ವಿಜಯಪುರ ಹಾಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಿತು ಗುರುವಂದನಾ ಕಾರ್ಯಕ್ರಮ! ವಿಶೇಷಗಳ ಸರಮಾಲೆಯೇ ಅಲ್ಲಿತ್ತು! ಲೇಖನ ಓದಿ
Sainik School: ಗುರು-ಶಿಷ್ಯರ ಸಂಬಂಧ ಕಟ್ಟಿಕೊಡುವ ನಿಟ್ಟಿನಲ್ಲಿ ಈ ಗುರುವಂದನಾ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣವಾಗಿದೆ. ಗುರು-ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸುವ ಈ ಕಾರ್ಯಕ್ರಮ ಯುವ ಪೀಳಿಗೆಗೂ ಸ್ಪೂರ್ತಿದಾಯಕವಾಗಲಿ -ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಡಾ ವಿಜಯ ಮಹಾಂತೇಶ ದಾನಮ್ಮನವರ ಆಶಯ
ವಿಜಯಪುರ ನಗರದ (Vijayapura) ಹೊರ ಭಾಗದಲ್ಲಿರೋ ಸೈನಿಕ ಶಾಲಾ (Sainik School) ಆವರಣದಲ್ಲಿ ಹಬ್ಬದ ವಾತಾವರಣ ಕಂಡು ಬಂದಿತ್ತು. ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ 1996 ನೇ ವರ್ಷದ ವಿದ್ಯಾರ್ಥಿಗಳೆಲ್ಲ (Students) ಅಲ್ಲಿ ನೆರೆದಿದ್ದರು. ಕೇವಲ ಹಾಜರಾಗಿದ್ದು ಮಾತ್ರವಲ್ಲ, ಅವರೆಲ್ಲಾ ಸೇರಿ ತಮಗೆ ವಿದ್ಯೆ ಬುದ್ಧಿ ಕಲಿಸಿದ ಗುರುಗಳಿಗೆ ಗುರುವಂದನೆ (Guruvandana) ಸಲ್ಲಿಸಲು ಅಣಿಯಾದರು. ಅದೇ ಕಾರಣ ಇಡೀ ಸೈನಿಕ ಶಾಲೆಯಲ್ಲಿ ಹಬ್ಬದ ಕಳೆ ಗಟ್ಟಿತ್ತು. ಸೈನಿಕ ಶಾಲೆಯ ಕಂಠಿ ಸಭಾಭವನ ಗುರುವಂದನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಠ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸೈನಿಕ ಶಾಲೆಯ 1996 ಬ್ಯಾಚ್ ವಿದ್ಯಾರ್ಥಿಗಳು ಗುರುಗಳ ಪಾದ ತೊಳೆದು ಪೂಜೆ ಮಾಡಿದರು:
ಸೈನಿಕ ಶಾಲೆ 1996 ಅಜಿತ್ ಬ್ಯಾಚಿನ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ ರೂವಾರಿ ಅದೇ ಬ್ಯಾಚಿನ ಸ್ಟೂಡೆಂಟ್ ಹಾಗೂ ವಿಜಯಪುರ ಜಿಲ್ಲಾಧಿಕಾರಿ ಡಾ ವಿಜಯ ಮಹಾಂತೇಶ ದಾನಮ್ಮನವರ ಎಂಬುದು ವಿಶೇಷವಾಗಿತ್ತು. ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಐಎಎಸ್ ಪರೀಕ್ಷೆ ಪಾಸ್ ಮಾಡಿ ಇದೀಗ ಡಾ ವಿಜಯ ಮಹಾಂತೇಶ ದಾನಮ್ಮನವರ (Vijayamahantesh B Danammanavar, IAS) ಅವರು ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ!
