ವಿಜಯಪುರ ASI ನಿವೃತ್ತಿ: ಜೊತೆಗಿದ್ದ ಅಧಿಕಾರಿ, ಸಿಬ್ಬಂದಿ ಮಾಡಿದ್ದೇನು?

ಒಂದು ಕಾಲವಿತ್ತು.. ಕುದುರೆ ಏರಿ ಬಂದರೆ ಅವರನ್ನು ರಾಜ ಮಹಾರಾಜ, ಸಾಮಂತರು, ದಣಿಗಳು, ಶ್ರೀಮಂತರು ಎಂದೆಲ್ಲಾ ಕರೆಯಲಾಗುತ್ತಿತ್ತು. ಸಾರಿಗೆಗೆ ಕುದುರೆ ಅಂದಿನ ಕಾಲದಲ್ಲಿ ಅನಿವಾರ್ಯ ಹಾಗೂ ಪ್ರತಿಷ್ಠೆಯ ಸಂಕೇತವಾಗಿತ್ತು. ಅವರ ಮನೆಯಲ್ಲಿ ಎಷ್ಟು ಹಸುಗಳಿವೆ, ಎತ್ತುಗಳಿವೆ, ಕುದುರೆಗಳಿವೆ ಎಂಬುದರ ಮೇಲೆ ಅವರ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು. ಇಂದಿನ ಕಾಲದಲ್ಲಿ ಎಷ್ಟು ದುಬಾರಿ ಕಾರ್ ಗಳಿವೆ, ಬೈಕ್ ಗಳಿವೆ, ಜೀಪ್ ಗಳಿವೆ ಎಂದು ಅಳೆದಂತೆ. ಅದಿರ್ಲಿ ವಿಷಯ ಏನಪ್ಪಾ ಅಂದರೆ ನಿನ್ನೆ ರಾತ್ರಿ ವಿಜಯಪುರ ನಗರದ ಸಂಚಾರಿ ಪೊಲೀಸ್ ಠಾಣಾ […]

ವಿಜಯಪುರ ASI ನಿವೃತ್ತಿ: ಜೊತೆಗಿದ್ದ ಅಧಿಕಾರಿ, ಸಿಬ್ಬಂದಿ ಮಾಡಿದ್ದೇನು?
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 02, 2020 | 7:29 PM

ಒಂದು ಕಾಲವಿತ್ತು.. ಕುದುರೆ ಏರಿ ಬಂದರೆ ಅವರನ್ನು ರಾಜ ಮಹಾರಾಜ, ಸಾಮಂತರು, ದಣಿಗಳು, ಶ್ರೀಮಂತರು ಎಂದೆಲ್ಲಾ ಕರೆಯಲಾಗುತ್ತಿತ್ತು. ಸಾರಿಗೆಗೆ ಕುದುರೆ ಅಂದಿನ ಕಾಲದಲ್ಲಿ ಅನಿವಾರ್ಯ ಹಾಗೂ ಪ್ರತಿಷ್ಠೆಯ ಸಂಕೇತವಾಗಿತ್ತು. ಅವರ ಮನೆಯಲ್ಲಿ ಎಷ್ಟು ಹಸುಗಳಿವೆ, ಎತ್ತುಗಳಿವೆ, ಕುದುರೆಗಳಿವೆ ಎಂಬುದರ ಮೇಲೆ ಅವರ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು. ಇಂದಿನ ಕಾಲದಲ್ಲಿ ಎಷ್ಟು ದುಬಾರಿ ಕಾರ್ ಗಳಿವೆ, ಬೈಕ್ ಗಳಿವೆ, ಜೀಪ್ ಗಳಿವೆ ಎಂದು ಅಳೆದಂತೆ.

