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಇದಕ್ಕಾಗಿ ಇಲಾಖೆಯ ಸಿಎಸ್ಆರ್(CSR) ಫಂಡ್ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯಿಂದಲೂ ನೆರವು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ: ತೆಲಂಗಾಣದಲ್ಲಿ ಹುಲಿ ಸಾವು, ವಿಷವುಂಡು ಮೃತಪಟ್ಟಿರುವ ಶಂಕೆ
ನಿನ್ನೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಯೂಥ್ ಗರ್ಲ್ಸ್ 10 ಕಿಲೊ ಮೀಟರ್ ವಿಭಾಗದ ಇಂಡಿಜ್ಯೂವಲ್ ಟೈಮ್ ಟ್ರಯಲ್, ಯೂಥ್ ಬಾಯ್ಸ್ 15 ಕಿಲೊ ಮೀಟರ್, ಜ್ಯೂನಿಯರ್ ಗರ್ಲ್ಸ್ 15 ಕಿಲೋ ಮೀಟರ್, ವುಮೆನ್ ಎಲೈಟ್ 30 ಕಿಲೋ ಮೀಟರ್, ಅಂಡರ್ 23 ಮೆನ್ 40 ಕಿಲೋ ಮೀಟರ್, ಮೆನ್ ಎಲೈಟ್ 40 ಕಿಲೋ ಮೀಟರ್, ಜ್ಯೂನಿಯರ್ ಬಾಯ್ಸ್ 20 ಕಿಲೊ ಮೀಟರ್, ವುಮೆನ್ ಜ್ಯೂನಿಯರ್ ಸ್ಪರ್ಧೆಗಳು ಜರುಗಿದವು. ಇಂದು 14 ವರ್ಷ 16 ವರ್ಷ ಹಾಗೂ 18 ವಯೋಮಾನದ ಬಾಲಕಿಯರು ಹಾಗೂ ಬಾಲಕರ ಸ್ಪರ್ದೆಗಳು ಹಾಗೂ ಪುರುಷ ಹಾಗೂ ಮಹಿಳೆಯರ ಸ್ಪರ್ದೆಗಳು ನಡೆದವು. ಜೊತೆಗೆ ಪುರುಷರ ಮಿಕ್ಸ್ ಟೀಂ ರಿಲೇ 60 ಕಿಲೊ ಮೀಟರ್ ಸ್ಪರ್ದೆಗಳು ನಡೆದವು. ನಾಳೆ ಹಾಗೂ ನಾಡಿದ್ದು ಸಹ ಗ್ರೂಪ್ ಇವೆಂಟ್ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ. ಇನ್ನು ಸ್ಪರ್ಧೆಗಳು ನಡೆಯುತ್ತಿರೋ ಕಾರಣ ಎನ್ ಎಚ್ 52 ರಲ್ಲಿ ಪೊಲೀಸ್ ಭದ್ರೆಯನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗಿದೆ.
ಕ್ರೀಡಾಪಟುಗಳು ಸೇರಿದಂತೆ ಇತರೆ ಅಧಿಕಾರಿಗಳಿಗೆ ನಗರದ ವಿವಿಧ ಹೊಟೇಲ್ ಗಳಲ್ಲಿ ಹಾಸ್ಟೇಲ್ ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಉಪಹಾರ ಊಟದ ವ್ಯವಸ್ಥೆಯನ್ನು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾಡಲಾಗಿದೆ. ಸೈಕ್ಲಿಸ್ಟ್ ಗಳಿಗೆ ಉತ್ತಮ ಶುದ್ದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಸೈಕ್ಲಿಸ್ಟ್ ಗಳು ಹಾಗೂ ಭಾರತೀಯ ಸೈಕ್ಲಿಂಗ್ ಫೆಡರೇಶನ್ ಆಧಿಕಾರಿಗಳು ಉತ್ತರ ಕರ್ನಾಟಕದ ರೊಟ್ಟಿ ಊಟಕ್ಕೆ ಮನಸೋತಿದ್ಧಾರೆ. ಇನ್ನುಳಿದಂತೆ ಬಾಳೆಹಣ್ಣು ಮೊಟ್ಟೆಗಳನ್ನು ಯಥೇಚ್ಛವಾಗಿ ನೀಡಲಾಗುತ್ತಿದೆ. ಇನ್ನು ಎರಡು ದಿನಗಳ ಕಾಲ ನಗರದಲ್ಲಿ ಸೈಕ್ಲಿಸ್ಟ್ ಗಳ ಕಲರವ ಮನೆ ಮಾಡಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