ವಿಜಯಪುರ, ಅ.03: ವಿಜಯಪುರ ನಗರದಲ್ಲಿ ದಸರಾ ಹಬ್ಬದ ವೇಳೆಯೇ ಕಿಡಿಗೇಡಿಗಳು ದುಷ್ಕೃತ್ಯವೆಸಗಿದ್ದಾರೆ. ನಗರದ ಸಿದ್ದೇಶ್ವರ ದೇವಸ್ಥಾನ ಬಳಿಯಿರುವ ಗಣಪತಿ ಚೌಕ್ನಲ್ಲಿ ಪ್ರತಿಷ್ಟಾಪಿಸಿರುವ ಚತುರ್ಮುಖ ಗಣಪನ ಮೂರ್ತಿಗೆ ಕಲ್ಲು ಎಸೆದಿದ್ದಾರೆ. ಪರಿಣಾಮ ಗಣಪತಿ ಮೂರ್ತಿಯ ಸುತ್ತಲೂ ಹಾಕಿರುವ ಪ್ರೊಟೆಕ್ಷನ್ ಗ್ಲಾಸ್ಗಳಿಗೆ ಹಾನಿಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಮನೆ ಮಾಡಿತ್ತು.
ನಿನ್ನೆ ತಡರಾತ್ರಿ ಕಿಡಿಗೇಡಿಗಳು ಈ ಕುಕೃತ್ಯ ಮಾಡಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಮಾಡಲಾಗಿದೆ. ಈಗ ದಸರಾ ಹಬ್ಬದಲ್ಲಿ ಸಹಿಸದ ಕಿಡಿಗೇಡಿಗಳು ಗಣೇಶನ ಮೂರ್ತಿ ಭಗ್ನ ಮಾಡುವ ಯತ್ನ ಮಾಡಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ಮುಂದುವರಿದ ಫ್ಲೆಕ್ಸ್ ಪಾಲಿಟಿಕ್ಸ್: ಕಾಂಗ್ರೆಸ್ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು
ಗಣಪತಿ ಚೌಕ್ನಲ್ಲಿ ಗಣಪನ ಮೂರ್ತಿಗೆ ಕಲ್ಲು ತೂರಿ ಹಾನಿ ಮಾಡಿದ್ದ ವಿಚಾರ ತಿಳಿಯುತ್ತಿದ್ದಂತೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಗಾಂಧಿಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಹಾಗೂ ಇತರೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ಮಾಡಿದರು. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳ ಫೂಟೇಜ್ ಸಂಗ್ರಹ ಮಾಡಲು ಟೀಂವೊಂದನ್ನು ನಿಯೋಜಿಸಿದರು.
ಈ ಕುರಿತು ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲನೆ ಮಾಡಿ ಯಾರು ಕಲ್ಲು ತೂರಾಟ ಮಾಡಿದ್ದು ಎಂಬುದು ಸೇರಿದಂತೆ ಇತರೆ ವಿಷಯ ತನಿಖೆ ಮಾಡಿ ಕಲ್ಲು ತೂರಿದವರ ಬಂಧನ ಮಾಡುತ್ತೇವೆಂದು ಖಾಕಿ ಪಡೆ ಮಾಹಿತಿ ನೀಡಿದೆ. ಇನ್ನು ಗಣಪತಿ ಚೌಕ್ ನಲ್ಲಿನ ಮೂರ್ತಿಗೆ ಕಲ್ಲೆಸೆದ ಪರಿಣಾಮ ಚೂರು ಚೂರಾದ ಗಾಜುಗಳು ಹಾಗೂ ಪೂಜಾ ಸಾಮಗ್ರಿಗಳ ಮೇಲೆ ಬಿದ್ದಿದ್ದ ಗಾಜುಗಳನ್ನು ಸ್ಥಳೀಯರು ಹಾಗೂ ಪಾಲಿಕೆಯ ಸಿಬ್ಬಂದಿ ಸ್ವಚ್ಛಗೊಳಿಸಿದರು. ಸಧ್ಯ ದಸರಾ ಹಬ್ಬದ ವೇಳೆ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೃತ್ಯ ಮಾಡಿದ್ದಾರೆ. ಕಾರಣ ಈ ಕೃತ್ಯವನ್ನು ಮಾಡಿದವರನ್ನು ಪತ್ತೆ ಮಾಡಿ ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯ ಮಾಡಿವೆ.
ಸದ್ಯ ಗಣಪತಿ ಚೌಕ್ನಲ್ಲಿ ಬೂದಿ ಮುಚ್ಚಿದ ಕೆಂಡದಂತ ಪರಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲೇ ಪೊಲೀಸರು ಬೀಡು ಬಿಟ್ಟಿದ್ದು, ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಿಸಿ ಕೆಮೆರಾ ಫೂಟೇಜ್ ಸಂಗ್ರಹ ಮಾಡಿಕೊಂಡು ಕಲ್ಲು ತೂರಿದ ಕಿಡಗೇಡಿಗಳ ಬಂಧನಕ್ಕೆ ಪೊಲೀಸರು ಮುಂದಾಗಲಿದ್ದಾರೆ. ಘಟನೆಯಿಂದ ಕೋಮು ಸೌಹಾರ್ಧತೆಯ ವಿಚಾರದಲ್ಲಿ ಸೂಕ್ಷ್ಮತೆ ಹೊಂದಿರುವ ನಗರದಲ್ಲಿ ಗಣಪತಿ ಚೌಕ್ಗೆ ಕಲ್ಲು ತೂರಿದ್ದು ಮತ್ತಷ್ಟು ಸೂಕ್ಷ್ಮತೆ ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ರೀತಿಯ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ನಿಗೂಢವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Thu, 3 October 24