ಅದಿರ್ಲಿ ವಿಷಯ ಏನಪ್ಪಾ ಅಂದರೆ ನಿನ್ನೆ ರಾತ್ರಿ ವಿಜಯಪುರ ನಗರದ ಸಂಚಾರಿ ಪೊಲೀಸ್ ಠಾಣಾ ಆವರಣದಲ್ಲಿ ಮಧುಮಗನನ್ನು ಮೆರವಣಿಗೆ ಮಾಡಲು ಅಣಿಯಾದಂತೆ ಒಂದು ಕುದುರೆ ಶೃಂಗಾರ ಮಾಡಿಸಿಕೊಂಡು ನಿಂತಿತ್ತು. ಅರೇ ಕುದುರೆ ಅದ್ಯಾವ ರೂಲ್ಸ್ ಬ್ರೇಕ್ ಮಾಡಿ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತಿದೆ. ಕುದುರೆ ಗಾಡಿಗೇನು ಲೈಸನ್ಸ್ ಮಾಡಿದ್ದಾರಾ? ಇನ್ಸುರೆನ್ಸ್ ಮಾಡಬೇಕಾ? ಕುದುರೆಯೇನು ಲೈಸನ್ಸ್ ಇಲ್ಲದೆ ಬೈಕ್ ಓಡಿಸೋಕೋ ಅಥವಾ ಪೋರ್ ವೀಲ್ಹರ್ ವೆಹಿಕಲ್ ಓಡಿಸೋಕೆ ಹೋಗಿಯೇ ಸಂಚಾರಿ ಪೊಲೀಸರ ಕೈಗೆ ಸಿಲುಕಿದೆ ಅಂದುಕೊಂಡರೆ ಅದು ತಪ್ಪು. ಕುದುರೆ ಮಿರ ಮಿರ ಮಿಂಚುತ್ತಾ ಓರ್ವ ಸಾಧಕನ್ನು ಹೊತ್ತು ಮೆರವಣಿಗೆ ಮಾಡಲು ಅಣಿಯಾಗಿತ್ತು!

ಯಾವುದೋ ಯುವಕನ ಮದ್ವೆಯಿರಬೇಕು, ಸಂಪ್ರದಾಯದಂತೆ ಅಳಿಯನನ್ನು ಕುದುರೆ ಮೇಲೆ ಮೆರವಣಿಗೆ ಮಾಡಿಕೊಂಡು ಕರೆ ತರುತ್ತಾರೆ ಅಂತಾ ನೀವೆಲ್ಲಾ ಊಹೆ ಮಾಡಿಕೊಂಡರೆ ಅದೂ ಸುಳ್ಳು. ಈ ಕುದುರೆ ಮೆರವಣಿಗೆ ಮಾಡಲು ತಯಾರಾಗಿ ನಿಂತದ್ದು ಪ್ರಸಕ್ತ ಜೀವನದ ಅರ್ಧ ಭಾಗ ಪೊಲೀಸ್ ಸೇವೆ ಮಾಡಿ ನಿವೃತ್ತಿಯಾಗಿದ್ದ ಎಎಸ್ಐ ಒಬ್ಬರನ್ನು. ಹೌದು ನಗರ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಬಿ ಸಿ ಧಮಗೊಂಡ ಎಂಬುವವರು ನಿನ್ನೆ ಸೇವಾ ನಿವೃತ್ತಿಯಾದರು. 30 ವರ್ಷಗಳ ಪೊಲೀಸ್ ಇಲಾಖೆ ಸೇವೆಯಿಂದ ಬಿಡುಗಡೆಗೊಂಡರು. ಅವರನ್ನು ಹೃದಯಸ್ಪರ್ಶಿಯಾಗಿ ಬೀಳ್ಕೊಡಲು ಕುದುರೆಯೂ ಹಾಜರಾಗಿತ್ತು ಅಂದರೆ ನೀವು ನಂಬಲೇಬೇಕು

ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ವೇಳೆ ಆಧಿಕಾರಿಗಳು, ಸಹ ಸಿಬ್ಬಂದಿಗಳು ಒಂದು ಹಾರ ಹಾಕಿ ಶಾಲು ಹೊದಿಸಿ ಹಣ್ಣಿನ ಬೊಕೆ ನೀಡಿ ರಿಟೈರ್ ಆದ್ರಿ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಹಾಯಾಗಿರಿ.. ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ. ಆರೋಗ್ಯ ನಿಮ್ಮದಾಗಿರಲಿ ಎಂದು ಹಾರೈಸುತ್ತಾರೆ.

