ಉಪಚುನಾವಣೆ ವೇಳೆ ಸಿಎಂಗೆ ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ; ವಚನಾನಂದ ಸ್ವಾಮೀಜಿ ವಿರುದ್ಧ ಯತ್ನಾಳ್ ಆರೋಪ
ಪಂಚಮಸಾಲಿ 3ನೇ ಪೀಠದ ಬಗ್ಗೆ ಅಸಮಾಧಾನ ಹೊರಹಾಕಿದ ಯತ್ನಾಳ್, ಯಾವ ಕಾರಣಕ್ಕೆ ಪಂಚಮಸಾಲಿ 3ನೇ ಪೀಠ ಮಾಡಿದ್ದಾರೆ? ಸಮುದಾಯದ ಉದ್ಧಾರಕ್ಕೆ ಪೀಠ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ವಿಜಯಪುರ: ಹಾನಗಲ್ ಉಪಚುನಾವಣೆ ವೇಳೆ ಮುಖ್ಯಮಂತ್ರಿಗೆ ಬ್ಲ್ಯಾಕ್ಮೇಲ್ (Blackmail) ಮಾಡಿ ಹಣ ವಸೂಲಿ ಮಾಡಿದ್ದಾರೆ ಅಂತ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ (Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್ವೈಗೂ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಬ್ಲ್ಯಾಕ್ಮೇಲ್ ಮಾಡಿ ಮಠಕ್ಕೆ 10 ಕೋಟಿ ಪಡೆದಿದ್ದಾರೆ. ತುಂಗಾ ಆರತಿ ನೆಪದಲ್ಲಿ 35 ಕೋಟಿ ರೂಪಾಯಿ ಪಡೆದಿದ್ದಾರೆ. 35 ಕೋಟಿ ರೂಪಾಯಿ ಏಕೆ ನೀಡಿದ್ದೀರೆಂದು ನಾನು ಪ್ರಶ್ನಿಸಿದ್ದೇನೆ. ಉದ್ಯೋಗ ಮೇಳ ಹರಿಹರ ಪೀಠದಲ್ಲಿ ಮಾಡಬಾರದು. ಉದ್ಯೋಗಕ್ಕಾಗಿ ಲಕ್ಷಾಂತರ ಯುವಕರು ಮಠಕ್ಕೆ ಆಗಮಿಸುತ್ತಾರೆ. ಇದನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಬ್ಲ್ಯಾಕ್ಮೇಲ್ ಮಾಡಲು ವಚನಾನಂದ ಸ್ವಾಮೀಜಿ ತಂತ್ರ ಹೆಣೆದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಪಂಚಮಸಾಲಿ 3ನೇ ಪೀಠದ ಬಗ್ಗೆ ಅಸಮಾಧಾನ ಹೊರಹಾಕಿದ ಯತ್ನಾಳ್, ಯಾವ ಕಾರಣಕ್ಕೆ ಪಂಚಮಸಾಲಿ 3ನೇ ಪೀಠ ಮಾಡಿದ್ದಾರೆ? ಸಮುದಾಯದ ಉದ್ಧಾರಕ್ಕೆ ಪೀಠ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ನಿರಾಣಿ ಪರ ಲಾಬಿ ಮಾಡುವುದಕ್ಕೆ 3ನೇ ಪೀಠ ಮಾಡಿದ್ದಾರೆ ಅಂತ ವಿಜಯಪುರದಲ್ಲಿ ಯತ್ನಾಳ್ ಕಿಡಿಕಾರಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರ್ಯವೈಖರಿ ಬಗ್ಗೆ ಮಾತನಾಡಿದ ಯತ್ನಾಳ್, ಗೃಹ ಸಚಿವರು ಖಡಕ್, ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ನಾನು ಹೋಮ್ ಮಿನಿಸ್ಟರ್ ಖಾತೆಯನ್ನ ಕೇಳಿಲ್ಲ. ಮಂತ್ರಿ ಸ್ಥಾನಕ್ಕಾಗಿ ತುಪ್ಪ ಸವರಲು ದೆಹಲಿಗೆ ಹೋಗಿಲ್ಲ. ರಾಜ್ಯದ ಸ್ವಾಮೀಜಿಗಳನ್ನ ದೆಹಲಿಗೆ ಕರೆದುಕೊಂದು ಹೋಗಿಲ್ಲ. ನಾಯಕರನ್ನ 5 ಸ್ಟಾರ್ ಹೋಟೆಲ್ನಲ್ಲಿರಿಸಿ ಮಜಾ ಮಾಡಿಸಿಲ್ಲ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಗರಂ ಆದರು. ಪಂಚಮಸಾಲಿ ಸಮಾಜ ನನ್ನ ಹಿಂದಿದೆ ಎಂದು ಅಡ್ಡಾಡುತ್ತಾನೆ. ಓರ್ವ ಸ್ವಾಮೀಜಿ ದೆಹಲಿಗೆ ಅಡ್ಡಾಡುತ್ತಾನೆ ಅಂತ ಹರಿಹರ ಪೀಠದ ವಚನಾನಂದ ಶ್ರೀ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಆರಗ ಜ್ಞಾನೇಂದ್ರ ಒಳ್ಳೆಯ ಸ್ವಭಾವದ ಮನುಷ್ಯ, ಆದರೆ ಗೃಹ ಖಾತೆ ಸೆಟ್ ಆಗಲ್ಲ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಶಾಸಕರು, ಹುಬ್ಬಳ್ಳಿಯ ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇನ್ನೊಂದು ವಿಷಯ ಬಂದಾಗ ಇದನ್ನು ಮರೆಯಬಾರದು. ಹುಬ್ಬಳ್ಳಿ ಗಲಾಟೆ ಘಟನೆ ರಾಜ್ಯದ ಮುಂದಿನ ಭವಿಷ್ಯದ್ದಾಗಿದೆ. ಆರಗಗೆ ಗೃಹ ಇಲಾಖೆಗೆ ನಿಭಾಯಿಸಲು ಆಗದಿದ್ದರೆ ಹೇಳಲಿ. ಸಿಎಂ ಬಸವರಾಜ ಬೊಮ್ಮಾಯಿಗೆ ಆರಗ ಜ್ಞಾನೇಂದ್ರ ತಿಳಿಸಲಿ. ಬೇರೆ ಯಾರಿಗಾದರೂ ಗೃಹ ಇಲಾಖೆ ನೀಡುವಂತೆ ಹೇಳಲಿ. ಕೆಲಸದ ಟೆನ್ಷನ್‌ನಲ್ಲಿ ರಾತ್ರಿ ನಿದ್ದೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ನನಗೆ ತಿಳಿಸಿದ್ದಾರೆ. ಅವರಿಗೆ ಬೇರೆ ಇಲಾಖೆ ವಹಿಸಿಕೊಳ್ಳಲು ಸಲಹೆ ನೀಡಿದ್ದೇನೆ. ಗೃಹ ಸಚಿವ ಆರಗ ಜ್ಞಾನೇಂದ್ರ ಒಳ್ಳೆಯ ಸ್ವಭಾವದ ಮನುಷ್ಯ. ಆದರೆ ಆರಗ ಜ್ಞಾನೇಂದ್ರಗೆ ಗೃಹ ಖಾತೆ ಸೆಟ್ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ದಿವ್ಯಾ ಹಾಗರಗಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಯತ್ನಾಳ್: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ದಿವ್ಯಾ ಹಾಗರಗಿ ವಿರುದ್ಧ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಆರೋಪ ಎದುರಿಸುತ್ತಿರುವ ದಿವ್ಯಾ ಹಿಂದೆ ದೊಡ್ಡ ಶಕ್ತಿಯೇ ಇದೆ. ದಿವ್ಯಾ ಹಾಗರಗಿಯ ಹಿಂದೆ ಮಾಜಿ ಮುಖ್ಯಮಂತ್ರಿ ಇದ್ದರು. ನೇಮಕಾತಿಯಲ್ಲಿ ಅಕ್ರಮ ಈ ಹಿಂದಿನಿಂದಲೂ ನಡೆದಿದೆ. BSY ಸಿಎಂ ಆದಾಗಿನಿಂದಲೂ ಅಕ್ರಮವಾಗಿದೆ. ದಿವ್ಯಾ ಹಾಗರಗಿ ಬಿಜೆಪಿಯವರಾದರೂ ಬಿಡಬಾರದು. ಮಾಜಿ ಮುಖ್ಯಮಂತ್ರಿ ಆಪ್ತರಾಗಿದ್ದರೂ ಸುಮ್ಮನೆ ಬಿಡಬಾರದು. ಇಂತಹವರಿಂದ ನಮ್ಮ ಸರ್ಕಾರದ ಇಮೇಜ್ ಹಾಳಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ನಮ್ಮ ಪಕ್ಷದಲ್ಲಿದ್ದರೆ ಉಚ್ಚಾಟನೆ ಮಾಡಬೇಕು. ದಿವ್ಯಾ ಒಡೆತನದ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೀವ್ಗೆ ತೆರಳಲಿದ್ದಾರಾ?- ಪ್ರಶ್ನೆಗೆ ಉತ್ತರ ನೀಡಿದ ಶ್ವೇತ ಭವನ
ಒಟಿಟಿಗೆ ಬರ್ತಿದೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ; ಕನ್ನಡ ಪ್ರೇಕ್ಷಕರಿಗೂ ಇಲ್ಲಿದೆ ಒಂದು ಗುಡ್ ನ್ಯೂಸ್
Published On - 10:19 am, Tue, 19 April 22