ಹಾಗಾಗಿ ಇವರ ನೇತೃತ್ವದಲ್ಲಿ ಅಜಿತ್ 1996 ಬ್ಯಾಚ್ ವಿದ್ಯಾರ್ಥಿಗಳೆಲ್ಲಾ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸೈನಿಕ ಶಾಲೆಯ ಕಂಠಿ ಸಭಾಭವನದಲ್ಲಿ ಎಲ್ಲರೂ ಹಾಜರಾಗಿ ವಿನೂತನವಾಗಿ ಗುರುಗಳಿಗೆ ಗುರು ಕಾಣಿಕೆ ಸಲ್ಲಿಸಿದರು. ತಮಗೆ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ರೂಪಿಸಿ ಉನ್ನತ ಹುದ್ದೆಯ ಆಧಿಕಾರಿಗಳನ್ನಾಗಿ, ಬಿಸಿನೆಸ್ ಸೇರಿದಂತೆ ವಿವಿಧ ರಂಗಗಳಲ್ಲಿ ಗುರುತರವಾದ ಹುದ್ದೆಯಲ್ಲಿ ಕೂಡುವಂತೆ ಮಾಡಿದ ಗುರುಗಳಿಗೆ ಎಲ್ಲರೂ ಸೇರಿ ಪಾದಪೂಜೆ ಮಾಡಿದರು.
ಕಾರ್ಯಕ್ರಮದಲ್ಲಿ 1996 ಬ್ಯಾಚಿನ ಶಿಕ್ಷಕರಾದ ಟಿ.ಜಿ. ಸುಬ್ರಮಣಿಯಂ, ಸಿ.ಕೆ. ರಾವ್, ಮಾಧವನ್ ಪೊನ್ನಣ್, ಅಸ್ಲಂ ಖಾನ್, ಮಣಿಕವಸಗಂ, ಸಿ.ವೈ. ಬಡಿಗೇರ, ಮಸಿಲ್ ಮಣಿ, ವಿ.ಎನ್. ಮನ್ನಾಪುರ, ಆರ್.ಕೆ. ಇನಾಂದಾರ, ಎಸ್.ಕೆ. ನಾಯಕ್, ಬಿ.ಎಸ್. ಹಂಚಿನಾಳ, ಸಿ.ಎನ್. ಜಾಧವ, ಡಿ. ವಿಜಯಕುಮಾರ, ಕೆ. ದಾಮೋದರ, ರಾಮಮೂರ್ತಿ, ಸಿ.ಎಂ. ಹಿರೇಮಠ, ಎಂ.ಎಚ್. ಸುರೇಶ, ರಾಮರಾವ್, ಎಸ್.ಬಿ. ಸತ್ತಿಕರ, ಎಂ.ಪಿ. ದೇಸಾಯಿ, ಎಂ.ಯು. ನಾಯಕ್, ಮೊಹಾಂತಿ, ಎಸ್.ವಿ. ಜೋಸೆಫ್, ಬಸವರಾಜ ಕಡ್ಲಿ ಹಾಗೂ ಎಸ್.ವೈ. ಪಾಟೀಲ ಅವರುಗಳಿಗೆ ಪಾದಪೂಜೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಕುಟುಂಬ ಸದಸ್ಯರೊಂದಿಗೆ ಬಂದು ಗುರುವಂದನೆ ಸಲ್ಲಿಸಿದ್ದು ಹೃದಯಸ್ಪರ್ಶಿ ಮತ್ತು ಕೃತಜ್ಞತಾಪೂರ್ವಕ ಸಂಗತಿ:
ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಜೀತ್ 1996 ಬ್ಯಾಚಿನ 85 ವಿದ್ಯಾರ್ಥಿಗಳು ಇಂದು ತಮ್ಮ ಕುಟುಂಬ ಪರಿವಾರದವರನ್ನೂ ಜೊತೆಗೆ ಕರೆದುಕೊಂಡು ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಿಜಕ್ಕೂ ಹೃದಯಸ್ಪರ್ಶಿ ಮತ್ತು ಕೃತಜ್ಞತಾಪೂರ್ವಕ ಸಂಗತಿಯಾಗಿತ್ತು. 1996 ರ ಬ್ಯಾಚ್ ನ ವಿದ್ಯಾರ್ಥಿಗಳೆಲ್ಲಾ ಪ್ರಸ್ತುತ ಯುರೋಪ್, ಯುಎಸ್, ಯುಕೆ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ದೇಶ-ವಿದೇಶಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ, ಭಾರತೀಯ ಸೇನೆಯಲ್ಲಿ ಮೂವರು, ಮೂವರು ಭಾರತೀಯ ವಾಯು ಸೇನೆಯಲ್ಲಿ, ಭಾರತೀಯ ಆಡಳಿತ ಸೇವೆಯಲ್ಲಿ, ಕರ್ನಾಟಕ ಆಡಳಿತ ಸೇವೆಯಲ್ಲಿ ಹಲವರು ವೈದ್ಯರಾಗಿ, ಶಿಕ್ಷಕರಾಗಿ, ರಾಜಕೀಯ, ಸಮಾಜ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 1996 ರ ಬ್ಯಾಚಿನ 85 ಹಳೆಯ ವಿದ್ಯಾರ್ಥಿಗಳು ಕುಟುಂಬ ಸಮೇತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಬ್ಬದ ವಾತಾವರಣವನ್ನೇ ಸೃಷ್ಟಿಸಿಬಿಟ್ಟರು. ಅದನ್ನು ಕಂಡ ಜನ ಧನ್ಯತಾಭಾವ ಅನುಭವಿಸಿದರು.
