Siddeshwara Swamiji Funeral: ಸಿದ್ದೇಶ್ವರ ಶ್ರೀ ಅಂತ್ಯಕ್ರಿಯೆಗೆ 5 ಕ್ವಿಂಟಾಲ್​ ಶ್ರೀಗಂಧ ಸಮರ್ಪಿಸಿದ ಭಕ್ತ, ಆಶ್ರಮದಲ್ಲಿ ಸಕಲ ಸಿದ್ದತೆ

ಜ್ಞಾನಯೋಗಾಶ್ರಮದ ಜ್ಞಾನ ಜ್ಯೋತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ಇಂದು ಸಾಯಂಕಾಲ ನಡೆಯಲಿದೆ.

Siddeshwara Swamiji Funeral: ಸಿದ್ದೇಶ್ವರ ಶ್ರೀ ಅಂತ್ಯಕ್ರಿಯೆಗೆ 5 ಕ್ವಿಂಟಾಲ್​ ಶ್ರೀಗಂಧ ಸಮರ್ಪಿಸಿದ ಭಕ್ತ, ಆಶ್ರಮದಲ್ಲಿ ಸಕಲ ಸಿದ್ದತೆ
ಅಂತ್ಯಕ್ರಿಯೆಗೆ ಸಕಲ ಸಿದ್ದತೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 03, 2023 | 5:04 PM

ವಿಜಯಪುರ: ಜ್ಞಾನಯೋಗಾಶ್ರಮದ ಜ್ಞಾನ ಜ್ಯೋತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ(82) (Siddeshwara swamiji) ಅವರು ನಿನ್ನೆ (ಜ.2) ರಂದು ಸಾಯಂಕಾಲ 6 ಗಂಟಗೆ ಶಿವನಲ್ಲಿ ಲೀನರಾಗಿದ್ದಾರೆ. ಇಂದು (ಜ.3) ಸಾಯಂಕಾಲ ಅಂತ್ಯಕ್ರಿಯೆ (Funeral) ನಡೆಯಲಿದೆ. ಇನ್ನೂ ಶ್ರೀಗಳು ಮೊದಲೇ ತಮ್ಮ ಅಂತ್ಯಕ್ರಿಯೆ ಯಾವ ರೀತಿ ನಡೆಯಬೇಕೆಂದು ಅಭಿವಂದನ ಪತ್ರ ಬರೆದಿದ್ದರು. ಅವರು ಪತ್ರದಲ್ಲಿ “ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯಿಂದ ಸ್ಪರ್ಶ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು” ಎಂದು ಬರೆದಿಟ್ಟಿದ್ದರು.

ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

ಜ್ಞಾನಯೋಗಾಶ್ರಮ ಆವರಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚಿತೆಗೆ ಶ್ರೀ ಗಂಧದ ಕಟ್ಟಿಗೆ ಬಳಸಿ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಈ ಶ್ರೀ ಗಂಧದ ಕಟ್ಟಿಗೆಗಳನ್ನು ಬಾಲಗೋಟೆ ಜಿಲ್ಲೆ ಜಮಖಂಡಿ ತಾಲೂಕು ಹುಲ್ಯಾಳ ಗ್ರಾಮದಲ್ಲಿರುವ ಶ್ರೀಗಳ ಶಿಷ್ಯರಾದ, ಹರ್ಷಾನಂದ ಮಹಾಸ್ವಾಮಿಜಿ ಅವರ ಶ್ರೀ ಗುರುದೇವಾಶ್ರಮದಿಂದ ತರಲಾಗಿದೆ. ಇನ್ನೂ ವಿಜಯಪುರ ಜಿಲ್ಲೆಯ ಕೋಲ್ಲಾರ ಪಟ್ಟಣದ ಸಿದ್ದಪ್ಪ ಬಾಲಗೊಂಡ ಎಂಬುವರು ತಮ್ಮ ಹೊಲದಲ್ಲಿ ಬೆಳೆದ 5 ಕ್ವಿಂಟಾಲ್​ ಶ್ರೀ ಗಂಧದ ಮರಗಳನ್ನು ಶ್ರೀಗಳ ಅಂತ್ಯಕ್ರಿಯೆಗೆ ಸಮರ್ಪಿಸಿದ್ದಾರೆ. ಬಸವನ ಬಾಗೇವಾಡಿ ಮನಗೂಳಿ ರೈತರು 10 ಕೇಜಿ ಆಕಳ ತುಪ್ಪ ನೀಡಿದ್ದಾರೆ. ಹಾಗೇ ಬಬಲೇಶ್ವರದ ಲಕ್ಷ್ಮೀ ಶಿರಮಗೊಂಡ ಎಂಬುವರು ಆಕಳ ಸಗಣಿಯಿಂದ ತಯಾರಿಸಿದ ಬೆರಣಿ ತಂದಿದ್ದಾರೆ.

