ವಿಜಯಪುರ: ಜ್ಞಾನಯೋಗಾಶ್ರಮದ ಜ್ಞಾನ ಜ್ಯೋತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ(82) (Siddeshwara Swamiji) ಅವರು ನಿನ್ನೆ (ಜ.2) ರಂದು ಸಾಯಂಕಾಲ 6 ಗಂಟೆಗೆ ದೈವಾದೀನರಾದರು. ನಿನ್ನೆಯಿಂದ ಶ್ರೀಗಳ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿವರೆಗು ಸುಮಾರು 15 ಲಕ್ಷ ಜನರು ಅಂತಿಮ ದರ್ಶನ ಪಡೆದಿದ್ದಾರೆ. ಇನ್ನೂ ಅಸಂಖ್ಯ ಭಕ್ತರು ದರ್ಶನ ಪಡೆಯಲು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆ ಅಂತಿಮ ದರ್ಶನ ಪಡೆಯಲು ಹೆಚ್ಚಿನ ಅವಕಾಶ ನೀಡುತ್ತೇನೆ. ಹೆಚ್ಚುವರಿಯಾಗಿ 2 ರಿಂದ 3 ಗಂಟೆ ವರೆಗೆ ದರ್ಶನಕ್ಕೆ ಕಾಲಾವಕಾಶ ವಿಸ್ತರಿಸುತ್ತೇವೆ. ಜಿಲ್ಲಾಡಳಿತಕ್ಕೆ ಎಲ್ಲ ಭಕ್ತರು ಕೂಡ ಸಹಕಾರ ನೀಡಬೇಕು ಎಂದು ವಿಜಯಪುರ ನಗರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಭಕ್ತರು ಶಾಂತಿಯಿಂದ ಶ್ರೀಗಳ ಅಂತಿಮ ದರ್ಶನ ಪಡೆಯುತ್ತಿದ್ದೀರಿ. ಎಲ್ಲಾ ಭಕ್ತರಿಗೂ ನಾನು ಧನ್ಯವಾದ ಹೇಳುತ್ತೇನೆ. ಸಂಜೆ 5.15ಕ್ಕೆ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸುತ್ತೇವೆ. ಸರ್ಕಾರಿ ಗೌರವದ ನಂತರವೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಶಾಂತಿಯುತವಾಗಿ ಅಂತಿಮ ದರ್ಶನ ಪಡೆಯಬೇಕು. ಜ್ಞಾನಯೋಗಾಶ್ರಮದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇಲ್ಲ. ಹೀಗಾಗಿ ಸೈನಿಕ ಶಾಲೆ ಆವರಣದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದೇವೆ ಎಂದರು.
ಇದನ್ನೂ ಓದಿ: ಮಣ್ಣಿನಿಂದ ಶ್ರೀಗಳ ಕಲಾಕೃತಿ ನಿರ್ಮಾಣ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು
ಎಲ್ಲ ಭಕ್ತರು ಅಂತಿಮ ದರ್ಶನ ಪಡೆದ ನಂತರ ಅಂತ್ಯಸಂಸ್ಕಾರ ಮಾಡಲಾಗುವುದು. ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿದ್ದೇಶ್ವರ ಸ್ವಾಮೀಜಿ ಭಕ್ತರು ಗಾಬರಿಯಾಗುವ ಅಗತ್ಯವಿಲ್ಲ. ಇಂದು ಅಂತಿಮ ದರ್ಶನ ಮುಗಿಯದಿದ್ದರೆ ನಾಳೆವರೆಗೆ ವಿಸ್ತರಣೆ ಮಾಡುತ್ತೇವೆ. ಪ್ರತಿಯೊಬ್ಬರೂ ಅಂತಿಮ ದರ್ಶನ ಪಡೆದ ನಂತರ ಶ್ರೀಗಳ ಪಾರ್ಥೀವ ಶರೀರವನ್ನು ಸೈನಿಕ ಶಾಲೆ ಆವರಣದಿಂದ ಸ್ಥಳಾಂತರಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಮುಸ್ಲಿಂ ಮನೆಗಳಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರ; ಶ್ರೀಗಳಿಗೆ ಮುಸ್ಲಿಂ ಮನೆಯಲ್ಲಿ ಪೂಜೆ
ಮಧ್ಯಾಹ್ನ 3.30ಕ್ಕೆ ದರ್ಶನ ಬಂದ್ ಆಗುತ್ತೆ ಅಂತಾ ಗಡಿ ಬಿಡಿ ಮಾಡಬೇಡಿ. ರಾತ್ರಿ 3.30 ಆದ್ರು ಎಲ್ಲರ ದರ್ಶನ ಆದ ಬಳಿಕ ಅಂತ್ಯಸಂಸ್ಕಾರ ಮಾಡುತ್ತೇವೆ. ಯಾರು ಓಡಿಕೊಂಡು ಗಡಿ ಬಿಡಿಯಲ್ಲಿ ಬರಬೇಡಿ. 3.30ಕ್ಕೆ ದರ್ಶನ ಬಂದ್ ಆಗುವುದಿಲ್ಲ ಎಂದು ಕನ್ಹೇರಿಮಠದ ಅದೃಶ್ಯನಂದ ಕಾಡಸಿದ್ದೇಶ್ವರ ಸ್ವಾಮೀಜಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ ಸ್ಥಳದಲ್ಲಿ ಮೈಕ್ನಲ್ಲಿ ಮನವಿ ಮಾಡುತ್ತಿದ್ದಾರೆ.
Published On - 3:04 pm, Tue, 3 January 23