ಕೆಲಸದ ವಿಚಾರದಲ್ಲಿ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ರಮಿಸುವ ದಾಟಿಯಲ್ಲೇ ವಿದಾಯ ಹೇಳುತ್ತಾರೆ. ಬಟ್ ನಿನ್ನೆ ನಿವೃತ್ತಿಯಾದ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಬಿ ಸಿ ಧಮಗೊಂಡ ಅವರನ್ನು ಆಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು. ಎಎಸ್ಐ ತಮ್ಮ ನಿವೃತ್ತಿಯ ಬೀಳ್ಕೊಡುಗೆಯನ್ನು ಜೀವನ ಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ್ದು ವಿಶೇಷವಾಗಿತ್ತು. ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಆರೀಫ್ ಮಾಶಾಪುರೆ ಹಾಗೂ ಸಿಬ್ಬಂದಿ ತಮ್ಮ ಸಹಚರ ಆಧಿಕಾರಿಗೆ ಮನಸ್ಸು ಭಾರವಾಗುವಂತೆ ಬೀಳ್ಕೊಟ್ಟರು.

ಕುದುರೆಯನ್ನು ಅಲಂಕಾರ ಮಾಡಿ ಅವರ ಮೇಲೆ ಸೇವಾ ನಿವೃತ್ತಿಗೊಂಡ ಎಎಸ್ಐ ಬಿ ಸಿ ಧಮಗೊಂಡರನ್ನು ಕೂಡಿಸಿದರು. ನಗರದ ಗಾಂಧಿಚೌಕ್ ಬಳಿಯ ಸಂಚಾರಿ ಪೊಲೀಸ್ ಠಾಣಾ ಆವರಣದಲ್ಲಿ ಮೆರವಣಿಗೆ ಮಾಡಿಸಿದರು. ಸ್ವತಃ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಆರೀಫ್ ಮಾಶಾಪುರೆ, ಎಎಸ್ಐಗಳಾದ ವಿ ಜಿ ಬಿರಾದಾರ್ ಸ್ವತಃ ಕುದುರೆಯನ್ನು ಹಿಡಿದುಕೊಂಡು ಮೆರವಣಿಗೆ ಮಾಡಿದರು.

ಈ ಮೂಲಕ ತಮ್ಮ ಜೊತೆಗಾರ ಆಧಿಕಾರಿಗೆ ಬೀಳ್ಕೊಡುಗೆ ನೀಡಿದ್ದು ವಿಭಿನ್ನವಾಗಿತ್ತು. ತಮ್ಮ ಮೇಲಾಧಿಕಾರಿಗಳು ಹಾಗೂ ಸಂಗಡಿಗರು ಈ ರೀತಿ ಬೀಲ್ಕೊಟ್ಟಿದ್ದನ್ನು ಕಂಡ ನಿವೃತ್ತ ಎಎಸ್ಐ ಬಿ ಸಿ ಧಮಗೊಂಡ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಸಂತಸ ಪಟ್ಟರು. ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಆರೀಫ್ ಮುಶಾಪುರೆ, ಆರ್ ಎಸ್ ಸಾಲೀಮಠ, ಸಂಚಾರಿ ಪೊಲೀಸ್ ಪೇದೆ ಬಂದೇನವಾಜ್ ಸೇರಿದಂತೆ ಇತರರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

Published On - 7:01 pm, Tue, 2 June 20