ಇದನ್ನೂ ಓದಿ: ಅಂತಿಮ ದರ್ಶನಕ್ಕೆ ಹೆಚ್ಚುವರಿಯಾಗಿ 2-3 ಗಂಟೆವರೆಗೆ ವಿಸ್ತರಣೆ: ಸಿಎಂ ಬೊಮ್ಮಾಯಿ

 ಅಂತ್ಯಕ್ರಿಯೆಯಲ್ಲಿ 1,000 ಜನರಿಗೆ ಮಾತ್ರ ಅವಕಾಶ

ಅಂತ್ಯಕ್ರಿಯೆ ಸಕಲ ಸಿದ್ದತೆಗಾಗಿ ಜ್ಞಾನಯೋಗಾಶ್ರಮ ಆವರಣಕ್ಕೆ ಸ್ವಾಮೀಜಿಗಳು ಆಗಮಿಸಿದ್ದಾರೆ. ಶ್ರೀಗಳನ್ನು ಪೂರ್ವ ದಿಕ್ಕಿಗೆ ತಲೆ ಮಾಡಿ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಅಂತಿಮ ವಿಧಿವಿಧಾನ ನೆರವೇರುವ ಜಾಗದಲ್ಲಿ ರಂಗೋಲಿ ಬಿಡಿಸಲಾಗುತ್ತಿದೆ. ನಿರ್ಮಿಸಲಾದ ಆಯಾತಾಕಾರದ ಚಿತೆ ಕಟ್ಟೆ ಮೇಲೆ ಓಂ ಎಂದು ಬರೆಯಲಾಗಿದೆ. ಅಂತ್ಯಕ್ರಿಯೆ ನಡೆಯುವ ಬಲಭಾಗದಲ್ಲಿ ಸಿಎಂ ಸೇರಿ ವಿವಿಐಪಿಗಳು ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಎಡಭಾಗದಲ್ಲಿ ಸ್ವಾಮೀಜಿಗಳು ಕೂರುವುದಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದೆ. ಹಿಂಭಾಗದಲ್ಲಿ ವಿಐಪಿ ಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಪೊಲೀಸರು ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 1,000 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದ ಭಕ್ತರಿಗೆ ಎಲ್ಇಡಿ ಸ್ಕ್ರೀನ್ ಮೂಲಕ ನೋಡಲು ಅವಕಾಶ ನೀಡಲಾಗಿದೆ.

ಅಂತ್ಯಕ್ರಿಯೆ‌ ಪ್ರಕ್ರಿಯೆಗೆ ಭಾರೀ ಭದ್ರತೆ

ನಡೆದಾಡುವ ದೇವರ ಅಂತ್ಯಕ್ರಿಯೆ‌ ಪ್ರಕ್ರಿಯೆಗೆ ಬಾರೀ ಭದ್ರತೆ ನಿಯೋಜಿಸಲಾಗಿದೆ. ವಿವಿಐಪಿ, ವಿಐಪಿ, ವಿವಿಧ ಪಠಾಧೀಶರು ಆಗಮಿಸುವ ಹಿನ್ನಲೆ ಬಾರೀ ಭದ್ರತೆ ಕಲ್ಪಿಸಲಾಗಿದೆ. ಭದ್ರತೆಯಾಗಿ ಮೂವರು ಎಸ್ಪಿ, ನಾಲ್ವರು ಡಿವೈಎಸ್ಪಿ, ಆರು ಜನ ಇನ್ಸ್​​ಪೆಕ್ಟರ್, ಹದಿನಾಲ್ಕು ಜನ ಪಿಎಸೈ ಹಾಗೂ 400 ಪೊಲೀಸ್ ಕಾನ್ ಸ್ಟೇಬಲ್​​ಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Tue, 3 January 23