ದಲಿತರೇನು ಬಿಜೆಪಿಗೆ ಬೆಂಬಲ ಕೊಟ್ಟಿಲ್ಲವೇ? ಹೈಕಮಾಂಡ್ ವಿರುದ್ಧ ರಮೇಶ ಜಿಗಜಿಣಗಿ ತೀವ್ರ ಅಸಮಾಧಾನ
ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಿಜೆಪಿ ಹೈಕಮಾಂಡ್ ವಿರುದ್ಧ ಮತ್ತೆ ಸಿಡಿದೆದ್ದಿದ್ದಾರೆ. ಕಳೆದ ವಾರವಷ್ಟೇ ಹೈಕಮಾಂಡ್ ವಿರುದ್ಧ ಹಾಗೂ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಇದೀಗ ಸಂಸದರ ಕಚೇರಿ ಉದ್ಘಾಟನೆ ವೇಳೆಯೂ ಅಸಮಾಧಾನ ಹೊರಹಾಕಿದ್ದಾರೆ. ಅವರಾಡಿದ ಮಾತುಗಳ ವಿವರ ಇಲ್ಲಿದೆ.
ವಿಜಯಪುರ, ಜುಲೈ 9: ಬಿಜೆಪಿ ಸೇರಬೇಡಿ ಎಂದು ಬಹಳ ಜನ ದಲಿತರು ವಾದ ಮಾಡಿದ್ದರು. ಆದರೂ ಬೆಂಬಲ ಕೊಟ್ಟಿದ್ದಾರೆ. ದಲಿತನಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯಿಂದ ಏಳು ಚುನಾವಣೆಗಳಲ್ಲಿ ಗೆದ್ದು ಬಂದ ಏಕೈಕ ಸಂಸದನಾದರೂ ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ ಎಂದು ಹೈಕಮಾಂಡ್ ವಿರುದ್ಧ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಸಂಸದರ ಕಚೇರಿ ಉದ್ಘಾಟನೆ ಹಾಗೂ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನಗೆ ಮಂತ್ರಿಸ್ಥಾನ ನೀಡುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಅವಶ್ಯಕತೆ ಇರುವುದು ಜನರದ್ದು. ನಾನು ದೆಹಲಿಯಿಂದ ವಿಜಯಪುರಕ್ಕೆ ಮರಳಿದಾಗ ಜನ ನನಗೆ ‘ಥೂ’ ಎಂದು ಬೈದಿದ್ದರು ಎಂದರು.
‘ನಾವು ನಿಮಗೆ ಮೊದಲೇ ಹೇಳಿದ್ದೆವು, ಈ ಪಕ್ಷ ದಲಿತರ ವಿರೋಧಿ. ಬಿಜೆಪಿ ಪಕ್ಷ ಸೇರಬೇಡಿ’ ಎಂದು ಬಹಳ ಜನ ದಲಿತರು ವಾದ ಮಾಡಿದ್ದರು. ನನಗೋಸ್ಕರ ಅಲ್ಲದಿದ್ದರೂ ಜನರ ಒತ್ತಡವಂತೂ ಇದೆ. ಇದು ಎಂತಹ ನ್ಯಾಯ? ನೀವೇ ಹೇಳಿ. ದಲಿತನಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯಿಂದ ಏಳು ಚುನಾವಣೆಗಳಲ್ಲಿ ನಾನೊಬ್ಬನೇ ಗೆದ್ದು ಬಂದೆ. ಎಲ್ಲ ಮೇಲ್ವರ್ಗದ ಜಾತಿಯವರು ಸಚಿವರಾಗಿದ್ದಾರೆ. ದಲಿತರೇನು ಬಿಜೆಪಿಗೆ ಬೆಂಬಲ ನೀಡಿಲ್ಲವೇ ಎಂದು ಜಿಗಜಿಣಗಿ ಪ್ರಶ್ನಿಸಿದರು. ಈ ವಿಚಾರದಲ್ಲಿ ನನಗೆ ಮನಸ್ಸಿಗೆ ತುಂಬಾ ನೋವಿದೆ ಎಂದರು.
ಇದನ್ನೂ ಓದಿ: ನಾವು ದಲಿತರು, ನಮಗಾಗಿ ಯಾರೂ ಕೈ ಎತ್ತಿಲ್ಲ: ಬಿವೈ ವಿಜಯೇಂದ್ರ ನೇಮಕಕ್ಕೆ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ
ವಾರದ ಹಿಂದಷ್ಟೇ ಅವರು ಬಿಜೆಪಿಯ ಕೆಲವು ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರ ಒಳ ರಾಜಕೀಯದಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿತು ಎಂದು ಹೇಳಿದ್ದರು.ನಾನು ಸಚಿವನಾಗಬೇಕು ಎಂಬುದು ಉತ್ತರ ಕರ್ನಾಟಕದ ಜನರ ಮತ್ತು ನಮ್ಮ ಸಮಾಜದ ಜನರ ಬಯಕೆಯಾಗಿತ್ತು. ರಾಜ್ಯದ ನಾಯಕರು ಸಚಿವ ಸ್ಥಾನಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡುತ್ತಾರೆ ಎಂಬ ನಂಬಿಕೆ ಇತ್ತು. ಅವರಿಗೆ ಆ ಜವಾಬ್ದಾರಿಯೂ ಇತ್ತು. ಆದರೆ ಯಾರೊಬ್ಬರೂ ನನ್ನ ಪರ ಮಾತನಾಡಲಿಲ್ಲ. ಈ ವಿಷಯದಲ್ಲಿ ರಾಜ್ಯ ನಾಯಕರು ತಪ್ಪು ಮಾಡಿದ್ದಾರೆ ಎಂದು ಅವರು ಕಳೆದ ವಾರ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