ಈ ಕಾರ್ಯಕ್ರಮ ಯುವ ಪೀಳಿಗೆಗೂ ಸ್ಪೂರ್ತಿದಾಯಕವಾಗಲಿ -ಭಾವನಾತ್ಮಕವಾಗಿ ಮಾತನಾಡಿದ ವಿಜಯಪುರ ಡಿಸಿ ವಿಜಯ ಮಹಾಂತೇಶ:
ಗುರುವಂದನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾವಾಗಿ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕೆ ಸುಭದ್ರ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಹಂತದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಶಿಕ್ಷಕರ ಪಾತ್ರ ಅನನ್ಯವಾಗಿದೆ. ಭವಿಷ್ಯ ರೂಪಿಸುವ ಶಿಕ್ಷಕರನ್ನು ನೆನಪಿಸಿಕೊಂಡು ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಗುರುವೂ, ತನ್ನ ಶಿಷ್ಯ ತನಗಿಂತ ಪಾಂಡಿತ್ಯಪೂರ್ಣ ವಿದ್ವಾಂಸರಾಗಬೇಕೆಂದು ಬಯಸುತ್ತಾರೆ. ಇಂತಹ ಗುರು-ಶಿಷ್ಯರ ಸಂಬಂಧವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ಗುರುವಂದನಾ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣವಾಗಿದೆ. ಗುರು-ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸುವ ಈ ಕಾರ್ಯಕ್ರಮ ಯುವ ಪೀಳಿಗೆಗೂ ಸ್ಪೂರ್ತಿದಾಯಕವಾಗಲಿ ಎಂದು ಹೇಳಿದರು.
ಕಳೆದ ವರ್ಷ 2021ರಲ್ಲೇ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದ 1996 ರ ಬ್ಯಾಚಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿತ್ತು. ಕೊರೊನಾದ ಕರಾಳ ಸಮ್ಮುಖದಲ್ಲಿ ಅನಿವಾರ್ಯವಾಗಿ ಪ್ರಸಕ್ತ ವರ್ಷ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, 1989ರಲ್ಲಿ 5ನೇ ತರಗತಿಗೆ ಸೈನಿಕ ಶಾಲೆಯಲ್ಲಿ ಪ್ರವೇಶ ಪಡೆದು, 1996 ರ ಈ ಬ್ಯಾಚಿನಲ್ಲಿಯೇ ನಾನೂ ಒಬ್ಬ ವಿದ್ಯಾರ್ಥಿಯಾಗಿದ್ದೆ ಎಂಬುದು ನನಗೆ ಹೆಮ್ಮೆಯಾಗುತ್ತಿದೆ. ನಾನು ಶಿಕ್ಷಣ ಪಡೆದ ಜಿಲ್ಲೆಯಲ್ಲಿಯೇ ನಾನು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು, ಈ ಜಿಲ್ಲೆಯ ಋಣಾನುಬಂಧವಾಗಿದೆ ಎಂದು ಡಾ. ವಿಜಯ ಮಹಾಂತೇಶ ಹೃದಯಾಂತರಾಳದಿಂದ ಹೇಳಿದಾಗ ಅಲ್ಲಿದ್ದವರು ಭಾವಪರವಶವಾಗಿದ್ದರು.
ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ
Published On - 4:50 pm, Thu, 29 December 22