ವೇಗ ಪಡೆದುಕೊಂಡ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ; 2024ರ ಫೆಬ್ರವರಿಯಲ್ಲಿ ಉದ್ಘಾಟನೆ ನಿರೀಕ್ಷೆ
Vijayapura airport; ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಶಿವಮೊಗ್ಗ ವಿಮಾನ ನಿಲ್ದಾಣಕ್ಕಿಂತ ಭಿನ್ನವಾಗಿ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಯಾದ ದಿನವೇ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸುವಂತಾಗಬೇಕು ಎಂದು ಪಾಟೀಲ್ ಸೂಚನೆ ನೀಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31 ರಿಂದ ವಿಮಾನ ಸಂಚಾರ ಆರಂಭವಾಗಿತ್ತು.
ಬೆಂಗಳೂರು, ಸೆಪ್ಟೆಂಬರ್ 22: ವಿಜಯಪುರ ವಿಮಾನ ನಿಲ್ದಾಣ (Vijayapura airport) ಕಾಮಗಾರಿಯನ್ನು ಈ ವರ್ಷದ ನವೆಂಬರ್‌ನೊಳಗೆ ಪೂರ್ಣಗೊಳಿಸಿ, ಫೆಬ್ರವರಿ 2024 ರೊಳಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ (MB Patil) ಶುಕ್ರವಾರ ಹೇಳಿದ್ದಾರೆ. ಒಮ್ಮೆ ಕಾರ್ಯಾರಂಭವಾದರೆ, ಒಂದು ವರ್ಷ ಅವಧಿಯ ಒಳಗೆ ಉದ್ಘಾಟನೆಗೊಳ್ಳಲಿರುವ ರಾಜ್ಯದ ಎರಡನೇ ವಿಮಾನ ನಿಲ್ದಾಣ ಇದಾಗಲಿದೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಂಬಿ ಪಾಟೀಲ ಅವರು ಗುರುವಾರ ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಚಾಲ್ತಿಯಲ್ಲಿರುವ ಯೋಜನೆಗಳ ಅನುಷ್ಠಾನಕ್ಕೆ ಶೀಘ್ರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವರ್ಷದ ನವೆಂಬರ್ ಒಳಗೆ ವಿಜಯಪುರ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಮತ್ತು ಫೆಬ್ರವರಿ 2024 ರ ಮೊದಲು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವ ಸಂಪೂರ್ಣ ಪ್ರಕ್ರಿಯೆಗಳನ್ನು ಖಾತರಿಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಶಿವಮೊಗ್ಗ ವಿಮಾನ ನಿಲ್ದಾಣಕ್ಕಿಂತ ಭಿನ್ನವಾಗಿ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಯಾದ ದಿನವೇ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸುವಂತಾಗಬೇಕು ಎಂದು ಪಾಟೀಲ್ ಸೂಚನೆ ನೀಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31 ರಿಂದ ವಿಮಾನ ಸಂಚಾರ ಆರಂಭವಾಗಿತ್ತು.
ಪ್ರಸ್ತುತ, ವಿಜಯಪುರಕ್ಕೆ ಹತ್ತಿರದ ವಿಮಾನ ನಿಲ್ದಾಣಗಳು ಬೆಳಗಾವಿ ಮತ್ತು ಹುಬ್ಬಳ್ಳಿ ಆಗಿದ್ದು, ಇವು ಸುಮಾರು 200 ಕಿಮೀ ದೂರದಲ್ಲಿದೆ. ಇವುಗಳನ್ನು ತಲುಪಲು ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.
ವಿಮಾನ ನಿಲ್ದಾಣದ ನಿರ್ದೇಶಕರು ಮತ್ತು ಟರ್ಮಿನಲ್ ಮ್ಯಾನೇಜರ್‌ನಂತಹ ಅಗತ್ಯ ಸಿಬ್ಬಂದಿಯೊಂದಿಗೆ ಭದ್ರತೆ ಮತ್ತು ಅಗ್ನಿಶಾಮಕ ಸುರಕ್ಷತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ವಿಮಾನ ನಿಲ್ದಾಣವನ್ನು ಮೊದಲು 2007 ರಲ್ಲಿ ಕರ್ನಾಟಕ ಸರ್ಕಾರವು ಅನುಮೋದಿಸಿತು. ಆದರೆ ಹಲವಾರು ಕಾರಣಗಳಿಂದ ವಿಳಂಬವಾಗಿದ್ದು, ಯೋಜನೆಯ ಕಾಮಗಾರಿ ವೇಗವನ್ನು ಪಡೆಯಲಿಲ್ಲ. 2020 ರಲ್ಲಿ, ಯೋಜನೆಯನ್ನು ಪುನರುಜ್ಜೀವನಗೊಳಿಸಲಾಯಿತು ಮತ್ತು ವಿಜಯಪುರದ ಹೊರವಲಯ ಮದಬಾವಿ ಗ್ರಾಮದ ಬಳಿ ಕಾಮಗಾರಿಯನ್ನು ಪ್ರಾರಂಭಿಸಲಾಯಿತು.
ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲ, ತಾಲಿಬಾನ್ ಸರ್ಕಾರವಿದೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ
ಯೋಜನಾ ವೆಚ್ಚ 347 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, 727 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಚತುಷ್ಪಥ ರಸ್ತೆ ನಿರ್ಮಾಣವೂ ನಡೆಯುತ್ತಿದೆ.
ಕರ್ನಾಟಕ ಸರ್ಕಾರದಿಂದಲೇ ನಿರ್ವಹಣೆ
ಕರ್ನಾಟಕ ಸರ್ಕಾರವು ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಬದಲು ತಾನೇ ನಿರ್ವಹಣೆ ಮಾಡಲು ನಿರ್ಧರಿಸಿದೆ. ಇತ್ತೀಚೆಗಷ್ಟೇ ಆರಂಭವಾದ ಶಿವಮೊಗ್ಗ ವಿಮಾನ ನಿಲ್ದಾಣವನ್ನೂ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ.
ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ವಿಜಯಪುರ, ಬಾಗಲಕೋಟೆ ಹಾಗೂ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